ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಜಯದ ಕನಸು ಮೂಡಿಸಿದ ಪ್ರಸಿದ್ಧಕೃಷ್ಣ

ರಣಜಿ ಕ್ರಿಕೆಟ್: ಮನೀಷ್ ಪಾಂಡೆ ಬಳಗಕ್ಕೆ ಮೊದಲ ಇನಿಂಗ್ಸ್ ಮುನ್ನಡೆ; ಕುಸಿದ ಜಮ್ಮು–ಕಾಶ್ಮೀರ
Last Updated 25 ಫೆಬ್ರುವರಿ 2022, 20:26 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕದ ಪ್ರಸಿದ್ಧ ಕೃಷ್ಣ ಸ್ವಿಂಗ್ ದಾಳಿಯ ಮುಂದೆ ಜಮ್ಮು–ಕಾಶ್ಮೀರ ತಂಡವು ದೂಳೀಪಟವಾಯಿತು.ಐಐಟಿ ಕೆಮ್‌ಪ್ಲಾಸ್ಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗವು ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಗಳಿಸಿತು. ಜಯದ ಕನಸು ಅರಳಿತು.

ಕರುಣ್ ನಾಯರ್ ಅಮೋಘ ಶತಕದ ಬಲದಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 103.1 ಓವರ್‌ಗಳಲ್ಲಿ 302 ರನ್ ಗಳಿಸಿತು. ಶುಕ್ರವಾರ ಮಧ್ಯಾಹ್ನ ಇನಿಂಗ್ಸ್ ಆರಂಭಿಸಿದ ಜಮ್ಮು–ಕಾಶ್ಮೀರ ತಂಡವು ಪ್ರಸಿದ್ಧಕೃಷ್ಣ (12–1–35–6) ದಾಳಿಯ ಮುಂದೆ ಕೇವಲ 93 ರನ್‌ಗಳಿಗೆ ಕುಸಿಯಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು ದಿನದಾಟದ ಕೊನೆಗೆ 42 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 128 ರನ್ ಗಳಿಸಿದೆ. ಕರುಣ್ ನಾಯರ್ (ಬ್ಯಾಟಿಂಗ್ 10) ಮತ್ತು ಕೆ.ವಿ. ಸಿದ್ಧಾರ್ಥ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ. ಒಟ್ಟು 337 ರನ್‌ಗಳ ಮುನ್ನಡೆಯನ್ನು ಕರ್ನಾಟಕ ಗಳಿಸಿದೆ.

ಮೊದಲ ದಿನವಾದ ಗುರುವಾರ ಕರ್ನಾಟಕ ತಂಡವು 90 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 268 ರನ್ ಗಳಿಸಿತ್ತು. 152 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಕರುಣ್, ಎರಡನೇ ದಿನದ ಬೆಳಿಗ್ಗೆ ತಮ್ಮ ಮೊತ್ತಕ್ಕೆ ಮತ್ತೆ 23 ರನ್‌ಗಳನ್ನು ಸೇರಿಸಿದರು. ತಂಡದ ಮೊತ್ತವು 300ರ ಗಡಿ ದಾಟಲು ಕಾರಣರಾದರು. ಪರ್ವೇಜ್ ರಸೂಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಕರುಣ್ ಪೆವಿಲಿಯನ್ ಸೇರಿದರು.

ಉತ್ತಮ ಆರಂಭದ ನಂತರ ಕುಸಿತ

ಕಾಶ್ಮೀರ ತಂಡದ ಆರಂಭಿಕ ಜೋಡಿ ಕಮ್ರನ್ ಇಕ್ಬಾಲ್ (35; 45ಎ) ಮತ್ತು ಜತಿನ್ ವಾಧ್ವಾನ್ (25; 36ಎ)ಮೊದಲ ವಿಕೆಟ್ ಜೊತೆಯಾಟದಲ್ಲಿ 55 ರನ್‌ ಸೇರಿಸಿದರು. 12 ಓವರ್‌ಗಳವರೆಗೆ ವಿಕೆಟ್ ಪತನವಾಗದಂತೆ ನೋಡಿಕೊಂಡರು.

ಆದರೆ, ನಂತರದ 17.5 ಓವರ್‌ಗಳಲ್ಲಿ ಕಾಶ್ಮೀರ ತಂಡದ ಹತ್ತು ವಿಕೆಟ್‌ಗಳು ಉರುಳಿದವು. 13ನೇ ಓವರ್‌ನಲ್ಲಿ ಜತೀನ್ ವಿಕೆಟ್ ಗಳಿಸಿದ ಪ್ರಸಿದ್ಧಕೃಷ್ಣ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವಿಕೆಟ್‌ಗಳನ್ನು ಕಬಳಿಸಿದರು.ಅವರಿಗೆ ಉತ್ತಮ ಜೊತೆ ನೀಡಿದ ಯುವಪ್ರತಿಭೆ ವಿದ್ಯಾಧರ್ ಪಾಟೀಲ ಎರಡು ವಿಕೆಟ್ ಗಳಿಸಿದರು. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ತಲಾ ಒಂದು ವಿಕೆಟ್ ಪಡೆದರು.

ಸಮರ್ಥ್–ದೇವದತ್ತ ಮಿಂಚು

ಫಾಲೋ ಆನ್ ಹೇರುವ ಅವಕಾಶ ಇದ್ದರೂ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಕಳೆದ ಇನಿಂಗ್ಸ್‌ನಲ್ಲಿ ಲಯದ ಕೊರತೆ ಅನುಭವಿಸಿದ್ದ ದೇವದತ್ತ ಪಡಿಕ್ಕಲ್ ಕೊನೆಗೂ ಇಲ್ಲಿ ರನ್‌ ಗಳಿಸುವಲ್ಲಿ ಯಶಸ್ವಿಯಾದರು. ಒಂದು ರನ್‌ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಆದರೆ, ಸಮರ್ಥ್ ಅವರೊಂದಿಗಿನ ಜೊತೆಯಾಟದಲ್ಲಿ 106 ರನ್ ಗಳಿಸಿದರು. ಅಬಿದ್ ಮುಷ್ತಾಕ್ ಹಾಕಿದ 32ನೇ ಓವರ್‌ನಲ್ಲಿ ದೇವದತ್ತ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಇನ್ನೊಂದೆಡೆ ತಾಳ್ಮೆಯಿಂದ ಆಡುತ್ತಿದ್ದ ಸಮರ್ಥ್ (62; 106ಎ) ಅರ್ಧಶತಕ ಹೊಡೆದರು. 40ನೇ ಓವರ್‌ನಲ್ಲಿ ಅಬಿದ್ ಬೌಲಿಂಗ್‌ನಲ್ಲಿ ಸಮರ್ಥ್ ಕಣ್ತಪ್ಪಿಸಿದ ಎಸೆತವು ಸ್ಟಂಪ್ ಎಗರಿಸಿತು. ಚೆಂದದ ಆಟಕ್ಕೆ ತೆರೆಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT