ಶುಕ್ರವಾರ, ಡಿಸೆಂಬರ್ 6, 2019
24 °C
30ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

ಆಳಕ್ಕಿಳಿದ ಕ್ರಿಕೆಟ್‌ ಮೋಸದಾಟದ ಬೇರು: ಫಿಕ್ಸಿಂಗ್‌ಗೆ ಸ್ಯಾಂಡಲ್‌ವುಡ್‌ ನಂಟು?

Published:
Updated:

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಪಂದ್ಯಾವಳಿಯ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ಸ್ಯಾಂಡಲ್‌ವುಡ್‌ನ ಕೆಲ ತಾರೆಯರು, ಮಾಡೆಲ್‌ಗಳು ಮತ್ತಿತರರು ಸಕ್ರಿಯವಾಗಿರುವ ಬಗ್ಗೆ ‍ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿರುವ ಕೆಲವು ನಟಿಯರೂ ಭಾರಿ ಹಣ ಗಳಿಸಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಹಣದ ಮೂಲ ಯಾವುದು? ಎಷ್ಟು ಸಿನಿಮಾನಗಳಲ್ಲಿ ನಟಿಸಿದ್ದಾರೆ? ಎಷ್ಟು ಸಂಭಾವನೆ ಪಡೆದಿದ್ದಾರೆ? ಬೇರೆ ಯಾವುದಾದರೂ ಮೂಲ ಇದೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಂದ್ಯಗಳ ಬಳಿಕ ಪಂಚತಾರಾ ಹೊಟೇಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಆಟಗಾರರು, ತರಬೇತುದಾರರು, ತಂಡಗಳ ಮಾಲೀಕರ ಜೊತೆ ಸ್ಯಾಂಡಲ್‌ವುಡ್‌ನ ಕೆಲ ತಾರೆಯರು ಹಾಗೂ ಮಾಡೆಲ್‌ಗಳು ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣ ಕುರಿತು ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪೊಲೀಸ್‌ ಕಮಿಷನರ್‌ ಭಾಸ್ಕರ ರಾವ್‌, ‘ಸ್ಯಾಂಡಲ್‌ವುಡ್‌ ತಾರೆಯರ ಪಾತ್ರ ಕುರಿತು ಈ ಹಂತದಲ್ಲಿ ಏನನ್ನೂ ಹೇಳಲಾರೆ’ ಎಂದು ಪ್ರತಿಕ್ರಿಯಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ 30ಕ್ಕೂ ಹೆಚ್ಚು ಜನರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್‌ ಕಮಿಷನರ್‌ (ಅಪರಾಧ) ಸಂದೀಪ್‌ ಪಾಟೀಲ ತಿಳಿಸಿದರು. ಆದರೆ, ಯಾರಿಗೆ  ನೋಟಿಸ್‌ ಜಾರಿಯಾಗಿದೆ ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಕ್ರಿಕೆಟ್‌ಗೆ ಸಂಬಂಧಪಡದ ವ್ಯಕ್ತಿಗಳು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಒಳ ಉಡುಪು ಸಗಟು ವ್ಯಾಪಾರಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಟ್ಟೆ ವ್ಯಾಪಾರಿಗಳು, ಟ್ರಾವೆಲ್‌ ಏಜೆಂಟರು, ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡವರು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಶಂಕೆಗಳಿವೆ ಎಂದು ಕಮಿಷನರ್‌ ಸ್ಪಷ್ಟಪಡಿಸಿದರು.

ಪ್ರಾಸಿಕ್ಯೂಷನ್‌ ಸಾಕ್ಷಿಗಳಾದರೆ ರಕ್ಷಣೆ

ಬೆಟ್ಟಿಂಗ್‌ ‍ಪ್ರಕರಣದಲ್ಲಿ ಆರೋಪಕ್ಕೆ ಒಳಗಾದವರು ಪ್ರಾಸಿಕ್ಯೂಷನ್‌ ಸಾಕ್ಷಿ (ಅಪ್ರೂವರ್‌) ಆಗಲು ಒಪ್ಪಿದರೆ ಅಂಥವರಿಗೆ ರಕ್ಷಣೆ ನೀಡಿ ಶಿಕ್ಷೆಯಿಂದ ವಿನಾಯ್ತಿ ಕೊಡಲಾಗುವುದು ಪೊಲೀಸ್‌ ಕಮಿಷನರ್‌ ಹೇಳಿದರು.

ಆರೋಪಿಗಳು ಅಪ್ರೂವರ್‌ ಆಗಲು ದಂಡ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ಅವಕಾಶವಿದೆ. ಆದರೆ, ಅವರು ಬೆಟ್ಟಿಂಗ್‌ ಹಾಗೂ ಮ್ಯಾಚ್‌ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕೊಟ್ಟು ತನಿಖೆಗೆ ಸಹಕರಿಸಬೇಕು ಎಂದು ಭಾಸ್ಕರ ರಾವ್‌ ತಿಳಿಸಿದರು.

ಪೊಲೀಸರ ವಶಕ್ಕೆ ಸುಧೀಂದ್ರ ಶಿಂಧೆ

ಕೆಲವು ಮ್ಯಾಚ್‌ಗಳನ್ನು ಫಿಕ್ಸ್‌ ಮಾಡಿದ ಆರೋಪದ ಮೇಲೆ ಮಂಗಳವಾರ ಬಂಧಿಸಲಾದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಯಿತು.

ಹೆಚ್ಚಿನ ವಿಚಾರಣೆಗಾಗಿ ಕೋರ್ಟ್‌ ಶಿಂಧೆ ಅವರನ್ನು ಪೊಲೀಸರ ವಶಕ್ಕೆ ನೀಡಿದೆ. ಹಗರಣದಲ್ಲಿ ಭಾಗಿಯಾಗಿರುವ ಇನ್ನೂ ಹಲವರನ್ನು ಪತ್ತೆ ಹಚ್ಚಬೇಕಿರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ.

ಶಿಂಧೆ ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ಕ್ರಿಕೆಟ್‌ ಕ್ಲಬ್‌ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅವರ ಸಂಪರ್ಕಕ್ಕೆ ಬಂದ ಅಲಿ, ಮ್ಯಾಚ್‌ಗಳನ್ನು ಪ್ರಾಯೋಜಿಸಿದ್ದಾರೆ. ಆನಂತರ, ಇಬ್ಬರೂ ಸೇರಿಕೊಂಡು ಮ್ಯಾಚ್‌ ಫಿಕ್ಸಿಂಗ್‌ ಜಾಲ ಸೃಷ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2020ರ ಕೆಪಿಎಲ್‌ ಟೂರ್ನಿ ರದ್ದು

 

ಮೋಸದಾಟದ ಕುರಿತು ತನಿಖೆ ನಡೆಯುತ್ತಿರುವುದರಿಂದ 2020ರ ಕೆಪಿಎಲ್‌ ಆವೃತ್ತಿಯನ್ನು ರದ್ದುಗೊಳಿಸಲಾಗಿದೆ.

‘ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಪಂದ್ಯಾವಳಿಯನ್ನು ರದ್ದುಪಡಿಸುವಂತೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ರಾಜ್ಯ ಕ್ರಿಕೆಟ್‌ ಸಂಸ್ಥೆ ಸ್ಪಂದಿಸಿ ಈ ತೀರ್ಮಾನ ಕೈಗೊಂಡಿದೆ’ ಎಂದು ಸಂದೀಪ್‌ ಪಾಟೀಲ ತಿಳಿಸಿದ್ದಾರೆ.

***

ಪೊಲೀಸರಿಂದ ಯಾವುದೇ ನೋಟಿಸ್‌ ಬಂದಿಲ್ಲ. ಕೆಪಿಎಲ್‌ಗೆ ನಾನು ರಾಯಭಾರಿಯಾಗಿರುವುದು ಗುಡ್‌ವಿಲ್‌ಗಾಗಿ ಅಷ್ಟೇ. ಕೆಪಿಎಲ್‌ನಿಂದ ಹಣ ಪಡೆದುಕೊಂಡಿಲ್ಲ

- ರಾಗಿಣಿ ದ್ವಿವೇದಿ, ನಟಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು