ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಗೆ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದ ಮೋದಿ 

Last Updated 20 ಆಗಸ್ಟ್ 2020, 15:54 IST
ಅಕ್ಷರ ಗಾತ್ರ
ADVERTISEMENT
""
""

ದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಧನ್ಯವಾದ ಅರ್ಪಿಸಿ, ಭಾವುಕ ಪತ್ರ ಬರೆದಿದ್ದಾರೆ.

ಪ್ರಧಾನಿ ಬರೆದ ಸುದೀರ್ಘ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್‌ ಧೋನಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪತ್ರಕ್ಕಾಗಿ ಧೋನಿ ಅವರು ಮೋದಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಧೋನಿ ಅವರ ಕ್ರಿಕೆಟ್ ರಂಗದ ಸಾಧನೆ ಹಾಗೂ ಭಾರತ ಮತ್ತು ವಿಶ್ವದ ಕ್ರೀಡೆಗಾಗಿ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ತಮ್ಮ ಪತ್ರದಲ್ಲಿ ಸ್ಮರಿಸಿದ್ದಾರೆ.

ಧೋನಿ ಕಳೆದ ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಶನಿವಾರ ‘ನನ್ನನ್ನು ನಿವೃತ್ತ ಆಟಗಾರ ಎಂದು ಪರಿಗಣಿಸಿ’ ಎಂದಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದ ಧೋನಿ ಆ ನಿರ್ಧಾರದ ನಂತರ ಸಾಮಾಜಿಕ ತಾಣಕ್ಕೆ ಹಾಕಿದ ಮೊದಲ ಪೋಸ್ಟ್ ಇದಾಗಿದೆ.

‘ಯುವ ಸಮುದಾಯಕ್ಕೆ ಗುರಿಮುಟ್ಟಲು ಕುಟುಂಬದ ಹೆಸರು ಅಗತ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ ವ್ಯಕ್ತಿ ನೀವು. ಸ್ವಂತಿಕೆಯಲ್ಲೇ ಅಸಾಮಾನ್ಯವಾದುದನ್ನು ಸಾಧಿಸಬಹುದು ಎಂಬುದನ್ನು ಸಾಬೀತು ಮಾಡಿದ್ದೀರಿ. ನಾವು ಯಾವ ಪರಿಸ್ಥಿತಿಯಿಂದ ಬಂದಿದ್ದೇವೆ ಎಂಬುದಕ್ಕಿಂತ ಎಲ್ಲಿಗೆ ತಲುಪಿದ್ದೇವೆ ಎಂಬುದು ಮುಖ್ಯ ಎಂಬ ಸಿದ್ಧಾಂತ ನಿಮ್ಮ ಮೂಲಕ ಯುವಪೀಳಿಗೆಗೆ ತಲುಪಿದೆ’ ಎಂದು ಎರಡು ಬಾರಿಯ ವಿಶ್ವಕಪ್ ವಿಜೇತ ಆಟಗಾರನಿಗೆ ಬರೆದ ಪತ್ರದಲ್ಲಿ ಮೋದಿ ಹೇಳಿದ್ದಾರೆ.

ಸುದೀರ್ಘ ಪತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ತಲೆಕೂದಲಿನ ವಿನ್ಯಾಸದ ಬಗ್ಗೆಯೂ ಮೋದಿ ಪ್ರಸ್ತಾಪಿಸಿದ್ದಾರೆ. ಸೋಲು ಮತ್ತು ಗೆಲುವನ್ನು ಯಾವ ಉದ್ವೇಗವೂ ಇಲ್ಲದೆ ಸ್ವೀಕರಿಸುತ್ತಿದ್ದ ನಿಮ್ಮ ನಡೆ ಯುವಸಮುದಾಯ ಪಾಲಿಸಬೇಕಾದ ಮುಖ್ಯ ಗುಣ. ನಿಮ್ಮಂಥ ನಾಯಕ ಮತ್ತು ವಿಕೆಟ್ ಕೀಪರ್‌ ಕ್ರಿಕೆಟ್ ಜಗತ್ತಿಗೇ ಅಪರೂಪ. ಕಠಿಣ ಪರಿಸ್ಥಿತಿಯಲ್ಲಿ ನೀವು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಮತ್ತು ಪಂದ್ಯಗಳನ್ನು ‘ಫಿನಿಶ್’ ಮಾಡುತ್ತಿದ್ದ ವಿಧಾನ ಶ್ಲಾಘನೀಯ. 2011ರ ವಿಶ್ವಕಪ್ ಫೈನಲ್‌ನಲ್ಲಿ ನೀವು ತೋರಿದ ಆತ್ಮಸ್ಥೈರ್ಯವನ್ನು ಮರೆಯುವುದಾದರೂ ಹೇಗೆ ಎಂದು ಹೇಳಿದ್ದಾರೆ.

ಗಡಿ ರಕ್ಷಣಾ ಪಡೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಹೇಂದ್ರ ಸಿಂಗ್ ಧೋನಿ, ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿ ‘ಕಲಾವಿದರು, ಸೈನಿಕರು ಮತ್ತು ಕ್ರೀಡಾಪಟುಗಳಿಗೆ ತಮ್ಮ ಸಾಧನೆಯನ್ನು ಜಗತ್ತು ಗುರುತಿಸಿದಾಗ ಸಿಗುವಷ್ಟು ಖುಷಿ ಬೇರೆ ಯಾವುದರಿಂದಲೂ ಸಿಗಲಾರದು. ಪ್ರಧಾನಿಗಳೇ, ನಿಮ್ಮ ಶುಭಕಾಮನೆ ಮತ್ತು ಅಭಿನಂದನೆಗಳಿಗೆ ವಂದನೆಗಳು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT