ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್‌ ಕನಸು ಭಗ್ನಗೊಳಿಸಿದ ನ್ಯೂಜಿಲೆಂಡ್‌ ಆಟಗಾರ!

ಇಂಗ್ಲೆಂಡ್‌ಗೆ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಇಯಾನ್‌ ಮಾರ್ಗನ್‌ ಆ ದೇಶದವರಲ್ಲ
Last Updated 15 ಜುಲೈ 2019, 18:24 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಅಂಗಳದಲ್ಲಿ ನ್ಯೂಜಿಲೆಂಡ್‌ ತಂಡದ ಚೊಚ್ಚಲ ವಿಶ್ವಕಪ್‌ ಕನಸನ್ನು ಭಗ್ನಗೊಳಿಸಿದ್ದು ನ್ಯೂಜಿಲೆಂಡ್‌ ಆಟಗಾರ!

ಅಂತಿಮ ಎಸೆತದಲ್ಲಿ ರನ್‌ಔಟ್ ಆದ ಮಾರ್ಟಿನ್‌ ಗಪ್ಟಿಲ್‌ ಇರಬಹುದು ಎಂದು ನೀವು ಊಹಿಸುವುದು ಸಹಜ. ಆದರೆ ಅವರಲ್ಲ.

ಭಾನುವಾರದ ಫೈನಲ್‌ನಲ್ಲಿ ಆಲ್‌ ರೌಂಡ್‌ ಆಟದ ಮೂಲಕ ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟಿದ್ದ ಬೆನ್‌ ಸ್ಟೋಕ್ಸ್‌ ಮೂಲತಃ ನ್ಯೂಜಿಲೆಂಡ್‌ನವರು

ಅವರ ಪೂರ್ಣ ಹೆಸರು ಬೆಂಜಮಿನ್‌ ಆ್ಯಂಡ್ರ್ಯೂ ಸ್ಟೋಕ್ಸ್‌. 1991 ಜೂನ್‌ 4ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದ್ದರು.

ಸ್ಟೋಕ್ಸ್‌ ಅವರ ತಂದೆ ಗೆರಾರ್ಡ್‌ ಸ್ಟೋಕ್ಸ್‌ ರಗ್ಬಿ ಆಟಗಾರ. ವರ್ಕಿಂಗ್‌ಟನ್‌ ಟೌನ್‌ ಆರ್‌.ಎಲ್‌.ಎಫ್‌.ಕ್ಲಬ್‌ನ ಮುಖ್ಯ ಕೋಚ್‌ ಆಗಿ ನೇಮಕವಾದ ಕಾರಣ ಗೆರಾರ್ಡ್‌, ಇಂಗ್ಲೆಂಡ್‌ಗೆ ಬಂದು ನೆಲೆಸಿದರು. ಆಗ ಸ್ಟೋಕ್ಸ್‌ಗೆ 12ರ ಹರೆಯ. ಕಾಕರ್‌ಮೌಥ್‌ ಕ್ಲಬ್‌ನಲ್ಲಿ ಕ್ರಿಕೆಟ್‌ ಪಾಠಗಳನ್ನು ಕಲಿತ ಅವರು ವಿವಿಧ ವಯೋಮಾನದ ಟೂರ್ನಿಗಳಲ್ಲಿ ಮಿಂಚಿದರು. ಇಂಗ್ಲೆಂಡ್‌ನ ದೇಶಿಯ ಟೂರ್ನಿಗಳಲ್ಲೂ ಗಮನಾರ್ಹ ಸಾಮರ್ಥ್ಯ ತೋರಿದ್ದರು. ಹೀಗಾಗಿ ಅವರಿಗೆ ಇಂಗ್ಲೆಂಡ್‌ ತಂಡದಲ್ಲೂ ಸ್ಥಾನ ಲಭಿಸಿತು. 2011 ಆಗಸ್ಟ್‌ನಲ್ಲಿ ಐರ್ಲೆಂಡ್‌ ಎದುರು ಮೊದಲ ಏಕದಿನ ಪಂದ್ಯ ಆಡಿದ್ದರು.

ಎಡಗೈ ಬ್ಯಾಟ್ಸ್‌ಮನ್‌ ಸ್ಟೋಕ್ಸ್‌, ನ್ಯೂಜಿಲೆಂಡ್‌ ಎದುರಿನ ಫೈನಲ್‌ನಲ್ಲಿ ಒತ್ತಡದ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ ಆಡಿ ಅಭಿಮಾನಿಗಳ ಮನ ಗೆದ್ದಿದ್ದರು. ಅಜೇಯ 84ರನ್‌ ಗಳಿಸಿ ಇಂಗ್ಲೆಂಡ್‌ ತಂಡ ನಾಲ್ಕು ದಶಕಗಳ ನಂತರ ಟ್ರೋಫಿಗೆ ಮುತ್ತಿಕ್ಕಲು ಕಾರಣರಾಗಿದ್ದರು. ಸೂಪರ್‌ ಓವರ್‌ನಲ್ಲೂ ಮಿಂಚಿದ್ದ ಅವರಿಗೆ ಪಂದ್ಯಶ್ರೇಷ್ಠ ಗೌರವವೂ ಒಲಿದಿತ್ತು.

ಸ್ಟೋಕ್ಸ್‌ ಈಗ ಇಂಗ್ಲೆಂಡ್‌ನ ಡುರ್‌ ಹ್ಯಾಂನಲ್ಲಿ ವಾಸವಿದ್ದಾರೆ. ಆದರೆ ಅವರ ಪಾಲಕರು ಮಾತ್ರ ಕ್ರೈಸ್ಟ್‌ಚರ್ಚ್‌ನಲ್ಲೇ ನೆಲೆಸಿದ್ದಾರೆ.

ಕ್ರಿಕೆಟ್‌ ಜನಕರಿಗೆ ಚೊಚ್ಚಲ ವಿಶ್ವ ಕಪ್‌ ಗೆದ್ದುಕೊಟ್ಟ ನಾಯಕ ಎಂಬ ಹಿರಿಮೆಗೆ ಭಾಜನವಾಗಿರುವ ಇಯಾನ್‌ ಮಾರ್ಗನ್‌ ಕೂಡ ಆ ದೇಶದವರಲ್ಲ. ಅವರು ಜನಿಸಿದ್ದು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ.

ಎಡಗೈ ಬ್ಯಾಟ್ಸ್‌ಮನ್‌ ಮಾರ್ಗನ್‌ 2003ರಿಂದ 2009ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ ತಂಡವನ್ನು ಪ್ರತಿನಿಧಿಸಿದ್ದರು. 2006 ಆಗಸ್ಟ್‌ 5ರಂದು ಸ್ಕಾಟ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದರು.

ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌, ದಕ್ಷಿಣ ಆಫ್ರಿಕಾದವರು. ಅವರು ಬಾಲ್ಯ ಕಳೆದಿದ್ದು ಡರ್ಬನ್‌ನಲ್ಲಿ.

ಫೈನಲ್‌ ಪಂದ್ಯದ ಸೂಪರ್‌ ಓವರ್‌ನಲ್ಲಿ ಮೋಡಿ ಮಾಡಿದ್ದ ಜೋಫ್ರಾ ಆರ್ಚರ್‌ ಕೂಡಾ ಇಂಗ್ಲೆಂಡ್‌ನವರಲ್ಲ. 24ರ ಹರೆಯದ ಈ ಆಟಗಾರ, ಜನಿಸಿದ್ದು ಬಾರ್ಬಡೀಸ್‌ನ ಬ್ರಿಜ್‌ಟೌನ್‌ನಲ್ಲಿ. ತಂಡದ ಸ್ಪಿನ್ ಶಕ್ತಿಯಾಗಿರುವ ಮೋಯಿನ್‌ ಅಲಿ ಮತ್ತು ಆದಿಲ್‌ ರಶೀದ್‌ ಅವರ ಮೂಲ ಪಾಕಿಸ್ತಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT