ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಅಭ್ಯಾಸದ ಕೊರತೆ ಕಾಡಲಿದೆ: ದಿಲೀಪ್ ವೆಂಗ್‌ಸರ್ಕಾರ್

ಮಾಜಿ ಕ್ರಿಕೆಟಿಗ ಅಭಿಮತ
Last Updated 6 ಜೂನ್ 2021, 13:06 IST
ಅಕ್ಷರ ಗಾತ್ರ

ಮುಂಬೈ: ನ್ಯೂಜಿಲೆಂಡ್ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಅಭ್ಯಾಸದ ಕೊರತೆ ಕಾಡದು ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಸಾಕಷ್ಟು ಅಭ್ಯಾಸ ಮಾಡದೆ ಕಣಕ್ಕೆ ಇಳಿಯುವುದರಿಂದ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಜೂನ್‌ 18ರಂದು ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಭಾರತ ತಂಡ ಗುರುವಾರ ಇಂಗ್ಲೆಂಡ್ ತಲುಪಿದ್ದು ಸೌತಾಂಪ್ಟನ್‌ನಲ್ಲಿ ಮೂರು ದಿನಗಳ ಕಠಿಣ ಕ್ವಾರಂಟೈನ್‌ನಲ್ಲಿದೆ. ಎದುರಾಳಿ ನ್ಯೂಜಿಲೆಂಡ್ ಆತಿಥೇಯ ಇಂಗ್ಲೆಂಡ್ ಎದುರು ಟೆಸ್ಟ್‌ ಪಂದ್ಯಗಳನ್ನು ಆಡುತ್ತಿದೆ. ಮೊದಲ ಟೆಸ್ಟ್ ಭಾನುವಾರ ಮುಕ್ತಾಯಗೊಂಡಿದೆ.

‘ವಿರಾಟ್ ಕೊಹ್ಲಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೂ ಅಭ್ಯಾಸದ ಕೊರತೆ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯವಾದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಅದು ಸ್ಪಷ್ಟವಾಗಿ ಗೋಚರಿಸಲಿದೆ’ ಎಂದು ಭಾರತದ ಪರ 116 ಟೆಸ್ಟ್ ಪಂದ್ಯಗಳನ್ನು ಆಡಿರುವ ವೆಂಗ್‌ಸರ್ಕಾರ್ ಹೇಳಿದರು.

‘ವಿರಾಟ್ ಕೊಹ್ಲಿ ಬಹಳ ಕಾಲದಿಂದ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಅತ್ಯದ್ಭುತ ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿರಾಟ್, ರೋಹಿತ್ ಶರ್ಮಾ ಮುಂತಾದವರು ಜಗತ್ತಿನ ಅತಿಶ್ರೇಷ್ಠ ಆಟಗಾರರು. ತಂಡವನ್ನು ಗೆಲ್ಲಿಸುವಲ್ಲಿ ಅವರ ಪಾತ್ರ ಮಹತ್ವದ್ದು. ಆದರೆ ಈಗ ಅಭ್ಯಾಸದ ಕೊರತೆ ಅವರನ್ನು ಕಾಡಲಿದೆ’ ಎಂದು ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ವೆಂಗ್‌ಸರ್ಕಾರ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT