ಶನಿವಾರ, ಸೆಪ್ಟೆಂಬರ್ 24, 2022
24 °C
ಮಂಗಳೂರಿಗೆ 66 ರನ್‌ಗಳ ಸೋಲು

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ | ಅನಿರುದ್ಧ ಮಿಂಚು: ಬೆಂಗಳೂರಿಗೆ ಜಯ

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಿಂಚಿನ ಅರ್ಧ ಶತಕ ಸಿಡಿಸಿದ ಅನಿರುದ್ಧ ಜೋಶಿ ಬ್ಯಾಟಿಂಗ್‌ ಬಲದಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಇಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಜಯ ಸಾಧಿಸಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು ಮಂಗಳೂರು ಯುನೈಟೆಡ್‌ ತಂಡವನ್ನು 66 ರನ್‌ಗಳಿಂದ ಮಣಿಸಿತು.

ಟಾಸ್‌ ಗೆದ್ದ ಮಂಗಳೂರು ನಾಯಕ ಆರ್‌.ಸಮರ್ಥ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಎಲ್‌.ಆರ್‌.ಚೇತನ್‌ (6) ಬೇಗನೆ ಔಟಾದರೆ, ಮಯಂಕ್‌ ಅಗರವಾಲ್‌ (47; 27ಎ, 4x2, 6x3) ಬಿರುಸಿನ ಆಟವಾಡಿದರು. ಅವರಿಗೆ ಕೆ.ವಿ.ಅನಿಷ್‌ (40) ಸಾಥ್ ನೀಡಿದರು.

ಅನಿರುದ್ಧ ಅಬ್ಬರ: 3ನೇ ಕ್ರಮಾಂಕದಲ್ಲಿ ಅನಿರುದ್ಧ ಜೋಶಿ (57; 24ಎ, 4x7, 6x3) ಸ್ಪೋಟಕ ಆಟವಾಡಿದರು. ಅನುಭವಿ ಬೌಲರ್‌ಗಳಾದ ಎಚ್‌.ಎಸ್‌.ಶರತ್‌, ವೈಶಾಖ್ ವಿಜಯ್‌ ಕುಮಾರ್‌ ಅವರನ್ನು ದಂಡಿಸಿದರು. ರಕ್ಷಿತ್ ಶಿವಕುಮಾರ್‌ (34) ಜೊತೆ ಕೊನೆಯ 5 ಓವರ್‌ಗಳಲ್ಲಿ 68 ರನ್‌ ದೋಚಿದ ಅವರು, ತಂಡವು 20 ಓವರ್‌ಗಳಲ್ಲಿ 4ಕ್ಕೆ 191 ರನ್‌ ಪೇರಿಸಲು ನೆರವಾದರು.

ಗುರಿ ಬೆನ್ನಟ್ಟಿದ ಮಂಗಳೂರು ಯುನೈಟೆಡ್‌ ಆರಂಭಿಕ ಆಘಾತ ಅನುಭವಿಸಿತು. ಮ್ಯಾಕ್‌ನೈಲ್‌ ನೊರೊನ್ಹಾ (5), ನಿಖಿನ್ ಜೋಸ್‌ (7), ಅನೀಶ್ವರ್‌ ಗೌತಮ್‌ (1), ಸುಜಯ್‌ ಸತೇರಿ (8) ಒಂದಂಕಿ ದಾಟಲಿಲ್ಲ. ಏಕಾಂಗಿ ಹೋರಾಟ ನಡೆಸಿದ್ದ ನಾಯಕ ಆರ್‌.ಸಮರ್ಥ್‌ (32; 24ಎ, 4x4) ಕೂಡ ವಿಕೆಟ್‌ ಒಪ್ಪಿಸಿದರು.

ಬಿರುಗಾಳಿ ಬೌಲಿಂಗ್‌: ಬೆಂಗಳೂರಿನ ಮಧ್ಯಮ ವೇಗಿ ಟಿ.ಪ್ರದೀಪ್‌ (20ಕ್ಕೆ 3) ಹಾಗೂ ಸ್ಪಿನ್ನರ್‌ ರಿಷಿ ಬೋಪಣ್ಣ (26ಕ್ಕೆ 3) ಜೋಡಿಯ ಬೌಲಿಂಗ್ ದಾಳಿಗೆ ಮಂಗಳೂರು ನಲುಗಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಅಭಿನವ್ ಮನೋಹರ್‌ (23; 17ಎ, 4x1, 6x2), ಬೋಪಣ್ಣಗೆ ವಿಕೆಟ್‌ ಒಪ್ಪಿಸಿದರು. 

ಮೂರು ಸಿಕ್ಸರ್‌ ಸಿಡಿಸಿ ಭರವಸೆ ಮೂಡಿಸಿದ್ದ ಎಚ್‌.ಎಸ್‌.ಶರತ್‌ (ಅಜೇಯ 22) ಹೋರಾಟ ಫಲಿಸಲಿಲ್ಲ. ಮಂಗಳೂರು 16 ಓವರ್‌ಗಳಲ್ಲಿಯೇ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಲವ್‌ನಿತ್‌ ಅರ್ಧಶತಕ; ಹುಬ್ಬಳ್ಳಿಗೆ ಜಯ: ಎಡಗೈ ಬ್ಯಾಟರ್‌ ಲವ್‌ನಿತ್‌ ಸಿಸೊಡಿಯಾ (ಅಜೇಯ 96; 55ಎ, 4x10, 6x4) ಸಿಡಿಸಿದ ಅಮೋಘ ಅರ್ಧ ಶತಕದ ಬಲದಿಂದ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ 5 ವಿಕೆಟ್‌ಗಳಿಂದ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್‌: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 4ಕ್ಕೆ 191 (ಅನಿರುದ್ಧ ಜೋಶಿ 57, ಮಯಂಕ್‌ ಅಗರ್‌ವಾಲ್ 47. ಸೋಮಣ್ಣ 19ಕ್ಕೆ 1) ಮಂಗಳೂರು ಯುನೈಟೆಡ್‌ 16 ಓವರ್‌ ಗಳಲ್ಲಿ 10ಕ್ಕೆ 125 (ಆರ್‌.ಸಮರ್ಥ್‌ 32, ಅಭಿನವ್‌ ಮನೋಹರ್‌ 23. ಟಿ.ಪ್ರದೀಪ್‌ 20ಕ್ಕೆ 3, ರಿಷಿ ಬೋಪಣ್ಣ 26ಕ್ಕೆ 3)

ಫಲಿತಾಂಶ: ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್‌ಗೆ 66 ರನ್‌ ಜಯ.

ನಾಳಿನ ಪಂದ್ಯಗಳು: ಮೈಸೂರು ವಾರಿಯರ್ಸ್‌– ಮಂಗಳೂರು ಯುನೈಟೆಡ್‌ (ಮಧ್ಯಾಹ್ನ 3ರಿಂದ), ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್– ಶಿವ ಮೊಗ್ಗ ಸ್ಟ್ರೈಕರ್ಸ್ (ರಾತ್ರಿ 7ರಿಂದ). ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಫ್ಯಾನ್‌ಕೋಡ್‌ ಆ್ಯಪ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು