ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪದ್ಧತಿಗೆ ಒಗ್ಗಿಕೊಳ್ಳಲೇಬೇಕು: ಇಶಾಂತ್

Last Updated 18 ಮೇ 2020, 22:07 IST
ಅಕ್ಷರ ಗಾತ್ರ

ನವದೆಹಲಿ: ‘ಚೆಂಡಿನ ಹೊಳ‍ಪಿಗಾಗಿ ಎಂಜಲು ಸವರುವುದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಿಷೇಧಿಸಿದರೆ ಹೊಸ ಪದ್ಧತಿಗೆ ವೇಗದ ಬೌಲರ್‌ಗಳು ಒಗ್ಗಿಕೊಳ್ಳುವುದು ಅನಿವಾರ್ಯ’ ಎಂದು ಭಾರತದ ವೇಗಿ ಇಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ನಲ್ಲಿ ತಾವಾಡಲಿರುವ ತಂಡ ಡೆಲ್ಲಿ ಕ್ಯಾಪಿಟಲ್ಸ್‌ನ ಫ್ರಾಂಚೈಸ್ ಸೋಮವಾರ ಇನ್‌ಸ್ಟಾಗ್ರಾಂ ಮೂಲಕ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು ‘ಕ್ರಿಕೆಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಹೊಂದಾಣಿಕೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಏನೇ ಇರಲಿ, ಅದನ್ನು ಅಳವಡಿಸಿಕೊಳ್ಳಲು ಆಟಗಾರರು ಮನಸ್ಸು ಮಾಡಬೇಕು’ ಎಂದರು.

ಕೋವಿಡ್ ನಂತರದ ದಿನಗಳಲ್ಲಿ ಎಂಜಲಿಗೆ ಬದಲು ಕೃತಕವಾದ ಉತ್ಪನ್ನವನ್ನು ಬಳಸಲು ಐಸಿಸಿ ಚಿಂತನೆ ನಡೆಸಿದೆ. ಇದಕ್ಕೆ ಆಟಗಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಕೃತಕ ಉತ್ಪನ್ನ ಬಳಸಿದರೆ ಚೆಂಡು ವಿರೂಪಗೊಳಿಸಲು ಅಧಿಕೃತವಾಗಿ ಅನುಮತಿ ಸಿಕ್ಕಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

‘ಎಂಜಲು ಸವರುವುದರಿಂದ ಬೌಲರ್ ಬಯಸಿದಂತೆ ಚೆಂಡು ಸ್ವಿಂಗ್ ಆಗುತ್ತದೆ. ಆದರೆ ಈ ಬಗ್ಗೆ ಚರ್ಚಿಸುವ ಕಾಲ ಇದಲ್ಲ ಎಂದೆನಿಸುತ್ತದೆ. ಸದ್ಯ ಒದಗಿರುವ ಪರಿಸ್ಥಿತಿಯನ್ನು ನಿಭಾಯಿಸುವುದರ ಕುರಿತು ಚಿಂತನೆ ನಡೆಸಬೇಕಾದ ಇಂದಿನ ಅಗತ್ಯವಾಗಿದೆ’ ಎಂದು ಇಶಾಂತ್ ಹೇಳಿದರು.

ರಿಕಿ ಪಾಂಟಿಂಗ್ ಅತ್ಯುತ್ತಮ ಕೋಚ್: ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರಿಗಿಂತ ಉತ್ತಮ ಕೋಚ್ ನಾನು ನೋಡಿಲ್ಲ. ಕಳೆದ ವರ್ಷ ಐಪಿಎಲ್‌ಗೆ ಮರಳಿದಾಗ ಆತಂಕಕ್ಕೆ ಒಳಗಾಗಿದ್ದೆ. ಆದರೆ ತಂಡದ ಕೋಚ್ ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ಇಶಾಂತ್ ನುಡಿದರು.2018ರಲ್ಲಿ ಹರಾಜಾಗದೇ ಉಳಿದಿದ್ದ ಇಶಾಂತ್ ಅವರನ್ನು ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು.

‘ತರಬೇತಿಗಾಗಿ ಅಂಗಣಕ್ಕೆ ಇಳಿಯುವಾಗ ಅದೇ ಮೊದಲ ಬಾರಿ ಐಪಿಎಲ್‌ಗೆ ಆಯ್ಕೆಯಾದವನಂತೆ ಇದ್ದೆ. ಆದರೆ ರಿಕಿ ಪಾಂಟಿಂಗ್ ಉತ್ಸಾಹ ತುಂಬಿದರು. ನೀನು ಅನುಭವಿ ಆಟಗಾರ, ಆದ್ದರಿಂದ ಕಿರಿಯರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿನ್ನ ಮೇಲೆ ಇದೆ. ಯಾವುದಕ್ಕೂ ಆತಂಕಪಡಬೇಡ. ತಂಡದಲ್ಲಿ ನನ್ನ ಮೊದಲ ಆಯ್ಕೆ ನೀನೇ ಎಂದು ಹೇಳಿದ್ದರು. ಆ ಮಾತುಗಳು ನನ್ನಲ್ಲಿ ಹೊಸ ಚೇತನ ತುಂಬಿದ್ದವು’ ಎಂದು ಇಶಾಂತ್ ಹೇಳಿದರು.

2008ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಂಡ ಯಶಸ್ಸಿನ ಬಗ್ಗೆ ಕೇಳಿದಾಗ ‘ಅಂದಿನ ಪರ್ತ್ ಟೆಸ್ಟ್‌ನಲ್ಲಿ ನಾನು ಉತ್ತಮ ಸಾಮರ್ಥ್ಯ ತೋರಲು ಕಾರಣವೇನು ಎಂದು ಅನೇಕರು ಈಗಲೂ ಕೇಳುತ್ತಾರೆ. ಆಗ ಗ್ಯಾರಿ ಕರ್ಸ್ಟನ್ ತಂಡದ ಕೋಚ್ ಆಗಿದ್ದರು. ಆಸ್ಟ್ರೇಲಿಯನ್ನರು ಗೆಲುವೊಂದನ್ನೇ ಗುರಿ ಇರಿಸಿಕೊಂಡು ಆಡುತ್ತಾರೆ. ಆದ್ದರಿಂದ ಎಚ್ಚರದಿಂದ ಇರಬೇಕು ಎಂದು ಹೇಳಿದ್ದರು. ಆ ಮಾತು ನನ್ನಲ್ಲಿ ಹುರಿದುಂಬಿಸಿತ್ತು’ ಎಂದರು.

ಲಾಕ್‌ಡೌನ್ ದಿನಗಳ ಬಗ್ಗೆ ಮಾತನಾಡಿದ ಅವರು ‘ಬೆಳಿಗ್ಗೆ ಐದು ಗಂಟೆಗೆ ಎದ್ದು ವಾಕಿಂಗ್ ಮಾಡುತ್ತೇನೆ. ನಂತರ ವ್ಯಾಯಾಮಗಳಲ್ಲಿ ತೊಡಗಿಸಿಕೊಂಡು ಫಿಟ್‌ನೆಸ್ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಸಾಧನೆ ಮಾಡಲು ಶಿಸ್ತಿನ ಜೀವನ ನಡೆಸಬೇಕು ಎಂಬುದನ್ನು ಮರೆಯುವಂತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT