ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಬಾರಿಯ ಚಾಂಪಿಯನ್ ವಿಂಡೀಸ್ ತಂಡವನ್ನು ವಿಶ್ವಕಪ್‌ನಿಂದ ಹೊರದಬ್ಬಿದ ಐರ್ಲೆಂಡ್

Last Updated 21 ಅಕ್ಟೋಬರ್ 2022, 10:51 IST
ಅಕ್ಷರ ಗಾತ್ರ

ಹೋಬರ್ಟ್‌: ಐರ್ಲೆಂಡ್‌ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ ಮಾಜಿ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡ ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರ ಬಿದ್ದಿದೆ.ಇಲ್ಲಿನ ಬೆಲ್ಲೆರೈವ್‌ ಓವಲ್‌ ಕ್ರೀಡಾಂಗಣದಲ್ಲಿ 9 ವಿಕೆಟ್ ಅಂತರದ ಜಯ ಸಾಧಿಸಿದ ಐರ್ಲೆಂಡ್‌ ಟೂರ್ನಿಯ ಸೂಪರ್‌ 12ರ ಹಂತಕ್ಕೆ ಅರ್ಹತೆ ಗಿಟ್ಟಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 146 ರನ್‌ ಕಲೆಹಾಕಿತು. ಮಧ್ಯಮ ಕ್ರಮಾಂಕದ ಬ್ರೆಂಡನ್‌ ಕಿಂಗ್‌ (ಔಟಾಗದೆ 62 ರನ್‌) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

ಈ ಸ್ಪರ್ಧಾತ್ಮಕ ಗುರಿಯು ಐರ್ಲೆಂಡ್‌ ಪಡೆಗೆ ಸವಾಲೇ ಆಗಲಿಲ್ಲ. ಇನಿಂಗ್ಸ್‌ ಆರಂಭಿಸಿದ ಅನುಭವಿ ಪೌಲ್‌ ಸ್ಟರ್ಲಿಂಗ್ ಮತ್ತು ನಾಯಕ ಆ್ಯಂಡ್ರೋ ಬಲ್ಬಿರ್ನೆ ಮೊದಲ ವಿಕೆಟ್‌ಗೆ ಕೇವಲ 7.3 ಓವರ್‌ಗಳಲ್ಲೇ 73 ರನ್ ಕಲೆಹಾಕಿತು. 37 ರನ್‌ ಗಳಿಸಿದ್ದ ವೇಳೆಆ್ಯಂಡ್ರೋ ಔಟಾದರು. ನಂತರವೂ ಸೋಗಸಾಗಿ ಬ್ಯಾಟ್‌ ಬೀಸಿದ ಪೌಲ್‌, ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ ಲಾರ್ಕನ್‌ ಟಕ್ಕರ್‌ ಜೊತೆಗೂಡಿ 60 ಎಸೆತಗಳಲ್ಲಿ 77 ರನ್‌ ಚಚ್ಚಿದರು.

ಪೌಲ್‌ 48 ಎಸೆತಗಳಲ್ಲಿ 66 ರನ್ ಬಾರಿಸಿದರೆ,ಲಾರ್ಕನ್‌ 35 ಎಸೆತಗಳಲ್ಲಿ 45 ರನ್‌ ಗಳಿಸಿದರು. ಪೌಲ್‌ಗೆ ಇದು ಅಂತರರಾಷ್ಟ್ರೀಯ ಟಿ20ಯಲ್ಲಿ 21ನೇ ಅರ್ಧಶತಕ.

ಈ ಜಯದೊಂದಿಗೆ ಐರ್ಲೆಂಡ್‌ ಎರಡನೇ ಬಾರಿಗೆ ವಿಶ್ವಕಪ್‌ನ ಎರಡನೇ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. 2009ರಲ್ಲಿ ಮೊದಲ ಬಾರಿಗೆ ಸೂಪರ್‌ 8ರ ಹಂತದಲ್ಲಿ ಸೆಣಸಾಟ ನಡೆಸಿತ್ತು.

ಇತ್ತಎರಡು ಬಾರಿ ವಿಶ್ವ ಚಾಂಪಿಯನ್‌ ವಿಂಡೀಸ್‌ ಪಡೆ, ಅರ್ಹತಾ ಸುತ್ತಿನಿಂದಲೇ ನಿರ್ಗಮಿಸಿದೆ. ಈತಂಡ 2012 ಹಾಗೂ 2016ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಇಂದಿನ ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್‌ ಹಾಗೂ ಜಿಂಬಾಬ್ವೆ ತಂಡಗಳು ಸೆಣಸಾಟ ನಡೆಸುತ್ತಿವೆ. ಗೆದ್ದ ತಂಡವು ಐರ್ಲೆಂಡ್‌ ಜೊತೆ 'ಬಿ' ಗುಂಪಿನಿಂದ 'ಸೂಪರ್‌ 12' ಹಂತಕ್ಕೆ ಪ್ರವೇಶ ಪಡೆಯಲಿವೆ.

'ಸೂಪರ್‌ 12' ಹಂತದ ಪಂದ್ಯಗಳು ಶನಿವಾರ (ಅಕ್ಟೋಬರ್‌ 22 ರಿಂದ) ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಸೆಣಸಲಿವೆ. ಅದೇ ದಿನ ನಡೆಯುವ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ಅಫ್ಗಾನಿಸ್ತಾನ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT