ಕರ್ನಾಟಕಕ್ಕೆ ಚೊಚ್ಚಲ ಪ್ರಶಸ್ತಿ ನಿರೀಕ್ಷೆ: ಮಹಾರಾಷ್ಟ್ರ ಎದುರು ಫೈನಲ್‌

ಶನಿವಾರ, ಮಾರ್ಚ್ 23, 2019
24 °C
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ

ಕರ್ನಾಟಕಕ್ಕೆ ಚೊಚ್ಚಲ ಪ್ರಶಸ್ತಿ ನಿರೀಕ್ಷೆ: ಮಹಾರಾಷ್ಟ್ರ ಎದುರು ಫೈನಲ್‌

Published:
Updated:
Prajavani

ಇಂದೋರ್‌: ಲೀಗ್ ಮತ್ತು ಸೂಪರ್ ಲೀಗ್ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಭರವಸೆಯಲ್ಲಿರುವ ಕರ್ನಾಟಕ ತಂಡ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಕಣಕ್ಕೆ ಇಳಿಯಲಿದೆ.

ಗುರುವಾರ ಸಂಜೆ ನಡೆಯಲಿರುವ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಮಹಾರಾಷ್ಟ್ರದ ಸವಾಲನ್ನು ಎದುರಿಸಲಿದೆ. ಮಹಾರಾಷ್ಟ್ರ ಕೂಡ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿದ್ದು ಸೂಪರ್ ಲೀಗ್ ಹಂತದ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಹಂತಕ್ಕೆ ಲಗ್ಗೆ ಇರಿಸಿದೆ.

ಮಯಂಕ್‌ ಅಗರವಾಲ್‌, ಕರುಣ್ ನಾಯರ್‌, ಮನೀಷ್ ಪಾಂಡೆ, ರೋಹನ್ ಕದಂ ಮತ್ತು ಬಿ.ಆರ್.ಶರತ್‌ ಅವರನ್ನು ಒಳಗೊಂಡ ಕರ್ನಾಟಕದ ಬ್ಯಾಟಿಂಗ್ ಬಲಿಷ್ಠವಾಗಿದೆ. ಬೌಲಿಂಗ್‌ನಲ್ಲಿ ತಂಡಕ್ಕೆ ಆರ್‌.ವಿನಯಕುಮಾರ್‌, ವಿ.ಕೌಶಿಕ್‌, ಕೆ.ಸಿ.ಕಾರ್ಯಪ್ಪ, ಶ್ರೇಯಸ್ ಗೋಪಾಲ್ ಅವರ ಬಲವಿದೆ.

ಮಹಾರಾಷ್ಟ್ರವೂ ಬಲಿಷ್ಠವಾಗಿದೆ. ತಂಡ ಟೂರ್ನಿಯುದ್ದಕ್ಕೂ ಸಂಘಟಿತ ಹೋರಾಟದ ಮೂಲಕ ಎದುರಾಳಿಗಳನ್ನು ಕಂಗೆಡಿಸಿದೆ. ಅಂಕಿತ್ ಭಾವ್ನೆ, ನಿಖಿಲ್ ನಾಯಕ್‌ ಹಾಗೂ ನೌಶಾದ್ ಶೇಕ್‌ ಅವರು ಟೂರ್ನಿಯಲ್ಲಿ ತಂಡದ ಸಾಧನೆಗೆ ನೆರವಾಗಿದ್ದಾರೆ. ಆದರೆ ಕರ್ನಾಟಕದ ಬೌಲಿಂಗ್ ವಿಭಾಗದ ಮುಂದೆ ಇವರು ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕು.

ಎಡಗೈ ಮಧ್ಯಮ ವೇಗಿ ಸಮದ್ ಫಲ್ಲಾ ಅನುಭವಿ ವೇಗಿ ಡಿ.ಜೆ.ಮುತ್ತುಸ್ವಾಮಿ ಮತ್ತು ಎಡಗೈ ಸ್ಪಿನ್ನರ್‌ ಸತ್ಯಜೀತ್‌ ಬಚಾವ್‌ ಅವರ ದಾಳಿಗೆ ಉತ್ತರಿಸುವ ಸವಾಲು ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಮುಂದೆ ಇದೆ.

ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಇದೇ ಮೊದಲ ಬಾರಿ ಫೈನಲ್‌ಗೇರಿದೆ. ಈ ಬಾರಿ ಆರಂಭದಿಂದಲೇ ಅಮೋಘ ಆಟವಾಡಿ ಎಲ್ಲ ತಂಡಗಳ ಎದುರು ಕೂಡ ಪ್ರಾಬಲ್ಯ ಮೆರೆದಿದೆ. ಮಂಗಳವಾರ ನಡೆದ ಕೊನೆಯ ಸೂಪರ್ ಲೀಗ್ ಪಂದ್ಯ ಗೆಲ್ಲುವುದರೊಂದಿಗೆ ಟೂರ್ನಿಯ ಎಲ್ಲ 11 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಇದು ಒಟ್ಟಾರೆಯಾಗಿ ತಂಡದ ಸತತ 13 ಟ್ವೆಂಟಿ–20 ಜಯವಾಗಿದೆ. ಫೈನಲ್‌ನಲ್ಲೂ ಗೆದ್ದರೆ ದೇಶಿ ಕ್ರಿಕೆಟ್‌ನಲ್ಲಿ ಸತತ 14 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಸರಿಗಟ್ಟಲಿದೆ. 2014ರ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಒಟ್ಟು 14 ಗೆಲುವು ಸಾಧಿಸಿತ್ತು.

ಪಂದ್ಯ ಆರಂಭ: ಸಂಜೆ 5.30
ಸ್ಥಳ: ಹೋಳ್ಕರ್ ಕ್ರೀಡಾಂಗಣ, ಇಂದೋರ್‌
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !