ಬುಧವಾರ, ಜನವರಿ 19, 2022
26 °C
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ; ಪಾಂಡೆ, ಕದಂ ಮಿಂಚಿನಾಟ

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ; ಫೈನಲ್‌ಗೆ ಕರ್ನಾಟಕ–ತಮಿಳುನಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದಕ್ಷಿಣ ಭಾರತದ ಬದ್ಧ ಎದುರಾಳಿಗಳಾದ ಕರ್ನಾಟಕ ಮತ್ತು ತಮಿಳುನಾಡು ಕ್ರಿಕೆಟ್ ತಂಡಗಳು ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ 87ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗವು ವಿದರ್ಭ ಎದುರು 4 ರನ್‌ಗಳ ರೋಚಕ ಜಯ ಸಾಧಿಸಿತು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ತಮಿಳುನಾಡು ತಂಡವು 8 ವಿಕೆಟ್‌ಗಳಿಂದ ಹೈದರಾಬಾದ್ ವಿರುದ್ಧ ಜಯಿಸಿತು.

ಮಧ್ಯಾಹ್ನ ನಡೆದ ಪಂದ್ಯದಲ್ಲಿ ಆರಂಭಿಕ ಜೋಡಿ ರೋಹನ್ ಕದಂ (87; 56ಎಸೆತ, 7ಬೌಂಡರಿ, 4ಸಿಕ್ಸರ್) ಮತ್ತು ಮನೀಷ್ ಪಾಂಡೆ (54; 42ಎಸೆತ, 2ಬೌಂಡರಿ, 3ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 132 ರನ್ ಗಳಿಸಿದರು. ಈ ಬುನಾದಿಯ ಮೇಲೆ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 176 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವಿದರ್ಭ ತಂಡವು ಇನಿಂಗ್ಸ್‌ನ ಕಡೆಯ ಓವರ್‌ನವರೆಗೂ ಹೋರಾಡಿತು. ಆದರೆ ತಂಡಕ್ಕೆ 20 ಓವರ್‌ಗಳಲ್ಲಿ 6ಕ್ಕೆ 172 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕೊನೆಯ ಓವರ್‌ನಲ್ಲಿ ಗೆಲುವಿಗಾಗಿ 14 ರನ್‌ಗಳ ಅವಶ್ಯಕತೆ ಇದ್ದಾಗ, ವಿದ್ಯಾಧರ್ ಪಾಟೀಲ ಬೌಲಿಂಗ್ ಮಾಡಿದರು. ಕ್ರೀಸ್‌ನಲ್ಲಿದ್ದ ಅಕ್ಷಯ್ ಕರ್ಣೇಶ್ವರ್ (22; 12ಎಸೆತ) ಮೊದಲ ಎಸೆತದಲ್ಲಿಯೇ ಅವರು ಬೌಂಡರಿ ದಾಟಿಸಲು ಯತ್ನಿಸಿದರು. ತಮ್ಮ ಮೇಲಿಂದ ಶರವೇಗದಲ್ಲಿ ಸಾಗುತ್ತಿದ್ದ ಚೆಂಡನ್ನು ಜಿಗಿದು ಹಿಡಿತಕ್ಕೆ ಪಡೆದ ಅಭಿನವ್ ಮನೋಹರ್ ಮಹತ್ವದ ತಿರುವು ನೀಡಿದರು. ನಂತರದ ಐದು ಎಸೆತಗಳಲ್ಲಿ ಹತ್ತು ರನ್‌ಗಳನ್ನು ಎದುರಾಳಿಗಳು ಗಳಿಸಿದರೂ ಗೆಲುವಿನ ದಡ ಮುಟ್ಟಲು ಸಾಧ್ಯವಾಗಲಿಲ್ಲ.

ಪಾಂಡೆ ಆಟದ ರಂಗು: ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವಿನ ರೂವಾರಿಯಾಗಿದ್ದ ನಾಯಕ ಪಾಂಡೆ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್, ಯೋಜನೆ ಮತ್ತು ಫೀಲ್ಡಿಂಗ್ ಮೂಲಕ ಗಮನ ಸೆಳೆದರು. ಸತತ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಬಿ.ಆರ್. ಶರತ್ ಅವರನ್ನು ಆರನೇ ಕ್ರಮಾಂಕಕ್ಕೆ ಕಳಿಸಿ ರೋಹನ್ ಜೊಎಗೆ ಇನಿಂಗ್ಸ್ ಆರಂಭಿಸಿ ಯಶಸ್ವಿಯಾದರು. ಮೂರನೇ ಕ್ರಮಾಂಕದಲ್ಲಿ ಅಭಿನವ್ ಮನೋಹರ್‌ (27; 13ಎಸೆತ) ನೀಡಿದ್ದ ಕ್ರಮವೂ ಯಶಸ್ವಿಯಾಯಿತು. 

ಗುರಿ ಬೆನ್ನಟ್ಟಿದ ವಿದರ್ಭಕ್ಕೆ ಅಥರ್ವ ತೈಡೆ ಮತ್ತು ಗಣೇಶ್ ಸತೀಶ್ ಉತ್ತಮ ಆರಂಭ ನೀಡಿದರು. ಅವರ ಬಿರುಸಿನಾಟಕ್ಕೆ ಕೇವಲ ಐದು ಓವರ್‌ಗಳಲ್ಲಿ 43 ರನ್‌ಗಳು ಸೇರಿದವು. ಸ್ಪಿನ್ನರ್ ಕಾರ್ಯಪ್ಪ ಹಾಕಿದ ಐದನೇ ಓವರ್‌ನಲ್ಲಿ ಲಾಂಗ್ ಆನ್ ಬೌಂಡರಿ ಲೈನ್‌ನಲ್ಲಿ ಪಾಂಡೆ ಶ್ರಮಪಟ್ಟು ಪಡೆದ ಕ್ಯಾಚ್‌ನಿಂದಾಗಿ ಜೊತೆಯಾಟ ಮುರಿದುಬಿತ್ತು.  ಶುಭಂ ದುಬೆ ಮತ್ತು ಅಕ್ಷಯ್ ವಾಡಕರ್ ಅವರಿಬ್ಬರ ಕ್ಯಾಚ್‌ಗಳನ್ನೂ ಫೀಲ್ಡರ್ ವಿದ್ಯಾಧರ್ ಕೈಚೆಲ್ಲಿದ್ದರು. ಆದ್ದರಿಂದಾಗಿ ಪಂದ್ಯವು ಕೊನೆಯ ಓವರ್‌ನವರೆಗೆ ಬೆಳೆಯಿತು.

ರೋಹನ್ ಅಬ್ಬರ: ಮಯಂಕ್ ಅಗರವಾಲ್ ಮತ್ತು ದೇವದತ್ತ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ರೋಹನ್ ಮೊದಲ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡರು. ತಂಡಕ್ಕೆ ಭದ್ರ ಬುನಾದಿ ಹಾಕಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು