ಭಾನುವಾರ, ಆಗಸ್ಟ್ 1, 2021
27 °C

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಇರ್ಫಾನ್ ಆಸಕ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಶ್ರೀಲಂಕಾದಲ್ಲಿ ಈ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳಲಿರುವ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಆಸಕ್ತಿ ತೋರಿದ್ದಾರೆ. ಈ ವಿಷಯವನ್ನು ಇಎಸ್‌ಪಿಎನ್ ಕ್ರಿಕ್‌ ಇನ್ಫೊ ವೆಬ್‌ಸೈಟ್ ಬಹಿರಂಗ ಮಾಡಿದೆ.

ಆಗಸ್ಟ್ 28ರಿಂದ ಟೂರ್ನಿ ನಡೆಯಲಿದೆ. ಒಟ್ಟು 70 ವಿದೇಶಿ ಆಟಗಾರರು ಈಗಾಗಲೇ ಆಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಪೈಕಿ ಇರ್ಫಾನ್ ಪಠಾಣ್ ಗಮನಾರ್ಹ ಆಟಗಾರ ಎಂದು ಹೇಳಲಾಗಿದೆ.

ಈ ವರ್ಷದ ಜನವರಿಯಲ್ಲಿ ಇರ್ಫಾನ್ ಪಠಾಣ್ ನಿವೃತ್ತಿ ಘೋಷಿಸಿದ್ದರು. ಅವರನ್ನು ಲಂಕಾ ಪ್ರೀಮಿಯರ್ ಲೀಗ್‌ನ ಆಟಗಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದು ಐದು ಫ್ರಾಂಚೈಸ್‌ಗಳ ಪೈಕಿ ಒಂದು, ತನ್ನ ತಂಡದ ಪ್ರಮುಖ ಆಟಗಾರ ಎಂದು ಸೇರಿಸಿಕೊಳ್ಳಲು ಈಗಾಗಲೇ ಮುಂದೆ ಬಂದಿದೆ. ಆಟಗಾರರ ಪಟ್ಟಿಯನ್ನು ಮತ್ತು ಫ್ರಾಂಚೈಸ್ ಮಾಲೀಕರುಗಳ ಮಾಹಿತಿಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಇನ್ನೂ ಬಿಡುಗಡೆಗೊಳಿಸಲಿಲ್ಲ.

ಸರ್ಕಾರದಿಂದ ಕೆಲವು ಕೆಲಸಗಳಿಗೆ ಅನುಮತಿ ಪಡೆದುಕೊಳ್ಳುವ ಕಾರ್ಯವೂ ಉಳಿದಿದೆ ಎಂದು ಕೂಡ ಹೇಳಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯುವ ಕಳೆದ ಸೋಮವಾರ ನಡೆದಿದ್ದ ಕಾರ್ಯಕಾರಿ ಸಮಿತಿಯಲ್ಲಿ ಅನುಮತಿ ನೀಡುವುದರೊಂದಿಗೆ ಲೀಗ್‌ಗೆ ಸಂಬಂಧಿಸಿದ ಚಟುವಟಿಕೆ ಗರಿಗೆದರಿದೆ.  

ಕೊಲಂಬೊ, ಕ್ಯಾಂಡಿ, ಗಾಲ್, ಡಂಬುಲಾ ಮತ್ತು ಜಾಫ್ನಾ ಫ್ರಾಂಚೈಸ್‌ಗಳು ಟೂರ್ನಿಯಲ್ಲಿ ತಂಡಗಳನ್ನು ಕಣಕ್ಕೆ ಇಳಿಸಲಿವೆ. ಭಾರತದ ಸಕ್ರಿಯ ಆಟಗಾರರಿಗೆ ವಿದೇಶದಲ್ಲಿ ನಡೆಯುವ ಲೀಗ್‌ನಲ್ಲಿ ಆಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮತಿ ನೀಡಲಿಲ್ಲ. ಆದರೆ ಪಠಾಣ್ ನಿವೃತ್ತ ಆಟಗಾರ ಆಗಿರುವುದರಿಂದ ಅನುಮತಿಗಾಗಿ ಕಾಯುವ ಅಗತ್ಯವಿಲ್ಲ.

ಶ್ರೀಲಂಕಾದ ಮಾಜಿ ಆಲ್‌ರೌಂಡರ್ ‍ಪರ್ವೇಜ್ ಮಹರೂಫ್ ಮತ್ತು ಪಠಾಣ್ ನಡುವೆ ಸಾಮಾಜಿಕ ತಾಣದಲ್ಲಿ ವಿನೋದಕ್ಕಾಗಿ ನಡೆದಿದ್ದ ಜಗಳವೇ ಪಠಾಣ್‌ಗೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅವಕಾಶ ಗಳಿಸಿಕೊಟ್ಟಿದೆ. ಸಾಮಾಜಿಕ ತಾಣಗಳಲ್ಲಿನ ಪೋಸ್ಟ್‌ಗಳ ಕೊನೆಗೆ ಮಹರೂಫ್ ಅವರು ಲಂಕಾ ಲೀಗ್‌ನಲ್ಲಿ ಪಾಲ್ಗೊಳ್ಳುವಂತೆ ಪಠಾಣ್‌ಗೆ ಸವಾಲೊಡ್ಡಿದ್ದರು. 

ಲೀಗ್‌ನಲ್ಲಿ ಒಟ್ಟು 23 ಪಂದ್ಯಗಳು ಇರುತ್ತವೆ. ಆರ್‌.ಪ್ರೇಮದಾಸ, ರಂಗಿರಿ ಡಂಬುಲಾ, ಪಲ್ಲೆಕೆಲೆ ಮತ್ತು ಸೂರ್ಯವೇವ ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರೀಡಾಂಗಣಗಳು ಹಣಾಹಣಿಗಳಿಗೆ ಸಜ್ಜಾಗಲಿವೆ. ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕಳೆದ ವರ್ಷ ಅಬುಧಾಬಿಯಲ್ಲಿ ನಡೆದಿದ್ದ ಟಿ–10 ಲೀಗ್‌ನಲ್ಲಿ ಆಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು