ಭಾನುವಾರ, ಡಿಸೆಂಬರ್ 8, 2019
21 °C
ನಾಯಕ ಮನೀಷ್‌ ಪಾಂಡೆ ಅರ್ಧಶತಕದ ಸೊಬಗು: ತಮಿಳುನಾಡಿಗೆ ನಿರಾಸೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಸತತ 2ನೇ ಸಲ ಪ್ರಶಸ್ತಿ ಗೆದ್ದ ಕರ್ನಾಟಕ

Published:
Updated:

ಸೂರತ್: ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಭಾನುವಾರ ರಾತ್ರಿ ಚೆಂಡಿನ ಜೊತೆಗೆ ಪಂದ್ಯದ ಫಲಿತಾಂಶಕ್ಕೂ ತಿರುವು ನೀಡಿದ್ದರು. ಕೈಜಾರಿ ಹೋಗಿದ್ದ ಗೆಲುವನ್ನು ಮರಳಿ ಕರ್ನಾಟಕದ ಮಡಿಲಿಗೆ ತಂದು ಹಾಕಿದರು. ಇದರಿಂದಾಗಿ ಸತತ ಎರಡನೇ ವರ್ಷ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟ್ರೋಫಿ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಕರ್ನಾಟಕದ್ದಾಯಿತು.

ಲಾಲ್‌ಭಾಯಿ ಕಾಂಟ್ರ್ಯಾಕ್ಟರ್‌ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್‌ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ರೋಚಕ ಫೈನಲ್‌ನಲ್ಲಿ ಕರ್ನಾಟಕ ತಂಡವು ಒಂದು ರನ್‌ನಿಂದ ತಮಿಳುನಾಡು ತಂಡಕ್ಕೆ ಸೋಲಿನ ಕಹಿ ಉಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಒಡ್ಡಿದ್ದ 180 ರನ್‌ಗಳ ಸವಾಲನ್ನು ಬೆನ್ನಟ್ಟಿದ್ದ ತಮಿಳುನಾಡು ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು. ಆದರೆ ನಾಟಕೀಯ ತಿರುವುಗಳನ್ನು ಕಂಡ ಕೊನೆಯ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್ ಮೇಲುಗೈ ಸಾಧಿಸಿದರು. ಆರು ಎಸೆತಗಳಲ್ಲಿ 14 ರನ್‌ಗಳ ಅವಶ್ಯಕತೆ ಇತ್ತು. 

ಗೌತಮ್ ಹಾಕಿದ ಮೊದಲ ಎರಡೂ ಎಸೆತಗಳನ್ನು ಬೌಂಡರಿಗೆ ಕಳಿಸಿದ ತಮಿಳುನಾಡು ಆಫ್‌ಸ್ಪಿನ್ನರ್  ಆರ್. ಆಶ್ವಿನ್ ತಮ್ಮ ತಂಡವನ್ನು ಜಯದ ಬಾಗಿಲಿಗೆ ತಂದು ನಿಲ್ಲಿಸಿದರು. ಮೂರನೇ ಎಸೆತದಲ್ಲಿ ಬೀಟ್ ಆದ ಅಶ್ವಿನ್ ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಐದನೇ ಎಸೆತವನ್ನು ಬೌಂಡರಿ ದಾಟಿಸಲು ವಿಜಯಶಂಕರ್ ಯತ್ನಿಸಿದರು.

ಅಲ್ಲಿದ್ದ ಫೀಲ್ಡರ್ ಪಾಂಡೆ ಎಸೆದ ಥ್ರೋ ಕಲೆಕ್ಟ್‌ ಮಾಡಿದ ವಿಕೆಟ್‌ಕೀಪರ್ ಕೆ.ಎಲ್. ರಾಹುಲ್‌ ಬೇಲ್ಸ್‌ ಎಗರಿಸಿದರು. ಎರಡನೇ ರನ್ ಪೂರೈಸುವ ಮೊದಲೇ ವಿಜಯಶಂಕರ್ ಔಟಾದರು. ಬೇಸರದಿಂದ ಮರಳಿದರು. ಕ್ರೀಸ್‌ಗೆ ಬಂದ ಮುರುಗನ್ ಅಶ್ವಿನ್ ಅವರಿಗೆ ಗೌತಮ್ ಹಾಕಿದ ಎಸೆತವನ್ನು ಆಡಲು ಸಾಧ್ಯವಾಗಲಿಲ್ಲ. ಚೆಂಡು ಬ್ಯಾಟ್‌ ಮತ್ತು ಪ್ಯಾಡ್‌ಗೆ ಬಡಿದು ಅವರ ಮುಂದೆಯೇ ಉರುಳಿತು. ಓಡಿ ಹೋಗಿ ಚೆಂಡು ಕೈಗೆ ತೆಗೆದುಕೊಂಡ ಗೌತಮ್ ಬ್ಯಾಟ್ಸ್‌ಮನ್‌ಗಳಿಗೆ ಎರಡನೇ ರನ್ ಓಡುವ ಅವಕಾಶವನ್ನೇ ಕೊಡಲಿಲ್ಲ. ತಮಿಳುನಾಡು ತಂಡದ ‘ಟೈ’ ಮಾಡಿಕೊಳ್ಳುವ ಆಸೆಯೂ ಕಮರಿತು. ದಿನೇಶ್ ಕಾರ್ತಿಕ್ (20 ರನ್), ಬಾಬಾ ಅಪರಾಜಿತ್ (40ರನ್)  ಅವರ ಪ್ರಯತ್ನಗಳೂ ವ್ಯರ್ಥವಾದವು. 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 179 ರನ್‌ ಗಳಿಸಿದ ತಮಿಳುನಾಡು ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಿನೇಶ್ ಬಳಗವು ಕರ್ನಾಟಕ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರವನ್ನು ವಿಫಲಗೊಳಿಸಿದ ನಾಯಕ ಮನೀಷ್ ಪಾಂಡೆ (ಔಟಾಗದೆ 60; 45ಎಸೆತ, 4ಬೌಂಡರಿ, 2ಸಿಕ್ಸರ್) ಕರ್ನಾಟಕವು ಸವಾಲಿನ ಮೊತ್ತ ಪೇರಿಸಲು ಕಾರಣರಾದರು.  

ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಉತ್ತಮ ಆರಂಭವನ್ನೇ ನೀಡಿದರು. ಅದರಲ್ಲೂ ರಾಹುಲ್ (22; 15ಎಸೆತ, 2ಬೌಂಡರಿ, 1 ಸಿಕ್ಸರ್) ತಮಿಳುನಾಡು ತಂಡದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ದಂಡಿಸಿದರು. ಇವರಿಬ್ಬರ ಸೆಣಸಾಟದಲ್ಲಿ ಕೊನೆಗೂ ಅಶ್ವಿನ್ ಮೇಲುಗೈ ಸಾಧಿಸಿದರು. ಐದನೇ ಓವರ್‌ನಲ್ಲಿ ರಾಹುಲ್ ವಿಕೆಟ್ ಕಬಳಿಸಿದರು. ತಮ್ಮ ನಂತರದ ಎಸೆತದಲ್ಲಿ ಅಶ್ವಿನ್ ಅವರು ಮಯಂಕ್ ಅವರನ್ನು ತಾವೇ ಕ್ಯಾಚ್ ಮಾಡಿ ಕುಣಿದಾಡಿದರು. ಆದರೆ ಅವರ ಹ್ಯಾಟ್ರಿಕ್ ಕನಸಿಗೆ ಮನೀಷ್ ಅಡ್ಡಿಯಾದರು.

ಇನ್ನೊಂದು ಬದಿಯಲ್ಲಿ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ದೇವದತ್ತ (32;23ಎ, 3ಬೌಂ,2ಸಿ) ಜೊತೆಗೆ ಮನೀಷ್ ಅಬ್ಬರದ ಆಟಕ್ಕೆ ಕುದುರಿಕೊಂಡರು. ಟಿ.ನಟರಾಜ್ ಬೌಲಿಂಗ್ ಮಾಡಿದ್ದ ನಾಲ್ಕನೇ ಓವರ್‌ನಲ್ಲಿ ಬೌನ್ಸರ್‌ ಒಂದು ದೇವದತ್ತ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಆದರೂ ಉತ್ತಮವಾಗಿ ಆಡಿದ ದೇವದತ್ತ ಮನೀಷ್ ಜೊತೆಗೆ ಮೂರನೇ ವಿಕೆಟ್‌ಗೆ 48 ರನ್‌ ಸೇರಿಸಿದರು. ಹತ್ತನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಎಸೆತದ ತಿರುವು ಅಂದಾಜಿಸುವಲ್ಲಿ ವಿಫಲರಾದ ದೇವದತ್ತ ಕ್ಲೀನ್‌ಬೌಲ್ಡ್ ಆದರು. ಮನೀಷ್ ರೋಹನ್ ಕದಂ ಜೊತೆಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 65 ರನ್‌ ಪೇರಿಸಿದರು. 

ಅಭಿನಂದನೆ: ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕ ತಂಡವನ್ನು ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಅಭಿನಂದಿಸಿದ್ದಾರೆ.

ಮಿಥುನ್‌ಗೆ ವಿಶ್ರಾಂತಿ
ಸೆಮಿಫೈನಲ್‌ನಲ್ಲಿ ಒಂದೇ ಓವರ್‌ನಲ್ಲಿ ಐದು ವಿಕೆಟ್‌ ಗಳಿಸಿದ್ದ ಮಧ್ಯಮವೇಗಿ ಅಭಿಮನ್ಯು ಮಿಥುನ್ ಅವರಿಗೆ ವಿಶ್ರಾಂತಿ ನೀಡಲಾಯಿತು. ಮೂವರು ಸ್ಪಿನ್ನರ್ ಮತ್ತು ಇಬ್ಬರು ಮಧ್ಯಮವೇಗಿಗಳೊಂದಿಗೆ ಕರ್ನಾಟಕವು ಕಣಕ್ಕಿಳಿಯಿತು.

ಮನೀಷ್ ಬಳಗವು ಈ ವರ್ಷ ತಮಿಳುನಾಡು ತಂಡವನ್ನು ಮೂರನೇ ಸಲ ಎದುರಿಸುತ್ತಿದೆ. ಈ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಗೆದ್ದಿತ್ತು. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿಯೂ ಕರ್ನಾಟಕ ಗೆದ್ದಿತ್ತು.

ಅಂದು ಕರುಣ್; ಇಂದು ಪಾಂಡೆ
ಹೋದ ವರ್ಷ ತಂಡವು ಇಂದೋರ್‌ನಲ್ಲಿ  ನಡೆದ ಫೈನಲ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಾಗ  ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ನಾಯಕತ್ವ ವಹಿಸಿದ್ದರು. ಈ ಬಾರಿ ಮನೀಷ್ ಪಾಂಡೆ ನಾಯಕರಾಗಿ ದ್ದಾರೆ. ಹೋದ ವರ್ಷ ಮಹಾರಾಷ್ಟ್ರ ತಂಡದ ವಿರುದ್ಧ ಕರ್ನಾಟಕ ಜಯಿಸಿತ್ತು. ಸತತ ಎರಡು ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿರುವ ಏಕೈಕ ತಂಡ ಕರ್ನಾಟಕವಾಗಿದೆ. ಒಟ್ಟು ಎರಡು ಬಾರಿ ಪ್ರಶಸ್ತಿ ಜಯಿಸಿದ ಮೂರನೇ ತಂಡವೂ ಹೌದು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು