ಶನಿವಾರ, ಮಾರ್ಚ್ 25, 2023
30 °C

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಮನೀಷ್ ಪಾಂಡೆ ಬಳಗದ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹತಿ: ದೀಪಾವಳಿ ಹಬ್ಬದಂದು ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಈ ಋತುವಿನ ಮೊದಲ ದೇಶಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 9 ರನ್‌ಗಳಿಂದ ಬದ್ಧ ಎದುರಾಳಿ ಮುಂಬೈ ವಿರುದ್ಧ ಜಯಿಸಿತು.

 ಬರ್ಸಾಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮನೀಷ್ ಪಾಂಡೆ (84; 64ಎಸೆತ) ಮತ್ತು ಕರುಣ್ ನಾಯರ್ (72; 53ಎಸೆತ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 166 ರನ್ ಗಳಿಸಿತು.

ಅದಕ್ಕುತ್ತರವಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಅಜಿಂಕ್ಯ ರಹಾನೆ (75; 54ಎ) ಅವರ ಆಕರ್ಷಕ ಅರ್ಧಶತಕವು ವ್ಯರ್ಥವಾಯಿತು. ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ (26ಕ್ಕೆ3) ಮತ್ತು ಕೃಷ್ಣಪ್ಪ ಗೌತಮ್ (26ಕ್ಕೆ2) ಅವರ ನಿಖರ ದಾಳಿಯ ಮುಂದೆ ಮುಂಬೈ ಶರಣಾಯಿತು.

ಮನೀಷ್‌–ಕರುಣ್ ಜೊತೆಯಾಟ:ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ.  ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಮಯಂಕ್ ಅಗರವಾಲ್ ವಿಕೆಟ್ ಗಳಿಸಿದ ಮೋಹಿತ್ ಅವಸ್ತಿ ಸಂಭ್ರಮ ಮುಗಿಲುಮುಟ್ಟಿತು.  ತಮ್ಮ ಎರಡನೇ  ಓವರ್‌ನಲ್ಲಿ ದೇವದತ್ತ ಪಡಿಕ್ಕಲ್‌ಗೂ ಡಗ್‌ಔಟ್ ದಾರಿ ತೋರಿಸಿದ ಅವಸ್ತಿ ಮೆರೆದರು. ಐಪಿಎಲ್‌ನಲ್ಲಿ ಅಮೋಘ ಆಟವಾಡಿದ್ದ ಇಬ್ಬರು ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದಾಗ ಕರ್ನಾಟಕ ಬಳಗದಲ್ಲಿ ಒತ್ತಡ ಹೆಚ್ಚಿತು.

ಆದರೆ, ನಾಯಕನಿಗೆ ತಕ್ಕ ಆಟವಾಡಿದ ಪಾಂಡೆ ಮತ್ತು ‘ಮಾಜಿ ನಾಯಕ’ ಕರುಣ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 149 ರನ್‌ಗಳನ್ನು ಸೇರಿಸಿದರು. ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಕರುಣ್ ಮತ್ತು ಅಂತಿಮ ಎಸೆತದಲ್ಲಿ ಪಾಂಡೆ ಔಟಾಗುವವರೆಗೂ ಬೌಲರ್‌ಗಳು ಪರದಾಡಿದರು.

ಹೋದ ಋತುವಿನಲ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡಿದ್ದ ಕರುಣ್ ಇಲ್ಲಿ ಉತ್ತಮ ಆರಂಭ ಮಾಡಿದ್ದಾರೆ.

ಮುಂಬೈ ತಂಡಕ್ಕೂ ಆರಂಭದಲ್ಲಿಯೇ ಪೆಟ್ಟು ಬಿತ್ತು. ಪೃಥ್ವಿ ಶಾ ಅವರನ್ನು ಮೊದಲ ಓವರ್‌ನಲ್ಲಿಯೇ ಕ್ಲೀನ್ ಬೌಲ್ಡ್‌ ಮಾಡಿದ ಕಾರ್ಯಪ್ಪ ಖಾತೆ ತೆರೆದರು. ಆದರೆ ಅಜಿಂಕ್ಯ ಮತ್ತು ಮಧ್ಯಕ್ರಮಾಂಕದಲ್ಲಿಸಿದ್ಧೇಶ್ ಲಾಡ್ (32 ರನ್) ಜಯದ ಆಸೆ ಚಿಗುರಿಸಿದ್ದರು. ಆದರೆ, ಕರ್ನಾಟಕದ ಬೌಲರ್‌ಗಳು ಬಿಗಿದಾಳಿ ನಡೆಸಿದರು.

 

ಸ್ಕೋರ್ ಕಾರ್ಡ್

ಕರ್ನಾಟಕ

4ಕ್ಕೆ166 (20 ಓವರ್‌ಗಳಲ್ಲಿ)

ಮಯಂಕ್ ಸಿ ಅಂಕೋಲೆಕರ್ ಬಿ ಮೋಹಿತ್ 00 (1ಎ),  ಪಡಿಕ್ಕಲ್ ಸಿ ಶಿವಂ ಬಿ ಮೋಹಿತ್ 5 (3ಎ, 4X1), ಮನೀಷ್ ಸಿ ತಾರೆ ಬಿ ದೇಶಪಾಂಡೆ 84 (64ಎ,4X7, 6X2), ಕರುಣ್ ಸಿ ಹಕೀಂ ಬಿ ದೇಶಪಾಂಡೆ 72 (53ಎ, 4X6, 6X2), ಗೌತಮ್ ಔಟಾಗದೆ 0

ವಿಕೆಟ್ ಪತನ: 1–0 (ಮಯಂಕ್ ಅಗರವಾಲ್; 0.1), 2–15 (ದೇವದತ್ತ ಪಡಿಕ್ಕಲ್;2.1), 3–164 (ಕರುಣ್ ನಾಯರ್; 19.6)

ಬೌಲಿಂಗ್

ಮೋಹಿತ್ ಅವಸ್ತಿ 4–0–32–2, ತುಷಾರ್ ದೇಶಪಾಂಡೆ 4–0–38–2,  ಅಥರ್ವ ಅಂಕೋಲೆಕರ್ 4–0–25–0,ತನುಷ್ ಕೋಟ್ಯಾನ್ 4–0–25–0, ಶಿವಂ ದುಬೆ3–0–27–0, ಯಶಸ್ವಿ ಜೈಸ್ವಾಲ್ 1–0–17–0.

ಮುಂಬೈ

6ಕ್ಕೆ 157 (20 ಓವರ್‌ಗಳಲ್ಲಿ)

ಪೃಥ್ವಿ ಬಿ ಕಾರ್ಯಪ್ಪ 4 (3ಎ,4X1), ರಹಾನೆ ಸಿ ಪಾಂಡೆ ಬಿ ಕಾರ್ಯಪ್ಪ 75 (54ಎ, 4X6, 3X6), ಜೈಸ್ವಾಲ್ ಸ್ಟಂಪ್ಡ್ ಶರತ್ ಬಿ ಗೌತಮ್ 13 (12ಎ, 4X2), ಲಾಡ್ ಸಿ ಪಡಿಕ್ಕಲ್ ಬಿ ಗೌತಮ್ 32 (25ಎ, 4X5), ಶಿವಂ ಬಿ ಕಾರ್ಯಪ್ಪ 3 (6ಎ), ತಾರೆ ಔಟಾಗದೆ 12 (10ಎ, 4X1), ಅಮನ್ ಹಕೀಂ ಖಾನ್ ಸಿ ಕರುಣ್ ಬಿ ವಿದ್ಯಾಧರ್ 1(2ಎ), ಅಥರ್ವ ಅಂಕೋಲೆಕರ್ ಔಟಾಗದೆ 13 (8ಎ, 6X1)

ವಿಕೆಟ್ ಪತನ: 1–4 (ಪೃಥ್ವಿ ಶಾ; 0.3), 2–44 (ಯಶಸ್ವಿ ಜೈಸ್ವಾಲ್; 6.3), 3–125 (ಸಿದ್ಧೇಶ್ ಲಾಡ್; 15.2), 4–129 (ಅಜಿಂಕ್ಯ ರಹಾನೆ;16.3), 5–129 (ಶಿವಂ ದುಬೆ; 16.4), 6–130 (ಅಮನ್ ಖಾನ್; 17.1)

ಬೌಲಿಂಗ್

ಕೆ.ಸಿ. ಕಾರ್ಯಪ್ಪ 4–0–26–3, ಪ್ರಸಿದ್ಧ ಕೃಷ್ಣ 4–0–41–0,ಪ್ರತೀಕ್ ಜೈನ್ 4–0–39–0, ವಿದ್ಯಾಧರ ಪಾಟೀಲ 4–0–25–1, ಕೃಷ್ಣಪ್ಪ ಗೌತಮ್ 4–0–26–2.

ಫಲಿತಾಂಶ: ಕರ್ನಾಟಕ ತಂಡಕ್ಕೆ 9 ರನ್‌ಗಳ ಜಯ ಮತ್ತು 4 ಪಾಯಿಂಟ್ಸ್

ಇಂದಿನ ಪಂದ್ಯ: ಕರ್ನಾಟಕ– ಛತ್ತೀಸಗಡ 

ಶನಿವಾರದ ಪಂದ್ಯ: ಕರ್ನಾಟಕ–ಸರ್ವಿಸಸ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು