ಶನಿವಾರ, ಅಕ್ಟೋಬರ್ 31, 2020
25 °C

PV Web Exclusive: ಕೊರೊನಾ ವೈರಸ್‌ ಮರೆಸಿದ ಐಪಿಎಲ್ ವೈರಲ್‌...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

’ಹಾರ್ದಿಕ್ ಪಾಂಡ್ಯ ನಿಜಕ್ಕೂ ಆತ್ಮನಿರ್ಭರ ವ್ಯಕ್ತಿ. ತನ್ನ ವಿಕೆಟ್‌ ತಾನೇ ಉರುಳಿಸಿಕೊಳ್ಳುತ್ತಾನೆ..‘

ಅಬುಧಾಬಿಯಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ ಹಿಟ್‌ ವಿಕೆಟ್ ಆದಾಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದ ಸಂದೇಶ ಇದು. 

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣಗಳಲ್ಲಿ ರೋಚಕ ಪಂದ್ಯಗಳು ನಡೆಯುತ್ತಿವೆ. ಟಿ.ವಿಯಲ್ಲಿ ನೇರಪ್ರಸಾರ ವೀಕ್ಷಿಸುತ್ತಿರುವ ಅಭಿಮಾನಿಗಳ ’ಕ್ರಿಯೆಟಿವಿಟಿ‘ಯೂ ಉದ್ದೀಪನಗೊಳ್ಳುತ್ತಿದೆ.

ಪ್ರತಿಯೊಂದು ಪಂದ್ಯದ ನಂತರ ಟ್ವಿಟರ್, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ ತಾಣಗಳಲ್ಲಿ ಕಮೆಂಟ್‌ಗಳ ಮಹಾಪೂರವೇ ಹರಿಯುತ್ತಿದೆ. ಅದರಲ್ಲಿ ಹಾಸ್ಯ, ಸಿಟ್ಟು, ವ್ಯಂಗ್ಯಭರಿತ ಸಂದೇಶಗಳಿಗೆ ಅಪಾರ ಜನಮನ್ನಣೆ ಸಿಗುತ್ತಿದೆ. ಚಿತ್ರಗುಚ್ಛಗಳು, ಮೀಮ್‌ಗಳು ಮತ್ತು ಸಂದೇಶಗಳು  ಪುಂಖಾನುಪುಂಖವಾಗಿ ಬರುತ್ತಿವೆ. ಅಭಿಮಾನಿಗಳು, ಹಾಲಿ–ಮಾಜಿ ಕ್ರಿಕೆಟಿಗರು ಈ ಗುಂಪಿನಲ್ಲಿದ್ದಾರೆ.  ತಮ್ಮ ನೆಚ್ಚಿನ ತಾರೆಗಳು ನಿರೀಕ್ಷೆಗೆ ತಕ್ಕಂತೆ  ಆಡದಿದ್ದಾಗ ಅಥವಾ ಚೆನ್ನಾಗಿ ಆಡಿದಾಗ ಬರುತ್ತಿರುವ ಪ್ರತಿಕ್ರಿಯೆಗಳು ಹೊಸ ಲೋಕವನ್ನೇ ಸೃಷ್ಟಿಸಿವೆ.  ಕೊರೊನಾ ವೈರಸ್‌ ಹಾವಳಿಯಿಂದ ನೊಂದವರು, ಸತ್ತವರ ಸಂಖ್ಯೆಗಳು ರಾರಾಜಿಸುತ್ತಿದ್ದ ಜಾಲತಾಣಗಳಲ್ಲಿ ಈಗ ಐಪಿಎಲ್‌ ಮೀಮ್‌ಗಳು, ವ್ಯಂಗ್ಯದ ಸಂದೇಶಗಳು, ಸ್ಪೂರ್ತಿದಾಯಕ ವಾಕ್ಯಗಳೂ ವೈರಲ್ ಆಗುತ್ತಿವೆ.

ಇದೀಗ ಇನ್ನೂ ಹತ್ತು ಪಂದ್ಯಗಳಷ್ಠೇ ಮುಗಿದಿವೆ. ಈಗಾಗಲೇ ಲಕ್ಷ ಲಕ್ಷ ಸಂಖ್ಯೆ ಸಂದೇಶಗಳು ಹರಿದಾಡುತ್ತಿವೆ. ನವೆಂಬರ್ 10ರವರೆಗೆ ಇನ್ನಷ್ಟು ರಸದೌತಣವನ್ನು ಈ ತಾಣಗಳು ಉಣಬಡಿಸುವುದರಲ್ಲಿ ಸಂದೇಹವೇ ಇಲ್ಲ. ರೋಹಿತ್ ಶರ್ಮಾ ದಪ್ಪ ಆಗಿರೋ ಬಗ್ಗೆ, ವಿರಾಟ್ ಕೊಹ್ಲಿ ಕ್ಯಾಚ್ ಕೈಚೆಲ್ಲಿದಾಗ, ಧೋನಿ ನಿಧಾನವಾಗಿ ಬ್ಯಾಟಿಂಗ್ ಮಾಡಿದಾಗ, ಆರ್‌ಸಿಬಿ ಪಂದ್ಯ ಗೆದ್ದಾಗ, ಹಾರ್ದಿಕ್ ಹಿಟ್‌ ವಿಕೆಟ್‌ ಆದಾಗ ಹೀಗೆ ಹಲವಾರು ವಿಷಯಗಳ ಕುರಿತ ಸಂದೇಶಗಳು ರಾರಾಜಿಸುತ್ತಿವೆ.

ಅಂತಹ ಕೆಲವು ಸಂದೇಶಗಳ ಝಲಕ್ ಇಲ್ಲಿವೆ;

* 2020ರಲ್ಲಿ ಬಹಳಷ್ಟು ಅನಿರೀಕ್ಷಿತ ವಿಷಯಗಳು ಘಟಿಸುತ್ತವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪಂದ್ಯಗಳನ್ನೂ ಗೆಲ್ಲುತ್ತಿದೆ..!

All unusual things happening in 2020, RCB winning is one of them.#RCBVsSRH

* ಡಿಯರ್ ಆರ್‌ಸಿಬಿ...ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ.. ಬಂದು ಹೋಗುವ ನಡುವೆ ಒಂದ್‌ ಸಲ ಕಪ್ ಎತ್ತಲೇ..ಎತ್ತಲೇ..ಎತ್ತಲೇ..

* ಇನ್ನು ಕೆಲವು ತಿಂಗಳುಗಳಲ್ಲಿ ತಾಯಿಯಾಗಲಿರುವ ಅನುಷ್ಕಾ ಶರ್ಮಾ ತಮ್ಮ ಮಗುವನ್ನು ಎತ್ತಿಕೊಳ್ಳಲು

ವಿರಾಟ್‌ಗೆ ಕೊಡಲ್ಲ ಬಿಡಿ..!    

–ಕಿಂಗ್ಸ್‌ ಇಲೆವನ್ ಪಂಜಾಬ್ ವಿರುದ್ಧ ಕೆ.ಎಲ್‌. ರಾಹುಲ್ ಅವರ ಎರಡು ಕ್ಯಾಚ್‌ಗಳನ್ನು  ಆರ್‌ಸಿಬಿ ನಾಯಕ ಕೈಚೆಲ್ಲಿದಾಗ ಭಾರೀ ಸದ್ದು ಮಾಡಿದ ಕನ್ನಡ ಚಿತ್ರಸಂದೇಶಗಳಿವು. ವಿರಾಟ್ ಚಿತ್ರವೂ ಗಮನ ಸೆಳೆಯುವಂತಿತ್ತು.

* ಭಾಯ್..ಈತನ ಆರಂಭವೇ ಮುಕ್ತಾಯವಾಯಿತಲ್ಲಾ..!

– ಮುಂಬೈ ಎದುರಿನ ಪಂದ್ಯದಲ್ಲಿ ವಿರಾಟ್ ಮೂರು ರನ್‌ಗಳಿಗೆ ಔಟಾದಾಗ ಪ್ರಕಟವಾದ ಮೀಮ್

* ’ಮಹೇಂದ್ರಸಿಂಗ್ ಧೋನಿಯವರೇ ನೀವು ವಾರ್ಮ್‌ ಆರ್ಪ್‌ ಮಾಡುವುದಾದರೆ ಪಂದ್ಯಕ್ಕಿಂತ ಮೊದಲೇ ನೆ

ಟ್ಸ್‌ನಲ್ಲಿ ಮುಗಿಸಿಕೊಂಡು ಬನ್ನಿ, ಪಂದ್ಯದ ಕೊನೆಯ ಹಂತದಲ್ಲಿ ಅಂತಹ ಪದ್ಧತಿ ಬೇಡ‘

–ಇದು ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುವಾಗ  ಆರಂಭದಲ್ಲಿ ಸೆಟ್ ಆಗಲು ಹೆಚ್ಚು ಎಸೆತ ತೆಗೆದುಕೊಂಡಾಗ ಅಭಿಮಾನಿಯೊಬ್ಬರು ಮಾಡಿದ್ದ ಟ್ವೀಟ್

* ಧೋನಿ ಎಷ್ಟೋಂದು ತ್ಯಾಗಮಯಿ. ತಮ್ಮ ಎಂದಿನ 11ನೇ  ಕ್ರಮಾಂಕವನ್ನು ಬಿಟ್ಟು ರಾತ್ರಿ ಕಾವಲುಗಾರನಾಗಿ ಬಂದರು. ಸತತ ಮೂರು ಸಿಕ್ಸರ್ ಹೊಡೆದರು. ಅಭಿಮಾನಿಗಳ ಮನ ಗೆದ್ದರು!

– ಏಳನೇ ಕ್ರಮಾಂಕದಲ್ಲಿ ಆಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಧೋನಿ ಬಗ್ಗೆ ಅಭಿ

ಮಾನಿಯೊಬ್ಬರ ಪೋಸ್ಟ್

* ನಿನ್ನೆ (ಸೆ 28) ಸೂಪರ್‌ ಓವರ್‌ನಲ್ಲಿ ಮುಕ್ತಾಯವಾದ ಪಂದ್ಯ (ಆರ್‌ಸಿಬಿ –ಮುಂಬೈ ಇಂಡಿಯನ್ಸ್‌) ನೋಡಿ ಕ್ರಿಕೆಟ್‌ ಮೇಲಿನ ಪ್ರೀತಿ ದುಪ್ಪಟ್ಟಾಯಿತು. ಅಬ್ಬಾ ಎಂಥಾ ಪಂದ್ಯ ಅದು..ಏನ್‌ ಐಪಿಎಲ್ ಇದು..‘

– ವಿಶ್ವ ಅಥ್ಲೆಟಿಕ್ಸ್‌ನ ನವತಾರೆ ಯೊಹಾನ್ ಬ್ಲೇಕ್‌ ಅವರು ಟ್ವೀಟ್ ಮಾಡಿರು ವಿಡಿಯೊ ಸಂದೇಶ  ಇದು. 

* ಸ್ಟಂಪ್‌ಗಳ ಮೈಕ್‌ಗಳು ಇರುತ್ತವೇ. ಹುಷಾರಾಗಿ ಮಾತಡಿಕೊಳ್ರೋ ಹುಡುಗ್ರಾ..

– ಪಂದ್ಯವೊಂದರಲ್ಲಿ ಕಿಂಗ್ಸ್‌ ಇಲೆವನ್ ತಂಡದ ನಾಯಕ ಕೆ.ಎಲ್‌. ರಾಹುಲ್‌ ಅವರ ಪದಬಳಕೆಯ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡಗಣೇಶ್ ಟ್ವೀಟ್.

* ಗುರುತ್ವಾಕರ್ಷಣೆ ತತ್ವವನ್ನೇ ಮರೆಸಿಬಿಟ್ಟನಲ್ಲಾ ಈ ವ್ಯಕ್ತಿ. ಅದ್ಭುತವಾದ ಫೀಲ್ಡಿಂಗ್ ಇದು ..ಗುಡ್ ಸೇವ್..

–ನಿಕೊಲಸ್ ಪೂರನ್ ಫೀಲ್ಡಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಇದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು