ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ವರ್ತನೆ ಕೊಂಡಾಡಿದ ಪಾಕ್‌ ಆಟಗಾರ್ತಿ ಸನಾ ಮಿರ್‌

ಸೋಲನ್ನೂ ಗೌರವದಿಂದ ಸ್ವೀಕರಿಸಿದ ಕೊಹ್ಲಿ ಆದರ್ಶಪ್ರಾಯ ಎಂದ ಪಾಕ್‌ ಆಟಗಾರ್ತಿ
Last Updated 26 ಅಕ್ಟೋಬರ್ 2021, 14:25 IST
ಅಕ್ಷರ ಗಾತ್ರ

ದುಬೈ: ಪಾಕಿಸ್ತಾನ ತಂಡದ ಎದುರು ತಮ್ಮ ತಂಡವು ಸೋತರೂ ನಾಯಕ ವಿರಾಟ್ ಕೊಹ್ಲಿ ತೋರಿದ ಕ್ರೀಡಾ ಮನೋಭಾವದ ಮತ್ತು ಸೌಹಾರ್ದಯುತ ನಡವಳಿಕೆಯೂ ಅಮೋಘವಾದದ್ದು. ಅವರು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಪಾಕ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್ ಶ್ಲಾಘಿಸಿದ್ದಾರೆ.

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ –12 ಸುತ್ತಿನ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್‌ಗಳಿಂದ ಪಾಕ್ ಎದುರು ಸೋತಿತ್ತು. ಪಂದ್ಯ ಮುಗಿದ ಕೂಡಲೇ ವಿರಾಟ್, ಪಾಕ್ ತಂಡದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಆಲಂಗಿಸಿ ಅಭಿನಂದಿಸಿದ್ದರು.

‘ವಿರಾಟ್ ಅವರು ಸೋಲನ್ನು ಸಮಚಿತ್ತದಿಂದ ಸ್ವೀಕರಿಸಿದರು. ಗೌರವಯುತವಾಗಿ ನಡೆದುಕೊಂಡರು. ಅವರ ಕ್ರೀಡಾಸ್ಫೂರ್ತಿಯನ್ನು ನಾನು ಬಹಳ ಮೆಚ್ಚಿಕೊಂಡಿದ್ದೇನೆ. ಯುವ ಹಾಗೂ ತಾರಾ ಆಟಗಾರರು ಅವರನ್ನು ನೋಡಿ ಕಲಿಯಬೇಕು’ ಎಂದು ಸನಾ ಹೇಳಿದ್ದಾರೆ.

‘ಈ ನಡವಳಿಕೆಯು ಅವರಲ್ಲಿರುವ ಮಾನಸಿಕ ಸದೃಢತೆ, ಭದ್ರತಾ ಭಾವ ಮತ್ತು ಮರಳಿ ಪುಟಿದೇಳುವ ಸಾಮರ್ಥ್ಯದ ಪ್ರತೀಕವಾಗಿದೆ. ಭಾರತ ತಂಡವು ಮತ್ತೆ ಗೆಲುವಿನ ಹಾದಿಗೆ ಮರಳುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪಾಕ್ ತಂಡದ ನಾಯಕ ಬಾಬರ್ ಆಜಂ ಕೂಡ ಅಭಿನಂದನಾರ್ಹರು. ಅವರು ಈ ಗೆಲುವಿನ ಸಂಭ್ರಮದಲ್ಲಿ ಕಳೆದುಹೋಗಿಲ್ಲ. ಮುಂದಿನ ಪಂದ್ಯಗಳ ಯೋಜನೆ ರೂಪಿಸುವತ್ತ ಚಿತ್ತ ನೆಟ್ಟಿದ್ದಾರೆ. ಇದು ಅವರಲ್ಲಿರುವ ವೃತ್ತಿಪರತೆಯನ್ನು ತೋರಿಸುತ್ತದೆ’ ಎಂದಿದ್ದಾರೆ.

ಮ್ಯಾಥ್ಯೂ ಹೇಡನ್ ಮೆಚ್ಚುಗೆ
‘ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರೀಡಾ ಸಹೋದರತ್ವವನ್ನು ತೋರಿಸಿರುವುದು ಮಾದರಿಯಾಗಿದೆ’ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

‘ಕ್ರೀಡೆ ನೀಡಬೇಕಾದ ಸಂದೇಶವೇ ಇದು. ಪಂದ್ಯದ ನಂತರ ತಂಡದ ನಾಯಕ ವಿರಾಟ್ ಮತ್ತು ಮಾರ್ಗದರ್ಶಕ ಮಹೇಂದ್ರಸಿಂಗ್ ಧೋನಿ ಅವರು ಪಾಕ್ ತಂಡದ ಕೆಲವು ಆಟಗಾರರೊಂದಿಗೆ ಮಾತನಾಡಿದರು. ತುರುಸಿನ ಪೈಪೋಟಿಯ ನಂತರವೂ ಉಭಯ ತಂಡಗಳು ಪರಸ್ಪರ ಬೆರೆತರು. ಇದೊಂದು ಸುಂದರ ಭಾವ’ ಎಂದು ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಹೇಡನ್ ಶ್ಲಾಘಿಸಿದರು.

ಶಮಿ ಶ್ರೇಷ್ಠ ಬೌಲರ್: ರಿಜ್ವಾನ್
‘ಭಾರತದ ಮೊಹಮ್ಮದ್ ಶಮಿ ಅವರು ಪ್ರಸ್ತುತ ಕ್ರಿಕೆಟ್ ಕ್ಷೇತ್ರದಲ್ಲಿ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರನ್ನು ಗೌರವಿಸುವುದು ಕರ್ತವ್ಯ. ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಬೇಡಿ’ ಎಂದು ಪಾಕಿಸ್ತಾನ ತಂಡದ ವಿಕೆಟ್‌ಕೀಪರ್ ಮೊಹಮ್ಮದ್ ರಿಜ್ವಾನ್ ಮನವಿ ಮಾಡಿದ್ದಾರೆ.

ಭಾರತ ಸೋತ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶಮಿಯನ್ನು ಟ್ರೋಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಿಜ್ವಾನ್ ಪ್ರತಿಕ್ರಿಯಿಸಿದ್ದಾರೆ.

‘ಒಬ್ಬ ಆಟಗಾರನು ಎದುರಿಸುವ ಒತ್ತಡ, ಪರಿಶ್ರಮ, ಕಷ್ಟ, ನಷ್ಟಗಳ ಬಗ್ಗೆ ಅವನಿಗೇ ಗೊತ್ತಿರುತ್ತದೆ. ಅಂತಹ ಎಲ್ಲ ಕಠಿಣ ಸವಾಲುಗಳನ್ನೂ ಗೆದ್ದು ವಿಶ್ವ ಶ್ರೇಷ್ಠ ಬೌಲರ್‌ಗಳಲ್ಲಿ ಶಮಿ ಸ್ಥಾನ ಪಡೆದಿದ್ದಾರೆ’ ಎಂದು ರಿಜ್ವಾನ್ ಹೇಳಿದ್ದಾರೆ.

‘ಈ ಆಟವು ಎಲ್ಲರನ್ನು ಪರಸ್ಪರ ಸಮೀಪ ತರಬೇಕು. ಮಧುರ ಬಾಂಧವ್ಯ ವೃದ್ಧಿಯಾಗಬೇಕು. ನಿಮ್ಮ ಕ್ರೀಡಾ ತಾರೆಗಳನ್ನು ಗೌರವಿಸಿ’ ಎಂದು ರಿಜ್ವಾನ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT