ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಲ್ ರಾಹುಲ್ ಪಾಲಿನ ಆ ಕರಾಳ ಇಪ್ಪತ್ತೊಂಬತ್ತು ತಿಂಗಳುಗಳು! ವಿಶೇಷ ವರದಿ

ಕಣ್ಣಾವೂರು ಲೋಕೇಶ್ ರಾಹುಲ್ ಇದೆಲ್ಲವನ್ನೂ ಸಹಿಸಿಕೊಂಡರು. ಮೀರಿ ನಿಂತರು. ಮರಳಿ ಅರಳಿದರು.
Published 11 ಸೆಪ್ಟೆಂಬರ್ 2023, 14:36 IST
Last Updated 11 ಸೆಪ್ಟೆಂಬರ್ 2023, 14:36 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ  ಇಪ್ಪತ್ತೊಂಬತ್ತು ತಿಂಗಳುಗಳ  ಕೆ.ಎಲ್. ರಾಹುಲ್ ಪಾಲಿಗೆ ಹುಣ್ಣಿಮೆ ದಿನದ ಸಾಗರದ ಉಬ್ಬರದ ಅಲೆಗಳಲ್ಲಿ ಈಜಿದ ಅನುಭವ ನೀಡಿರಬಹುದು. 

ಈ ಅವಧಿಯಲ್ಲಿ ಅವರು ಎದುರಿಸಿದ ವೈಫಲ್ಯಗಳಿಗೆ ಲೆಕ್ಕವೇ ಇಲ್ಲ. ಆ ವೈಫಲ್ಯಗಳಿಂದ ಹೊರಬರುವುದು ಹೇಗೆಂಬ ಯೋಚನೆ ಒಂದು ಕಡೆಯಾದರೆ, ಅದಕ್ಕಾಗಿ ಸುರಿಯುತ್ತಿದ್ದ ಟೀಕೆಗಳ ಕಲ್ಲೇಟುಗಳ ನೋವನ್ನು ಅವಡುಗಚ್ಟಿ ಸಹಿಸಿಕೊಳ್ಳುವುದು ಇನ್ನೊಂದು ಸವಾಲು. ಮತ್ತೊಂದೆಡೆ ದೇಹವನ್ನು ಕಾಡಿದ ಗಾಯ, ಶಸ್ತ್ರಚಿಕಿತ್ಸೆ ಮತ್ತು ನೋವು ನಿವಾರಿಸಿಕೊಳ್ಳುವ ಸವಾಲು.

ಆದರೆ ಕಣ್ಣಾವೂರು ಲೋಕೇಶ್ ರಾಹುಲ್ ಇದೆಲ್ಲವನ್ನೂ ಸಹಿಸಿಕೊಂಡರು. ಮೀರಿ ನಿಂತರು.  ಮರಳಿ ಅರಳಿದರು. 

ಸೋಮವಾರ ಸಂಜೆ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಎದುರು ನಡೆದ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಶತಕ ಗಳಿಸಿದರು. ಎಡಗೈಯಲ್ಲಿ ಹೆಲ್ಮೆಟ್ ತೆಗೆದು ಹಿಡಿದು, ಬಲಗೈನಲ್ಲಿದ್ದ ಬ್ಯಾಟ್‌ ಅನ್ನು ಆಗಸಮುಖಿಯಾಗಿ ನೇರವಾಗಿ ಚಾಚಿದರು. ಕೆಲಕ್ಷಣ ಕಣ್ಮುಚ್ಚಿ ನಿಂತ ಅವರು  29 ತಿಂಗಳುಗಳ ನಂತರ ಒಲಿದ ಶತಕದ ಪುಳಕವನ್ನು ಅನುಭವಿಸಿದರು. 

2021ರ ಮಾರ್ಚ್‌ನಲ್ಲಿ ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ ನಂತರ ಇಲ್ಲಿಯವರೆಗೂ ಅವರು ಕಂಡ ಏಳು, ಬೀಳುಗಳಿಗೆ ಲೆಕ್ಕವೇ ಇಲ್ಲ. ಅಂದು ಗಳಿಸಿದ್ದ ಐದನೇ ಶತಕದಿಂದ, ಇಂದು ಹೊಡೆದ ಆರನೇ ಶತಕದವರೆಗೂ ಅವರ ವೃತ್ತಿಜೀವನವೇ ಅಂತ್ಯ ಕಂಡಿತೇನೋ ಎಂಬ ಪರಿಸ್ಥಿತಿಯೂ ಎದುರಾಗಿತ್ತು.

ಹೌದು; ಇದು ಅವರಿಗೆ ಕಮ್‌ಬ್ಯಾಕ್ ಪಂದ್ಯವಾಗಿದೆ.   ಐದು ತಿಂಗಳುಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಗಾಯಗೊಂಡ ನಂತರ ಅವರು ಕ್ರಿಕೆಟ್‌ನಿಂದ ದೂರವೇ ಇದ್ದರು. ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾದಾಗಲೂ ಅವರು ಪೂರ್ಣವಾಗಿ ಚೇತರಿಸಿಕೊಂಡಿದ್ದರ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದರು.  ಟೂರ್ನಿಗೆ ಮುನ್ನ ಅವರು ಸಣ್ಣ ಪ್ರಮಾಣದ ನೋವಿನಿಂದ ಬಳಲಿ, ಗುಂಪು ಹಂತದ ಎರಡು ಪಂದ್ಯಗಳಿಂದ ವಿಶ್ರಾಂತಿ ಪಡೆದರು.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮ್ಮ ಪತ್ನಿ ಅಥಿಯಾ ಶೆಟ್ಟಿಯವರೊಂದಿಗೆ ತೆರಳಿ ಪೂಜೆ ಸಲ್ಲಿಸಿ, ಶ್ರೀಲಂಕಾ ವಿಮಾನವೇರಿದ್ದರು.  ಭಾನುವಾರ ಪಾಕಿಸ್ತಾನ ಎದುರಿನ ಪಂದ್ಯ ಆರಂಭವಾದಾಗ ಶ್ರೇಯಸ್ ಅಯ್ಯರ್ ಅವರ ಬದಲಿಗೆ ರಾಹುಲ್ ಸ್ಥಾನ ಪಡೆದರು. ವಿಕೆಟ್‌ಕೀಪರ್ ಇಶಾನ್ ಕಿಶನ್ ಕೂಡ ಸ್ಥಾನ ಉಳಿಸಿಕೊಂಡರು. ಅಷ್ಟರಮಟ್ಟಿಗೆ  ಇಶಾನ್ ಅವರಿಗೆ ನ್ಯಾಯ ದಕ್ಕಿತು. ರಾಹುಲ್‌ಗಾಗಿ ಅವರು ಸ್ಥಾನ ಕಳೆದುಕೊಳ್ಳಲಿಲ್ಲ!

ಜೊತೆಗೆ ರಾಹುಲ್ ತಮ್ಮ ಆಯ್ಕೆಯನ್ನು ಭರ್ಜರಿಯಾಗಿಯೇ ಸಮರ್ಥಿಸಿಕೊಂಡರು.  106 ಎಸೆತಗಳಲ್ಲಿ ಅಜೇಯ 111 ರನ್‌ ಗಳಿಸಿದರು. ಅದರಲ್ಲಿ 48 ರನ್‌ಗಳು ಬೌಂಡರಿಗಳಿಂದ ಹಾಗೂ 12 ರನ್‌ಗಳು ಸಿಕ್ಸರ್‌ಗಳಿಂದ ಬಂದವು. ಉಳಿದ ರನ್‌ಗಳು ಒಂದು ಮತ್ತು ಎರಡು ರನ್‌ಗಳಿಂದ ಸೇರಿದವು.   ಇದು ಮಹತ್ವದ್ದು. ಏಕೆಂದರೆ ಇನ್ನೊಂದು ಬದಿಯಲ್ಲಿದ್ದದ್ದು ’ಸೂಪರ್ ಫಿಟ್‌‘ ಹಾಗೂ ‘ಸೂಪರ್ ಫಾಸ್ಟ್‌‘ ಆಟಗಾರ ವಿರಾಟ್ ಕೊಹ್ಲಿ. ಅವರೊಂದಿಗೆ ಜೊತೆಯಾಟ ಸುಲಭವಲ್ಲ.  ವಿಕೆಟ್‌ ನಡುವೆ ಮಿಂಚಿನ ವೇಗದಲ್ಲಿ ಓಡಿದರಷ್ಟೇ ದೊಡ್ಡ ಮೊತ್ತ ಪೇರಿಸಲು ಸಾಧ್ಯ. ಈ ಪರೀಕ್ಷೆಯಲ್ಲಿ ರಾಹುಲ್ ಗೆದ್ದರು. ಅವರ ಓಟಗಳಲ್ಲಿ ಎಡವಟ್ಟಾಗಲೀ, ದಣಿವಾಗಲೀ ಇರಲಿಲ್ಲ.  31 ವರ್ಷದ ರಾಹುಲ್ ತಮ್ಮ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿರುವುದರ ಶುಭ ಲಕ್ಷಣ ಇದು ಎಂಬುದರಲ್ಲಿ ಅನುಮಾನವೇ ಇಲ್ಲ. 

ಏಕೆಂದರೆ; ಮುಂದಿನ ತಿಂಗಳು ಭಾರತದ ಆತಿಥ್ಯದಲ್ಲಿಯೇ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಕ್ಕೂ ರಾಹುಲ್ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರು ಪಾಕ್ ಎದುರು ಗಳಿಸಿರುವ ಅಜೇಯ ಶತಕ ಮಹತ್ವದ್ದಾಗಿದೆ. ಇನ್ನು ಅವರ ಮುಂದೆ ಇರುವುದು ವಿಕೆಟ್‌ಕೀಪಿಂಗ್ ಸವಾಲು. ಆದರೆ ಅವರು ಮತ್ತೆ ಗಾಯಗೊಳ್ಳುವ ಅಪಾಯವನ್ನು ಲೆಕ್ಕಾ ಹಾಕಿರುವ   ತಂಡದ ಆಯ್ಕೆಗಾರರು ಮತ್ತು ವ್ಯವಸ್ಥಾಪಕರು ಇಶಾನ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ರಿಷಭ್ ಪಂತ್ ಅನುಪಸ್ಥಿತಿಯನ್ನು ತುಂಬುವ ಭರವಸೆ ಮೂಡಿದೆ.  ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಿಷ್ಠವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಏಕದಿನ ಕ್ರಿಕೆಟ್‌ನಲ್ಲಿ 55 ಪಂದ್ಯಗಳನ್ನು ಆಡಿರುವ ಅನುಭವಿ ರಾಹುಲ್ ಎರಡು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅದೂ 80.57ರ ಸ್ಟ್ರೈಕ್‌ರೇಟ್‌ನಲ್ಲಿ.

ಆರಂಭಿಕ ಬ್ಯಾಟರ್ ಆಗಿ ಬೆಳೆದ ರಾಹುಲ್, ಈಗ ನಾಲ್ಕು, ಐದು, ಆರು ಮತ್ತು ಏಳನೇ ಕ್ರಮಾಂಕಗಳಲ್ಲಿಯೂ ತಾವು ಉಪಯುಕ್ತ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.  ಇದರಿಂದಾಗಿಯೇ ಅವರು ಪ್ರಸ್ತುತವಾಗಿರುವುದು. ಅವರು ಹಲವು ಬಾರಿ ವೈಫಲ್ಯ ಅನುಭವಿಸಿದರೂ ಅವರಿಗೆ ಹೆಚ್ಚು ಅವಕಾಶ ಕೊಟ್ಟಿರುವುದು ಕೂಡ ಇದೇ ಕಾರಣವಿರಬಹುದು.  ಜೊತೆಗೆ ಕೀಪಿಂಗ್‌ಗೂ ಒಗ್ಗಿಕೊಂಡಿದ್ದಾರೆ.  ಇದೇ ಲಯವನ್ನು ಅವರು ಏಷ್ಯಾ ಕಪ್ ಟೂರ್ನಿಯ ಇನ್ನುಳಿದ ಪಂದ್ಯಗಳು, ಆಸ್ಟ್ರೇಲಿಯಾ ಎದುರಿನ ಸರಣಿ ಮತ್ತು ವಿಶ್ವಕಪ್ ಟೂರ್ನಿಯಲ್ಲಿಯೂ ಮುಂದುವರಿಸಿದರೆ ಕನ್ನಡಿಗರೆಲ್ಲರಿಗೂ ಹೆಮ್ಮೆಪಡಲು ಹಲವು ಕಾರಣಗಳು ಸಿಗಬಹುದು.

ಕೆ.ಎಲ್. ರಾಹುಲ್  –ಎಎಫ್‌ಪಿ ಚಿತ್ರ
ಕೆ.ಎಲ್. ರಾಹುಲ್  –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT