ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ನಿಕಿನ್ ದಿಟ್ಟ ಆಟಕ್ಕೆ ಒಲಿದ ಮುನ್ನಡೆ

ರಣಜಿ ಕ್ರಿಕೆಟ್: ಛತ್ತೀಸಗಢ ಬೌಲರ್‌ಗಳೊಡ್ಡಿದ ಕಠಿಣ ಸವಾಲು;
Last Updated 5 ಜನವರಿ 2023, 21:58 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅನುಭವಿ ಬ್ಯಾಟರ್‌ಗಳು ಕುಸಿದ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿಯೇ ಉದಯೋನ್ಮುಖ ಪ್ರತಿಭೆ ನಿಕಿನ್ ಜೋಸ್ ದಿಟ್ಟ ಆಟವಾಡಿದರು. ತಂಡಕ್ಕೆ ಇನಿಂಗ್ಸ್‌ ಮುನ್ನಡೆಯ ಕಾಣಿಕೆ ನೀಡಿದರು.

ಇಲ್ಲಿ ನಡೆಯುತ್ತಿರುವ ಸಿ ಗುಂಪಿನ ರಣಜಿ ಪಂದ್ಯದಲ್ಲಿ ಗುರುವಾರ ಛತ್ತೀಸಗಢದ ಅಜಯ್ ಮಂಡಲ್ (93ಕ್ಕೆ4) ಮತ್ತು ಸುಮಿತ್ ರುಯ್ಕರ್ (73ಕ್ಕೆ2) ದಾಳಿಗೆ ಹಿನ್ನಡೆಯ ಭೀತಿಯಲ್ಲಿದ್ದ ಕರ್ನಾಟಕಕ್ಕೆ ನಿಕಿನ್ (67; 134ಎ) ಆಟ ಆಸರೆಯಾಯಿತು. ತಂಡಕ್ಕೆ 55 ರನ್‌ಗಳ ಮುನ್ನಡೆ ಲಭಿಸಿತು.

ಛತ್ತೀಸಗಢ ತಂಡವು ಎರಡನೇ ಇನಿಂಗ್ಸ್‌ ಆರಂಭದಲ್ಲಿಯೇ ಆಘಾತ ಅನುಭವಿಸಿದರೂ ಆಶುತೋಷ್ ಸಿಂಗ್ (ಬ್ಯಾಟಿಂಗ್ 8; 47ಎ) ಮತ್ತು ಅಮನದೀಪ್ ಖರೆ (ಬ್ಯಾಟಿಂಗ್ 23, 57ಎ) ಗಟ್ಟಿಯಾಗಿ ನಿಂತರು. ಇದರಿಂದಾಗಿ ಮೂರನೇ ದಿನದಾಟದ ಅಂತ್ಯಕ್ಕೆ ಛತ್ತೀಸಗಢ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 35 ರನ್ ಗಳಿಸಿತು.

ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕದ ಜೊತೆಯಾಟವಾಡಿದ್ದ ಆಶುತೋಷ್ ಮತ್ತು ಅಮನದೀಪ್ ಕೊನೆಯ ದಿನವಾದ ಶುಕ್ರವಾರ ಜಿಗುಟುತನದ ಬ್ಯಾಟಿಂಗ್ ಮಾಡಿದರೆ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ. ಒಂದೊಮ್ಮೆ ಆತಿಥೇಯ ಬೌಲರ್‌ಗಳು ಪ್ರವಾಸಿ ಬಳಗದ ಉಳಿದ ವಿಕೆಟ್‌ಗಳನ್ನು ಬೇಗನೆ ಗಳಿಸಿ, ಸಾಧಾರಣ ಗುರಿ ಪಡೆದು ಗೆಲುವಿನ ಪ್ರಯತ್ನ ಕೂಡ ಮಾಡಬಹುದಾಗಿದೆ.

ನಿಕಿನ್ ಆಟ: ಛತ್ತೀಸಗಢ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 311 ರನ್‌ಗಳಿಗೆ ಉತ್ತರವಾಗಿ ಮಯಂಕ್ ಬಳಗವು ಎರಡನೇ ದಿನದ ಕೊನೆಗೆ 64 ಓವರ್‌ಗಳಲ್ಲಿ 1ವಿಕೆಟ್‌ಗೆ 202 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ಅಡಿಪಾಯದ ಮೇಲೆ ದೊಡ್ಡ ಮೊತ್ತ ಕಲೆಹಾಕುವ ಅವಕಾಶ ಆತಿಥೇಯ ತಂಡಕ್ಕೆ ಇತ್ತು.

ಆದರೆ, ಮೂರನೇ ದಿನದಾಟದ ಬೆಳಿಗ್ಗೆಯ ಅವಧಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಛತ್ತೀಸಗಢ ಬೌಲರ್‌ಗಳು ಮೇಲುಗೈ ಸಾಧಿಸಿದರು. ಅನುಭವಿ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ದಿನದ ಮೊದಲ 12 ಓವರ್‌ಗಳಲ್ಲಿ ಮಯಂಕ್ ಮತ್ತು ವಿಶಾಲ್ ಒಣತ್ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಅದರಲ್ಲೂ ವಿಶಾಲ್ (32; 120ಎ) ಹೆಚ್ಚು ಎಸೆತಗಳನ್ನು ಎದುರಿಸಿದರು. ಸುಮಿತ್ ರುಯ್ಕರ್ ಎಸೆತದಲ್ಲಿ ಮಯಂಕ್ ಅವರು ಅಜಯ್ ಮಂಡಲ್‌ಗೆ ಕ್ಯಾಚಿತ್ತ ಮೇಲೆ ಸಮಸ್ಯೆ ಶುರುವಾಯಿತು.

ವಿಶಾಲ್ ರನ್ ಪಡೆಯುವ ಅನಗತ್ಯ ಪ್ರಯತ್ನ ಮಾಡಿ ಸುಮಿತ್ ನೇರ ಥ್ರೋಗೆ ರನ್‌ಔಟ್ ಆದರು. ಟಿ.ವಿ. ಅಂಪೈರ್ ಹಲವು ಆಯಾಮಗಳಲ್ಲಿ ಪರಿಶೀಲಿಸಿ ಔಟ್ ನೀಡಿದರು. ಹೋದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಮನೀಷ್ ಪಾಂಡೆ ಐದು ರನ್‌ ಗಳಿಸಿ ಸ್ಟಂಪ್ಡ್ ಆದರು. ಶ್ರೇಯಸ್ ಗೋಪಾಲ್ (23; 38) ಭರವಸೆ ಮೂಡಿಸಿದರು. ಆದರೆ, ಸೌರಭ್ ಮಜುಂದಾರ್ ಎಸೆತದಲ್ಲಿ ಔಟಾದರು. ಊಟದ ವಿರಾಮಕ್ಕೆ ಮುನ್ನದ ಓವರ್‌ನಲ್ಲಿ ಬಿ.ಆರ್. ಶರತ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ರವಿಕಿರಣ್ ಸಂಭ್ರಮಿಸಿದರು. ಇದೇ ಓವರ್‌ನಲ್ಲಿ ಶರತ್‌ ಅವರ ಕ್ಯಾಚ್ ಕೈಚೆಲ್ಲಿದ್ದ ವಿಕೆಟ್‌ಕೀಪರ್ ಮಯಂಕ್ ವರ್ಮಾ ಜೀವದಾನ ನೀಡಿದ್ದರು.

ಆದರೆ ಇನ್ನೊಂದೆಡೆ 22 ವರ್ಷದ ನಿಕಿನ್ ತಾಳ್ಮೆ ಮತ್ತು ಆತ್ಮವಿಶ್ವಾಸಭರಿತ ಆಟವಾಡಿದರು. ವಿರಾಮದ ನಂತರ ಅವರೊಂದಿಗೆ ಸೇರಿದ ಕೆ. ಗೌತಮ್ (18; 24ಎ, 4X3) ರನ್‌ ಗಳಿಕೆಗೆ ವೇಗ ನೀಡಿದರು. ಇದರಿಂದಾಗಿ ಇನಿಂಗ್ಸ್‌ನ 102ನೇ ಓವರ್‌ನಲ್ಲಿ ಎದುರಾಳಿ ತಂಡದ ಮೊತ್ತವನ್ನು ಚುಕ್ತಾ ಮಾಡಲು ಸಾಧ್ಯವಾಯಿತು. ನಿಕಿನ್ ಸ್ವೀಪ್ ಶಾಟ್‌ಗಳನ್ನು ಪ್ರಯೋಗಿಸಿದರು. ಗೌತಮ್ ಔಟಾದ ನಂತರ ನಿಕಿನ್ ಬಿರುಸಿನ ಆಟಕ್ಕಿಳಿದು ಸಾಧ್ಯವಾದಷ್ಟು ರನ್ ಗಳಿಸಿದರು. ಕ್ರೀಸ್‌ನಿಂದ ಎರಡು ಅಡಿ ಮುಂದೆ ಬಂದು ಚೆಂಡನ್ನು ಸಿಕ್ಸರ್‌ಗೆತ್ತುವ ಧೈರ್ಯವನ್ನೂ ತೋರಿದರು. ಕೊನೆಯವರಾಗಿ ಔಟಾದರು.

ಎರಡೂ ಇನಿಂಗ್ಸ್‌ಗಳಲ್ಲಿ ಸೊನ್ನೆ!

ಛತ್ತೀಸಗಢದ ಆರಂಭಿಕ ಬ್ಯಾಟಿಂಗ್ ಜೋಡಿಯು ಈ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದರು.

ಛತ್ತೀಸಗಢದ ಅವನೀಶ್ ಧಲಿವಾಲ್ ಮತ್ತು ಅನುಜ್ ತಿವಾರಿ ಖಾತೆಯನ್ನೇ ತೆರೆಯಲಿಲ್ಲ. ಎರಡೂ ಇನಿಂಗ್ಸ್‌ಗಳಲ್ಲಿಯೂ ಅವನೀಶ್ ಅವರು ವೇಗಿ ವಿದ್ವತ್ ಕಾವೇರಪ್ಪ ಮತ್ತು ಅನುಜ್ ತಿವಾರಿ ಅವರು ವಿ. ಕೌಶಿಕ್ ಬೌಲಿಂಗ್‌ನಲ್ಲಿ ಔಟಾಗಿದರು.

ಇದರಿಂದಾಗಿ ತಂಡವು ಈ ಪಂದ್ಯದಲ್ಲಿ ಎರಡು ಸಲವೂ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್‌ ಕಳೆದುಕೊಂಡಿತು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಛತ್ತೀಸಗಢ 311 (109.3 ಓವರ್‌ಗಳಲ್ಲಿ)

ಕರ್ನಾಟಕ: 366 (121.4 ಓವರ್‌ಗಳಲ್ಲಿ)

ಮಯಂಕ್ ಸಿ ಅಜಯ್ ಬಿ ಸುಮಿತ್ 117 (228ಎ, 4X9,6X5), ವಿಶಾಲ್ ರನ್‌ಔಟ್ {ಸುಮಿತ್} 32 (120ಎ,4X3), ನಿಕಿನ್ ಎಲ್‌ಬಿಡಬ್ಲ್ಯು ಸುಮಿತ್ 67 (134ಎ, 4X8, 6X1), ಮನೀಷ್ ಸ್ಟಂಪ್ಡ್‌ ವರ್ಮಾ ಬಿ ಅಜಯ್ 5 (12ಎ, 4X1), ಶ್ರೇಯಸ್ ಸಿ ಆಶುತೋಷ್ ಬಿ ಸೌರಭ್ 23 (38ಎ, 4X2), ಶರತ್ ಬಿ ರವಿಕಿರಣ 6 (8ಎ, 4X1), ಗೌತಮ್ ಸಿ ಸುಮಿತ್‌ ಬಿ ಅಜಯ್ 18 (24ಎ, 4X3), ವೈಶಾಖ ಬಿ ಶಶಾಂಕ್ ಸಿಂಗ್ 6 (33ಎ), ಕೌಶಿಕ್ ಎಲ್‌ಬಿಡಬ್ಲ್ಯು ಬಿ ಅಜಯ್ 1 (4ಎ), ವಿದ್ವತ್ ಔಟಾಗದೆ 0 (5ಎ)

ಇತರೆ: 10 (ನೋಬಾಲ್ 3, ಬೈ 5, ಲೆಗ್‌ಬೈ 2)

ವಿಕೆಟ್ ಪತನ: 2–237 (ಮಯಂಕ್ ಅಗರವಾಲ್; 76.3), 3–236 (ವಿಶಾಲ್ ಒಣತ್; 79.2), 4–241 (ಮನೀಷ್ ಪಾಂಡೆ; 81.6), 5–276 (ಶ್ರೇಯಸ್ ಗೋಪಾಲ್; 94.1), 6–287 (ಶರತ್; 95.5), 7–320 (ಗೌತಮ್;104.6), 8–339 (ವೈಶಾಖ ವಿಜಯಕುಮಾರ್; 115.5), 9–340 (ಕೌಶಿಕ್; 116.3), 10–366 (ನಿಕಿನ್ ಜೋಸ್; 121.4)

ಬೌಲಿಂಗ್‌: ರವಿಕಿರಣ್ 25–4–62–1, ಸೌರಭ್ ಮಜುಂದಾರ್ 20–1–89–1, ಶಶಾಂಕ್ ಸಿಂಗ್ 14–3–42–1, ಅಜಯ್ ಮಂಡಲ್ 37–5–93–4, ಸುಮಿತ್ ರುಯ್ಕರ್ 25.4–4–73–2

ಎರಡನೇ ಇನಿಂಗ್ಸ್: ಛತ್ತೀಸಗಢ 2ಕ್ಕೆ 35 (20 ಓವರ್‌ಗಳಲ್ಲಿ)

ಅವನೀಶ್ ಬಿ ವಿದ್ವತ್ 0 (9ಎ), ಅನುಜ್ ಸಿ ಶರತ್ ಬಿ ಕೌಶಿಕ್ 0 (7ಎ), ಅಶುತೋಷ್ ಬ್ಯಾಟಿಂಗ್ 8 (47ಎ), ಅಮನದೀಪ್ ಬ್ಯಾಟಿಂಗ್ 23 (57ಎ, 4X2)

ಇತರೆ: 4 (ಬೈ 4)

ವಿಕೆಟ್ ಪತನ: 0–1 (ಅವನೀಶ್ ಧಲಿವಾಲ; 2.3), 0–2 (ಅನುಜ್ ತಿವಾರಿ; 3.1)

ಬೌಲಿಂಗ್‌: ವಿದ್ವತ್ ಕಾವೇರಪ್ಪ 6–3–8–1, ವಾಸುಕಿ ಕೌಶಿಕ್ 8–3–7–1, ವಿಜಯಕುಮಾರ್ ವೈಶಾಖ 5–0–15–0, ಕೃಷ್ಣಪ್ಪ ಗೌತಮ್ 1–0–1–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT