ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌; ನಾಲ್ವರು ಆಟಗಾರರ ವಿಚಾರಣೆ

‘ಪ್ಯಾಂಥರ್ಸ್’ ಮಾಲೀಕನನ್ನು ಬಿಟ್ಟು ಕಳುಹಿಸಿದ ಸಿಸಿಬಿ
Last Updated 21 ಸೆಪ್ಟೆಂಬರ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್‌ ಪಂದ್ಯಾವಳಿ ವೇಳೆ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ನಾಲ್ವರು ಆಟಗಾರರನ್ನು ಶನಿವಾರ ವಿಚಾರಣೆಗೆ ಒಳಪಡಿಸಿದರು.

ಮುಂಬೈ ಬುಕ್ಕಿಗಳು ಹಾಗೂ ಆಟ ಗಾರರ ಜೊತೆ ಸಂಪರ್ಕವಿಟ್ಟುಕೊಂಡು ಪ್ರಕರಣದಲ್ಲಿ ಭಾಗಿಯಾಗಿದ್ದರೆಂಬ ಮಾಹಿತಿ ಆಧರಿಸಿ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದು ಶುಕ್ರವಾರ ರಾತ್ರಿಯೇ ಬಿಟ್ಟು ಕಳುಹಿಸಿದ್ದಾರೆ. ಅಗತ್ಯಬಿದ್ದರೆ ಪುನಃ ವಿಚಾರಣೆಗೆ ಕರೆಸುವುದಾಗಿಯೂ ಹೇಳಿದ್ದಾರೆ. ಅಲಿ ಅವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲವೆಂದು ಸಿಸಿಬಿ ಮೂಲಗಳು ತಿಳಿಸಿವೆ. ಆದರೆ, ಕೆಲ ಮಾಹಿತಿಯನ್ನು ಅಲಿ ಹಂಚಿಕೊಂಡಿದ್ದಾರೆ. ಅದನ್ನು ಆಧರಿಸಿಯೇ ಕೆಪಿಎಲ್‌ನ ಎರಡು ತಂಡಗಳ ನಾಲ್ವರು ಆಟಗಾರರಿಗೆ ವಿಚಾರಣೆಗೆ ಬರುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಶನಿವಾರ ಬೆಳಿಗ್ಗೆ 11ಕ್ಕೆ ಸಿಸಿಬಿ ಕಚೇರಿಗೆ ಬಂದಿದ್ದ ನಾಲ್ವರು ಆಟಗಾರರು, ಸಂಜೆ 5ರವರೆಗೂ ವಿಚಾರಣೆ ಎದುರಿಸಿದರು. ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದರು.

ಆಟಗಾರರ ಮೇಲೆ ಅನುಮಾನ: ‘ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಡೆದಿರುವ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಅಲಿ ಅವರು ಕೆಲ ಮಾಹಿತಿಯನ್ನು ಹೊರಹಾಕಿದ್ದು, ಅದನ್ನು ಪರಿಶೀಲಿಸಬೇಕಿದೆ. ಅದಕ್ಕಾಗಿ ಆಟಗಾರರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ನಾಲ್ವರು ಆಟಗಾರರಿಂದ ಹೇಳಿಕೆ ಪಡೆದು ವಾಪಸು ಕಳುಹಿಸಲಾಗಿದೆ. ಇನ್ನು ಕೆಲವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಬೇಕಿದೆ’ ಎಂದರು.

*
ತನಿಖೆ ಪ್ರಗತಿಯಲ್ಲಿದೆ. ವಿಚಾರಣೆ ನಡೆಸಿದ ಆಟಗಾರರ ಹೆಸರು ಗೋಪ್ಯವಾಗಿರಿಸಲಾಗಿದೆ. ತನಿಖೆ ಮುಗಿದ ಬಳಿಕ ಎಲ್ಲವನ್ನೂ ತಿಳಿಸಲಾಗುವುದು
– ಸಂದೀಪ್ ಪಾಟೀಲ, ಸಿಸಿಬಿಯ ಜಂಟಿ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT