ಐಪಿಎಲ್ ಪಂದ್ಯಾವಳಿಗೆ ಹಿಂದಿರುಗುತ್ತೇನೆ: ಶ್ರೇಯಸ್ ಅಯ್ಯರ್

ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಾವಳಿ ಪುನರಾರಂಭಗೊಳ್ಳುತ್ತಿದ್ದು, ಸರಣಿ ಹೊತ್ತಿಗೆ ಫಿಟ್ ಆಗಿರುತ್ತೇನೆ ಎಂದು ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದು, ಮತ್ತೆ ನಾಯಕನ ಹೊಣೆ ಸಿಗುವ ಬಗ್ಗೆ ಖಾತರಿ ಇಲ್ಲ. ಆ ನಿರ್ಧಾರವು ಮಾಲೀಕರ ಕೈಯಲ್ಲಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎಡ ಭುಜದ ಗಾಯದಿಂದಾಗಿ ಅವರು ಐಪಿಎಲ್‌ನಿಂದ ಹೊರಗುಳಿಯಬೇಕಾಗಿತ್ತು.
ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ತಂಡವನ್ನು ಮುನ್ನಡೆಸಿದ್ದರು. ಪಂತ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡಿತ್ತು. ಬಯೋ-ಬಬಲ್‌ನಲ್ಲಿ ಅನೇಕರಿಗೆ ಕೋವಿಡ್ ಸೋಂಕು ತಗಲಿದ್ದರಿಂದ ಐಪಿಎಲ್ ಪಂದ್ಯಾವಳಿಯನ್ನು ಅಮಾನತು ಮಾಡಲಾಗಿತ್ತು.
‘ನನ್ನ ಭುಜದ ಗಾಯ ಗುಣವಾಗಿದೆ. ನನ್ನ ಫಿಟ್ನೆಸ್ ಸಾಬೀತುಪಡಿಸುವ ಕೊನೆಯ ಹಂತದ ಪ್ರಕ್ರಿಯೆ ನಡೆಯುತ್ತಿದೆ. ಆದ್ದರಿಂದ ಫಿಟ್ನೆಸ್ ಸಾಬೀತುಪಡಿಸುವ ಪ್ರಕ್ರಿಯೆ ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಪ್ರಾಕ್ಟೀಸ್ ನಡೆಯುತ್ತಿದ್ದು, ನಾನು ಐಪಿಎಲ್‌ನಲ್ಲಿ ಇರುತ್ತೇನೆ’ಎಂದು ಅಯ್ಯರ್ 'ದ ಗ್ರೇಡ್ ಕ್ರಿಕೆಟರ್' ಪಾಡ್ ಕಾಸ್ಟ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಅಯ್ಯರ್ ನಾಯಕತ್ವದಲ್ಲಿ, ದೆಹಲಿ ತಂಡವು 2020ರ ಆವೃತ್ತಿಯಲ್ಲಿ ಫೈನಲ್ ತಲುಪಿತ್ತು, ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು.
ದೆಹಲಿ ನಾಯಕರಾಗಿ ಮರಳಿ ಬರುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾಯಕತ್ವದ ಬಗ್ಗೆ ನನಗೆ ಗೊತ್ತಿಲ್ಲ, ಅದು ಮಾಲೀಕರ ಕೈಯಲ್ಲಿದೆ. ಆದರೆ, ತಂಡವು ಈಗಾಗಲೇ ಉತ್ತಮವಾಗಿ ಆಡುತ್ತಿದೆ ಮತ್ತು ನಾವು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ. ಅದೇ ನನಗೆ ನಿಜವಾಗಿಯೂ ಮುಖ್ಯವಾಗಿದೆ’ ಎಂದಿದ್ದಾರೆ.
‘ಟ್ರೋಫಿ ಎತ್ತುವುದು ನನ್ನ ಮುಖ್ಯ ಗುರಿಯಾಗಿದೆ’ ಎಂದು ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.