ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ಸಲ 400ಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತ; ಬಾಂಗ್ಲಾದೇಶಕ್ಕೆ ಕಠಿಣ ಗುರಿ

Last Updated 10 ಡಿಸೆಂಬರ್ 2022, 12:39 IST
ಅಕ್ಷರ ಗಾತ್ರ

ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್‌ ಕಲೆಹಾಕಿದೆ. ಇದರೊಂದಿಗೆ ಈ ಮಾದರಿಯಲ್ಲಿ 6ನೇ ಬಾರಿ 400ಕ್ಕಿಂತ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟ ಬಾಂಗ್ಲಾದೇಶಕ್ಕೆ ಇಶಾನ್ ಕಿಶನ್ ಮತ್ತು ವಿರಾಟ್‌ ಕೊಹ್ಲಿ ಆಘಾತ ನೀಡಿದರು. ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 290 ರನ್‌ ಕೂಡಿಸಿದ ಈ ಜೋಡಿ, ಬಾಂಗ್ಲಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿತು.

ಕೇವಲ 126 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ಕಿಶನ್, ಏಕದಿನ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಗಳಿಸಿದ ಸಾಧನೆ ಮಾಡಿದರು. ಒಟ್ಟು 131 ಎಸೆತಗಳನ್ನು ಎದುರಿಸಿದ ಅವರು 215 ರನ್‌ ಗಳಿಸಿ ಔಟಾದರು. ಕಿಶನ್‌ಗೆ ಉತ್ತಮ ಜೊತೆಯಾಟ ನೀಡಿದ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 44ನೇ ಶತಕ (113 ರನ್) ಸಿಡಿಸಿ ಸಂಭ್ರಮಿಸಿದರು.

ಈ ಇಬ್ಬರನ್ನು ಹೊರತುಪಡಿಸಿ,ಕೆಳಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ವಾಷಿಂಗ್ಟನ್‌ ಸುಂದರ್‌ (37) ಮತ್ತು ಅಕ್ಷರ್‌ ಪಟೇಲ್‌ (20) ಮಾತ್ರವೇ ಎರಡಂಕಿ ಮೊತ್ತ ಗಳಿಸಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. 4 ಮತ್ತು 5ನೇ ಕ್ರಮಾಂಕದಲ್ಲಿ ಆಡಿದ ಶ್ರೇಯಸ್‌ ಅಯ್ಯರ್ (3) ಹಾಗೂ ನಾಯಕ ಕೆ.ಎಲ್‌. ರಾಹುಲ್‌ (8) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಒಂದು ಹಂತದಲ್ಲಿ 35 ಓವರ್‌ಗಳ ಅಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡು 295 ರನ್ ಗಳಿಸಿದ್ದ ಭಾರತ ನಂತರದ 15 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 114ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಇನ್ನಷ್ಟು ರನ್‌ ಗಳಿಸುವ ಅವಕಾಶವನ್ನು ಕೈಚೆಲ್ಲಿತು.

ಬಾಂಗ್ಲಾದೇಶ ಪರ ಶಕಿಬ್‌ ಅಲ್‌ ಹಸನ್‌, ಎಬಾದತ್‌ ಹೊಸೈನ್‌ ಮತ್ತು ತಸ್ಕಿನ್‌ ಅಹ್ಮದ್‌ ತಲಾ ಎರಡು ವಿಕೆಟ್‌ ಪಡೆದರು. ಮುಸ್ತಫಿಜುರ್‌ ರೆಹಮಾನ್‌ ಮತ್ತು ಮೆಹದಿ ಹಸನ್‌ ಮಿರಾಜ್‌ ಒಂದೊಂದು ವಿಕೆಟ್‌ ಹಂಚಿಕೊಂಡರು.

ದಕ್ಷಿಣ ಆಫ್ರಿಕಾ ದಾಖಲೆ ಸರಿಗಟ್ಟಿದ ಭಾರತ
ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 400ಕ್ಕಿಂತ ಅಧಿಕ ರನ್‌ ಹರಿದುಬಂದಿರುವುದು 22ನೇ ಬಾರಿ.ತಲಾ ಆರು ಬಾರಿ 400ಕ್ಕಿಂತ ಹೆಚ್ಚು ರನ್ ಕಲೆಹಾಕಿರುವ ಭಾರತ ಮತ್ತು ಆಫ್ರಿಕಾ ತಂಡಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಉಳಿದಂತೆ ಇಂಗ್ಲೆಂಡ್‌ 5 ಬಾರಿ ಈ ಸಾಧನೆ ಮಾಡಿದ್ದು, ನಂತರದ ಸ್ಥಾನದಲ್ಲಿದೆ. ಹೀಗಾಗಿಈ ಮೂರು ತಂಡಗಳೇ 17 ಸಲ ನಾಲ್ಕುನೂರರ ಗಡಿದಾಟಿ ದಾಖಲೆ ಬರೆದಿವೆ.

ಉಳಿದಂತೆ ಆಸ್ಟ್ರೇಲಿಯಾ, ಶ್ರೀಲಂಕಾ ತಲಾ ಎರಡು ಬಾರಿಮತ್ತು ನ್ಯೂಜಿಲೆಂಡ್‌ ಒಮ್ಮೆ ಈ ಸಾಧನೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT