ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಫೈನಲ್‌: ವಿರಾಟ್ ಬಳಗದಲ್ಲಿ ಮಯಂಕ್, ಪ್ರಸಿದ್ಧ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತ ತಂಡ: ಮರಳಿದ ರವೀಂದ್ರ ಜಡೇಜ, ಹನುಮವಿಹಾರಿ
Last Updated 7 ಮೇ 2021, 15:06 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡುವ ಭಾರತ ತಂಡಕ್ಕೆ 20 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಶುಕ್ರವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಡಬ್ಲ್ಯುಟಿಸಿ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸಲಾಯಿತು. ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಕರ್ನಾಟಕದ ಮಯಂಕ್ ಅಗರವಾಲ್ ಸ್ಥಾನ ಉಳಿಸಿಕೊಂಡಿದ್ದಾರೆ. ರಾಜ್ಯದ ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಕಾಯ್ದಿಟ್ಟ ಆಟಗಾರರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. ಮೂರು ಪಂದ್ಯಗಳನ್ನು ಆಡಿ ಆರು ವಿಕೆಟ್‌ಗಳನ್ನು ಗಳಿಸಿದ್ದರು.

ಈಚೆಗೆ ಮುಂಬೈನಲ್ಲಿ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗೊಳಗಾಗಿರುವ ಕೆ.ಎಲ್. ರಾಹುಲ್ ಮತ್ತು ಕೋವಿಡ್‌ ಸೋಂಕಿಗೊಳಗಾಗಿರುವ ವೃದ್ಧಿಮಾನ್ ಸಹಾ ಅವರನ್ನೂ ಆಯ್ಕೆಗೆ ಪರಿಗಣಿಸಲಾಗಿದೆ. ಆದರೆ ಅವರು ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಉತ್ತೀರ್ಣರಾದರೆ ತಂಡಕ್ಕೆ ಸೇರ್ಪಡೆಯಾಗುವರು.

ಹೋದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜ ಮತ್ತು ಹನುಮವಿಹಾರಿ ಅವರೂ ತಂಡಕ್ಕೆ ಮರಳಿದ್ದಾರೆ. ಸ್ವದೇಶದಲ್ಲಿಯೇ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಇವರಿಬ್ಬರೂ ಆಡಿರಲಿಲ್ಲ. ಐಪಿಎಲ್‌ನಲ್ಲಿ ಜಡೇಜ ಮಿಂಚಿದ್ದರು. ‌

ತಂಡದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆವೇಶ್ ಖಾನ್ ಸೇರಿ ಒಟ್ಟು ಎಂಟು ಮಧ್ಯಮವೇಗಿಗಳಿಗೆ ಅವಕಾಶ ನೀಡಲಾಗಿದೆ. ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇದ್ದಾರೆ.

ಲಯದಲ್ಲಿರದ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಮಧ್ಯಮವೇಗಿ ನವದೀಪ್ ಸೈನಿ ಸ್ಥಾನ ಪಡೆದಿಲ್ಲ.

ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಆ ಬಳಿಕ ಇಂಗ್ಲೆಂಡ್ ಎದುರು ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ತಂಡವು ಆಡಲಿದೆ.

ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.

ಕೆ.ಎಲ್. ರಾಹುಲ್ ಮತ್ತು ವೃದ್ಧಿಮಾನ್ ಸಹಾ (ಫಿಟ್‌ನೆಸ್ ಪರೀಕ್ಷೆಯ ನಂತರ ಖಚಿತ)

ಕಾಯ್ದಿಟ್ಟ ಆಟಗಾರರು: ಅಭಿಮನ್ಯು ಈಶ್ವರನ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ಅರ್ಜನ್ ನಾಗವಾಸವಲ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT