ಶನಿವಾರ, ಜೂನ್ 12, 2021
28 °C
2021, 2022ರ ಷರತ್ತುಬದ್ಧ ಬಿಡ್‌

ಐಪಿಎಲ್‌ ಟೈಟಲ್‌ ಪ್ರಾಯೋಜಕತ್ವ: ಹೆಚ್ಚಿನ ಮೊತ್ತಕ್ಕೆ ಬಿಸಿಸಿಐ ಬೇಡಿಕೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆನ್‌ಲೈನ್ ಕ್ರೀಡಾ ವೇದಿಕೆಯಾಗಿರುವ ಡ್ರೀಮ್‌ ಇಲೆವನ್‌ ಈ ಬಾರಿಯ ಐಪಿಎಲ್‌ ಟೈಟಲ್ ಪ್ರಾಯೋಜಕತ್ವವನ್ನು ಪಡೆದುಕೊಂಡಿದ್ದರೂ ಮುಂದಿನ ಎರಡು ಆವೃತ್ತಿಗಳಿಗೆ ಪ್ರಾಯೋಜಕರಾಗಿ ಅದು ಮುಂದುವರಿಯುವ ಸಾಧ್ಯತೆಯಿಲ್ಲ. ಸದ್ಯ ಆ ಕಂಪನಿಯು‌ ಮಾಡಿಕೊಂಡಿರುವ ಒಪ್ಪಂದವು‌ ಬಿಸಿಸಿಐಗೆ ತೃಪ್ತಿ ತಂದಿಲ್ಲ ಎನ್ನಲಾಗಿದೆ. ಹೀಗಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಪ್ರಾಯೋಜಕ ಕಂಪನಿಯಾಗಿ ಡ್ರೀಮ್‌ ಇಲೆವನ್‌ಅನ್ನು ಮುಂದುವರಿಸಬೇಕೆ ಬೇಡವೇ ಎಂಬುದು, ಅದು ಬಿಡ್‌ ಮೊತ್ತವನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ.

‘ಡ್ರೀಮ್‌ ಇಲೆವನ್‌ ಕಂಪನಿಯು ಟೂರ್ನಿಯ‌ ಟೈಟಲ್‌ ಪ್ರಾಯೋಜಕತ್ವ ಪಡೆದಿರುವುದನ್ನು ಐಪಿಎಲ್‌ ಆಡಳಿತ ಮಂಡಳಿ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಮಂಗಳವಾರ ಖಚಿತಪಡಿಸಿದ್ದರೂ ಆದರೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಇದನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಒಪ್ಪಂದದ ಕುರಿತು ತೃಪ್ತಿ ಇಲ್ಲ ಎಂಬುದೇ ಇದಕ್ಕೆ ಕಾರಣ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಚೀನಾದ ವಿವೊ ಮೊಬೈಲ್ ಕಂಪೆನಿಯು ಈ ಬಾರಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಈಚೆಗೆ ಭಾರತ ಮತ್ತು ಚೀನಾ ಗಡಿಯಲ್ಲಿ ಸೇನೆಗಳ ನಡುವೆ ಆಗಿದ್ದ ಸಂಘರ್ಷದ ನಂತರ ಈ ವಿದ್ಯಮಾನ ನಡೆದಿತ್ತು.

‘ಡ್ರೀಮ್‌ ಇಲೆವನ್ ಕಂಪೆನಿಯು ಮೂರು ವರ್ಷಗಳ ಷರತ್ತುಬದ್ಧ ಬಿಡ್ ಪ್ರಕಾರ 2021 ಹಾಗೂ 2022ಕ್ಕೆ ‌ತಲಾ ₹240 ಕೋಟಿ ಬಿಸಿಸಿಐಗೆ ಪಾವತಿಸಬೇಕು. ‌ ಆದರೆ ಒಂದು ವೇಳೆ ವಿವೊ ಕಂಪನಿ ತಾನು ಪಾವತಿಸುತ್ತಿದ್ದ ವಾರ್ಷಿಕ ₹ 440 ಕೋಟಿ ಒಪ್ಪಂದದೊಂದಿಗೆ ಮತ್ತೆ ಪ್ರಾಯೋಜಕತ್ವಕ್ಕೆ ಮರಳದಿದ್ದರೆ, ಡ್ರೀಮ್‌ ಇಲೆವನ್‌ ಕಂಪೆನಿಯ ಬಿಡ್‌ಅನ್ನು ಮರುಪರಿಶೀಲಿಸುವ ಕುರಿತು ಕಂಪನಿ ಹಾಗೂ ಬಿಸಿಸಿಐ ಮಾತುಕತೆ ನಡೆಸುತ್ತಿವೆ’ ಎಂದು ಮೂಲಗಳು ತಿಳಿಸಿವೆ.

‘ಅತಿ ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದವರು ಪ್ರಾಯೋಜಕತ್ವ ಹಕ್ಕುಗಳನ್ನು ಪಡೆಯದೇ ಇರಬಹುದು ಎಂಬುದು ಸ್ಪಷ್ಟವಾಗಿದೆ (ಕಂಪನಿಗಳು ಬಿಡ್‌ಗೆ ಆಸಕ್ತಿ ತೋರುವ ವೇಳೆ ಬಿಸಿಸಿಐ ಈ ವಿಷಯವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿತ್ತು)‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರೀಮ್ ಇಲೆವನ್‌ ಅತಿ ಹೆಚ್ಚು ಮೊತ್ತದ ಬಿಡ್‌ ಮಾಡಿದೆ. ಆ ಕಂಪನಿ ಹಕ್ಕುಗಳನ್ನು ಪಡೆಯಲು ಮುಂಚೂಣಿಯಲ್ಲಿಯೂ ಇದೆ. ಆದರೆ ಅಧಿಕೃತವಾಗಿ ಘೋಷಣೆಯಾಗುವ ಮುನ್ನ ಇನ್ನೂ ಕೆಲ ವಿಚಾರಗಳು ಇತ್ಯರ್ಥವಾಗಬೇಕಿದೆ‘ ಎಂದು ಅಧಿಕಾರಿ ಹೇಳಿದರು.

ಎರಡನೇ ಹಾಗೂ ಮೂರನೇ ವರ್ಷಗಳ ಪ್ರಾಯೋಜಕತ್ವಕ್ಕೆ ಡ್ರೀಮ್‌ ಇಲೆವನ್‌ ಇನ್ನೂ ಹೆಚ್ಚಿನ ಮೊತ್ತವನ್ನು ನೀಡಬೇಕು ಎಂಬುದರ ಕುರಿತು ಬಿಸಿಸಿಐ ಹಾಗೂ ಕಂಪನಿಯ ನಡುವೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

‘ಒಪ್ಪಂದ ಇನ್ನೂ ಅಂತಿಮವಾಗಿಲ್ಲ. ಮಾತುಕತೆ ನಡೆಯುತ್ತಿದೆ. ₹ 220 ಕೋಟಿ ಮೊತ್ತವು ಈ ವರ್ಷಕ್ಕೆ ಆಗಬಹುದು. ಆದರೆ ಇದು ಮೂರು ವರ್ಷಗಳ ಷರತ್ತುಬದ್ಧ ಬಿಡ್‌ ಆಗಿದೆ. ವಿವೊ ಜೊತೆ ನಮ್ಮ ಒಪ್ಪಂದ ಇನ್ನೂ ಇದೆ. ನಾವು ₹440 ಕೋಟಿ ಮೊತ್ತವನ್ನೇ ಪಡೆಯುವುದಾದರೆ, ₹240 ಕೋಟಿಗೆ ಯಾಕೆ ಒಪ್ಪಿಕೊಳ್ಳಬೇಕು? ಎಂದು ಅಧಿಕಾರಿ ನುಡಿದರು.

ಈ ಸನ್ನಿವೇಶದಲ್ಲಿ ಡ್ರೀಮ್‌ ಇಲೆವನ್‌ ಮುಂದೆ ಎರಡು ಆಯ್ಕೆಗಳಿವೆ. ಒಂದು ವರ್ಷ ಅಥವಾ ನಾಲ್ಕು ತಿಂಗಳು 13 ದಿನಗಳಿಗೆ ಸೀಮಿತವಾದ ₹ 222 ಕೋಟಿ ಒಪ್ಪಂದ ಅಥವಾ 2021 ಮತ್ತು 2022ರ ಷರತ್ತುಬದ್ಧ ಮೊತ್ತವನ್ನು ಹೆಚ್ಚಿಸುವುದು. ಇದನ್ನು ಕಂಪನಿಯ ವಿವೇಚನೆಗೆ ಬಿಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು