ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿ: ವೇದಾ ಶತಕಕ್ಕೆ ಒಲಿದ ಜಯ

ತಮಿಳುನಾಡಿಗೆ ಸೋಲುಣಿಸಿದ ಕರ್ನಾಟಕ
Last Updated 17 ಮಾರ್ಚ್ 2021, 14:29 IST
ಅಕ್ಷರ ಗಾತ್ರ

ಬೆಂಗಳೂರು: ವೇದಾ ಕೃಷ್ಣಮೂರ್ತಿ ಸೊಗಸಾದ ಶತಕ (103, 81 ಎಸೆತ, 14 ಬೌಂಡರಿ, 2 ಸಿಕ್ಸರ್‌) ದಾಖಲಿಸಿದರು. ಅವರ ಆಟದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 86 ರನ್‌ಗಳಿಂದ ತಮಿಳುನಾಡು ತಂಡವನ್ನು ಸೋಲಿಸಿತು.

ಚೆನ್ನೈನ ಎಸ್‌ಆರ್‌ಎಂಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಮಾಡಿ ಆರು ವಿಕೆಟ್‌ಗೆ 294 ರನ್ ಗಳಿಸಿತು. ಇದಕ್ಕುತ್ತರವಾಗಿ ತಮಿಳುನಾಡು 49ನೇ ಓವರ್‌ನಲ್ಲಿ 208 ರನ್ ಗಳಿಸಿ ಸರ್ವಪತನವಾಯಿತು.

ಕರ್ನಾಟಕದ ಪರ ಬ್ಯಾಟಿಂಗ್‌ನಲ್ಲಿ ವನಿತಾ ವಿ.ಆರ್‌ (21) ಹಾಗೂ ಎಸ್‌. ಶುಭಾ (60) ಮೊದಲ ವಿಕೆಟ್ ಜೊತೆಯಾಟದಲ್ಲಿ 39 ರನ್ ಸೇರಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಶುಭಾ ಜೊತೆಗೂಡಿದ ವೇದಾ ಮಿಂಚಿನ ಬ್ಯಾಟಿಂಗ್ ಮಾಡಿದರು. ಇವರಿಬ್ಬರ ಜೊತೆಯಾಟದಲ್ಲಿ 109 ರನ್‌ಗಳು ಹರಿದುಬಂದವು. ನಿಕಿ ಪ್ರಸಾದ್‌ (ಔಟಾಗದೆ 39) ಕೊಡುಗೆ ನೀಡಿದರು.

ಸೋಲಿನಲ್ಲೂ ಗಮನಸೆಳೆದ ತಮಿಳುನಾಡು ತಂಡದ ಆರ್ಷಿ ಚೌಧರಿ (96) ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಎಂ.ಎಸ್‌.ಶೈಲಜಾ (56) ಅರ್ಧಶತಕ ದಾಖಲಿಸಿದರು. ಆದರೆ ಉಳಿದ ಆಟಗಾರ್ತಿಯರು ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಬೌಲಿಂಗ್‌ನಲ್ಲೂ ಬೆಳಗಿದ ಕರ್ನಾಟಕದ ನಿಕಿ ಪ್ರಸಾದ್ (43ಕ್ಕೆ 3) ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 294 (ವೇದಾ ಕೃಷ್ಣಮೂರ್ತಿ 103, ಶುಭಾ ಎಸ್‌. 60, ನಿಕಿ ಪ್ರಸಾದ್ ಔಟಾಗದೆ 39, ದಿವ್ಯಾ ಜಿ. 26; ಕೆ.ಎನ್‌ ರಮ್ಯಶ್ರೀ 47ಕ್ಕೆ 2, ನಿರಂಜನಾ ನಾಗಾರ್ಜುನ 50ಕ್ಕೆ 2). ತಮಿಳುನಾಡು: 48.3 ಓವರ್‌ಗಳಲ್ಲಿ 208 (ಆರ್ಷಿ ಚೌಧರಿ 96, ಎಂ.ಎಸ್‌.ಶೈಲಜಾ 56; ಸಹನಾ ಎಸ್‌.ಪವಾರ್‌ 29ಕ್ಕೆ 2, ನಿಕಿ ಪ್ರಸಾದ್ 43ಕ್ಕೆ 3). ಫಲಿತಾಂಶ: ಕರ್ನಾಟಕ ತಂಡಕ್ಕೆ 86 ರನ್‌ಗಳ ಜಯ.

ನಾಗಾಲ್ಯಾಂಡ್‌ 17ಕ್ಕೆ ಆಲೌಟ್‌; ನಾಲ್ಕು ಎಸೆತಗಳಲ್ಲಿ ಪಂದ್ಯ ಗೆದ್ದ ಮುಂಬೈ!

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ನಾಗಾಲ್ಯಾಂಡ್ ಕೇವಲ 17 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ತಂಡ ಗೆಲುವಿನ ಗುರಿಯನ್ನು ಕೇವಲ ನಾಲ್ಕು ಎಸೆತಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ತಲುಪಿತು.

ನಾಗಾಲ್ಯಾಂಡ್‌ ತಂಡದ ಕಳಪೆ ಆಟಕ್ಕೆ ಕಾರಣವಾಗಿದ್ದು ಮುಂಬೈ ತಂಡದ ನಾಯಕಿ, ಮಧ್ಯಮವೇಗಿ ಸಯಾಲಿ ಸತಘರೆ ಅವರ ಬೌಲಿಂಗ್‌. 8.4 ಓವರ್ ಬೌಲಿಂಗ್ ಮಾಡಿದ ಅವರು ಗಳಿಸಿದ್ದು ಏಳು ವಿಕೆಟ್‌. ಕೇವಲ ಐದು ರನ್ ನೀಡಿದರು. ನಾಗಾಲ್ಯಾಂಡ್ ತಂಡದ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಸೊನ್ನೆ ಸುತ್ತಿದ್ದು ತಂಡಕ್ಕೆ ಮುಳುವಾಯಿತು. ಸರಿಬಾ (9) ವೈಯಕ್ತಿಕಗರಿಷ್ಠ ರನ್ ಗಳಿಸಿದರು.

ಮುಂಬೈ ತಂಡದ ಆರಂಭಿಕ ಆಟಗಾರ್ತಿಯರಾದ ಇಶಾ ಓಜಾ (13, 3 ಬೌಂಡರಿ, 4 ಎಸೆತ) ಹಾಗೂ ವೃಶಾಲಿ ಭಗತ್‌ (6, 1 ಸಿಕ್ಸರ್‌) ಮೊದಲ ಓವರ್‌ನಲ್ಲೇ ಪಂದ್ಯ ಮುಗಿಸಿದರು. ನೋಬಾಲ್ ರೂಪದಲ್ಲಿ ಒಂದು ರನ್ ತಂಡದ ಖಾತೆಗೆ ಸೇರಿತು. ಮುಂಬೈ 20 ರನ್‌ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT