ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್ | ಬಾಂಗ್ಲಾ ಎದುರು ಭಾರತಕ್ಕೆ 343 ರನ್‌ಗಳ ಮುನ್ನಡೆ

Last Updated 15 ನವೆಂಬರ್ 2019, 12:18 IST
ಅಕ್ಷರ ಗಾತ್ರ

ಇಂದೋರ್‌:ಕನ್ನಡಿಗ ಮಯಂಕ್‌ ಅಗರವಾಲ್‌ ಅಮೋಘ ದ್ವಿಶತಕದ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 343ರನ್‌ ಗಳ ಮುನ್ನಡೆ ಸಾಧಿಸಿದೆ.

ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾ ತಂಡ ಕೇವಲ 150 ರನ್‌ಗಳಿಗೆ ಪ್ರಥಮ ಇನಿಂಗ್ಸ್‌ ಮುಗಿಸಿತ್ತು. ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಹಾಗೂ ನಾಯಕ ವಿರಾಟ್‌ ಕೊಹ್ಲಿ ಕೈಕೊಟ್ಟರೂ, ಅಗರವಾಲ್‌, ಟೆಸ್ಟ್‌ ಪರಿಣತ ಚೇತೇಶ್ವರ ಪೂಜಾರ, ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದರು.

330 ಎಸೆತಗಳನ್ನು ಆಡಿದಅಗರವಾಲ್‌ 243ರನ್‌ ಗಳಿಸಿದರು. ಅವರಿಗೆ ರಹಾನೆ(86) ಹಾಗೂ ಪೂಜಾರ(54) ಉತ್ತಮ ನೆರವು ನೀಡಿದರು. ಕೊನೆಯಲ್ಲಿ ಏಕದಿನ ಕ್ರಿಕೆಟ್‌ನಂತೆ ಬ್ಯಾಟ್‌ ಬೀಸಿದ ರವೀಂದ್ರ ಜಡೇಜಾ 76 ಎಸೆತಗಳಲ್ಲಿ 60 ಗಳಿಸಿದರೆ, ಟಿ–20 ಶೈಲಿಯಲ್ಲಿಬೀಸಾಟಕ್ಕೆ ಮುಂದಾದ ಉಮೇಶ್‌ ಯಾದವ್‌ಕೇವಲ 10 ಎಸೆತಗಳಲ್ಲಿ ಮೂರು ಸಿಕ್ಸರ್‌, ಒಂದು ಬೌಂಡರಿ ಸಹಿತ 25 ರನ್‌ ದೋಚಿದರು.ಹೀಗಾಗಿ ಪ್ರವಾಸಿ ತಂಡದೆದುರು ಭಾರತ ದೊಡ್ಡ ಅಂತರದ ಮುನ್ನಡೆ ಸಾಧಿಸಲು ಸಾಧ್ಯವಾಯಿತು.

ಸದ್ಯ ಎರಡನೇ ದಿನದಾಟದ ಅಂತ್ಯಕ್ಕೆ ಕೊಹ್ಲಿ ಪಡೆ 114 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 493 ರನ್‌ ಕಲೆ ಹಾಕಿದೆ. ಜಡೇಜಾ ಮತ್ತು ಯಾದವ್‌ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಒಂದೇ ದಿನ 200+ ರನ್‌ ಕಲೆ ಹಾಕಿದ 6ನೇ ಆಟಗಾರ ಮಯಂಕ್‌
ಟೆಸ್ಟ್‌ ಪಂದ್ಯದ ದಿನವೊಂದರಲ್ಲೇಭಾರತ ಪರ 200ಕ್ಕೂ ಹೆಚ್ಚು ರನ್‌ ಗಳಿಸಿದ ಆರನೇ ಆಟಗಾರ ಎಂಬ ಶ್ರೇಯಕ್ಕೆ ಅಗರವಾಲ್‌ ಪಾತ್ರರಾದರು. ಅವರು ಶುಕ್ರವಾರ ಒಂದೇ ದಿನ 206ರನ್‌ ಕಲೆ ಹಾಕಿದರು.

2009–10ರಲ್ಲಿ ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್‌ 284ರನ್‌ ಕಲೆ ಹಾಕಿದ್ದರು. 2007–08ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿಯೂ ಇದೇ ರೀತಿಯ ಸಾಧನೆ ಮಾಡಿದ್ದ ಅವರು 257ರನ್‌ ದೋಚಿದ್ದರು.

ಬಳಿಕ 2016ರ–17ರಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಕರುಣ್‌ ನಾಯರ್‌(232), ಪಾಕಿಸ್ತಾನ ವಿರುದ್ಧ ಪಂಜಾಬ್‌ ಪ್ರಾಂತ್ಯದ ಮುಲ್ತಾನ್‌ನಲ್ಲಿ ನಡೆದ ಪಂದ್ಯದಲ್ಲಿ ಸೆಹ್ವಾಗ್‌(228) ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಹೇಂದ್ರ ಸಿಂಗ್‌ ದೋನಿ(206) 2012–13ರಲ್ಲಿ ಈ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT