ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಾರ್ಡ್ಸ್‌ನಲ್ಲಿ ಮೊದಲ ಸಲ ಮಹಿಳಾ ಟೆಸ್ಟ್: 2026ರಲ್ಲಿ ಭಾರತ–ಇಂಗ್ಲೆಂಡ್ ಮುಖಾಮುಖಿ

Published 22 ಆಗಸ್ಟ್ 2024, 14:23 IST
Last Updated 22 ಆಗಸ್ಟ್ 2024, 14:23 IST
ಅಕ್ಷರ ಗಾತ್ರ

ಲಂಡನ್‌: ಮೊದಲ ಬಾರಿ ಲಾರ್ಡ್ಸ್‌ ಕ್ರಿಕೆಟ್ ಕ್ರೀಡಾಂಗಣವು ಮಹಿಳಾ ಕ್ರಿಕೆಟ್‌ ಟೆಸ್ಟ್‌ ಪಂದ್ಯವೊಂದರ ಆತಿಥ್ಯ ವಹಿಸಲಿದೆ. ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ 2026ರಲ್ಲಿ ಈ ಟೆಸ್ಟ್ ಪಂದ್ಯ ‘ಕ್ರಿಕೆಟ್‌ನ ತವರು’ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಗುರುವಾರ ಪ್ರಕಟಿಸಿದೆ.

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು 2025ರ ಜುಲೈನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದಕ್ಕೆ ಮೊದಲು ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ನಂತರ ಏಕೈಕ ಟೆಸ್ಟ್‌ ಪಂದ್ಯ ಆಡಲು ಭಾರತ 2026ರಲ್ಲಿ ಮತ್ತೆ ಇಂಗ್ಲೆಂಡ್‌ಗೆ ತೆರಳಲಿದೆ ಎಂದು ಇಸಿಬಿ ಹೇಳಿದೆ.

‘ಭಾರತ ಮಹಿಳಾ ತಂಡ 2026ರಲ್ಲಿ ಮರಳಲಿದ್ದು, ಇಂಗ್ಲೆಡ್‌ ಮಹಿಳೆಯರ ವಿರುದ್ಧ ಲಾರ್ಡ್ಸ್‌ನಲ್ಲಿ ಮೊದಲ ಬಾರಿ ಮಹಿಳೆಯರ ಟೆಸ್ಟ್‌ ಪಂದ್ಯವೊಂದರಲ್ಲಿ ಆಡಲಿದೆ ಎಂಬುದನ್ನು ಖಚಿತಪಡಿಸುತ್ತಿದ್ದೇವೆ. ಇದು ವಿಶೇಷ ಸಂದರ್ಭವಾಗಲಿದೆ. ಮಹತ್ವದ್ದು ಕೂಡ’ ಎಂದು ಇಸಿಬಿ ಸಿಇಒ ರಿಚರ್ಡ್‌ ಗೌಲ್ಡ್‌ ಹೇಳಿರುವುದಾಗಿ ಮಂಡಳಿಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಟಿ20 ಸರಣಿಯ ಮೊದಲ ಪಂದ್ಯ ಜೂನ್ 28ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜುಲೈ 1ರಂದು ಬ್ರಿಸ್ಟಲ್‌ನಲ್ಲಿ, ಮೂರನೇ ಪಂದ್ಯ ಜುಲೈ 4ರಂದು ಓವಲ್‌ನಲ್ಲಿ ಹಾಗೂ ಕೊನೆಯ ಎರಡು ಪಂದ್ಯಗಳು ಕ್ರಮವಾಗಿ ಜುಲೈ 9 ಮತ್ತು 12ರಂದು ಓಲ್ಡ್‌ ಟ್ರಾಫರ್ಡ್‌ ಮತ್ತು ಎಜ್ಬಾಸ್ಟನ್‌ನಲ್ಲಿ ನಡೆಯಲಿದೆ.

ಏಕದಿನ ಸರಣಿಯ ಮೊದಲ ಪಂದ್ಯ ಸೌತಾಂಪ್ಟನ್‌ನಲ್ಲಿ ಜುಲೈ 16ರಂದು, ಎರಡನೇ ಪಂದ್ಯ ಲಾರ್ಡ್ಸ್‌ನಲ್ಲಿ ಜುಲೈ 19ರಂದು ಹಾಗೂ ಮೂರನೇ ಪಂದ್ಯ ಚೆಸ್ಟರ್‌–ಲಿ–ಸ್ಟ್ರೀಟ್‌ನಲ್ಲಿ ಜುಲೈ 22ರಂದು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT