ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL | ಚೊಚ್ಚಲ ಪ್ರಶಸ್ತಿಗಾಗಿ ಸೆಣಸಾಟ: ಮುಂಬೈಗೆ 132 ರನ್ ಗುರಿ ನೀಡಿದ ಡೆಲ್ಲಿ

10ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಅರ್ಧಶತಕದ ಜೊತೆಯಾಟವಾಡಿದ ರಾಧಾ–ಶಿಖಾ
Last Updated 26 ಮಾರ್ಚ್ 2023, 16:04 IST
ಅಕ್ಷರ ಗಾತ್ರ

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪಡೆ ಮುಂಬೈ ಇಂಡಿಯನ್ಸ್‌ಗೆ 132 ರನ್‌ಗಳ ಸಾಧಾರಣ ಗುರಿ ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಆಕ್ರಮಣಕಾರಿ ಆಟಕ್ಕೆ ಮುಂದಾದ ಶೆಫಾಲಿ ವರ್ಮಾ ಕೇವಲ 4 ಎಸೆತಗಳಲ್ಲಿ 11 ರನ್‌ ಗಳಿಸಿ ಔಟಾದರು. ನಂತರ ಬಂದ ಅಲೀಸ್‌ ಕ್ಯಾಪ್ಸಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿಕೊಂಡರು.

ಜೆಮಿಮಾ ರಾಡ್ರಿಗಸ್‌ (9) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ ಆರು ರನ್‌ ಅಂತರದಲ್ಲಿ ಮೆರಿಜಾನೆ ಕಾಪ್ (18), ನಾಯಕಿ ಮೆಗ್‌ ಲ್ಯಾನಿಂಗ್‌ (35), ಅರುಂಧತಿ ರೆಡ್ಡಿ (0), ಜೆಸ್‌ ಜೊನಾಸೆನ್ (2) ಮತ್ತು ಮಿನ್ನು ಮಣಿ (1) ವಿಕೆಟ್ ಒಪ್ಪಿಸಿದರು. ಹೀಗಾಗಿ ಡೆಲ್ಲಿ ತಂಡದ ಮೊತ್ತ 16 ಓವರ್‌ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 79 ರನ್‌ ಆಗಿತ್ತು.

ಮಿಂಚಿದ ರಾಧಾ–ಶಿಖಾ
ಈ ಹಂತದಲ್ಲಿ ಜೊತೆಯಾದ ರಾಧಾ ಯಾದವ್‌ ಮತ್ತು ಶಿಖಾ ಪಾಂಡೆ ಮುರಿಯದ 10ನೇ ವಿಕೆಟ್‌ ಪಾಲುದಾರಿಕೆಯಲ್ಲಿ 52 ರನ್‌ ಕೂಡಿಸಿದರು. ರಾಧಾ 12 ಎಸೆತಗಳಲ್ಲಿ ತಲಾ 2 ಸಿಕ್ಸರ್‌ ಹಾಗೂ ಬೌಂಡರಿ ಸಹಿತ 27 ರನ್ ಸಿಡಿಸಿದರು. ಶಿಖಾ 17 ಎಸೆತಗಳಲ್ಲಿ 27 ರನ್ ಚಚ್ಚಿದರು. ಅವರ ಬ್ಯಾಟ್‌ನಿಂದ ಮೂರು ಬೌಂಡರಿ ಮತ್ತು 1 ಸಿಕ್ಸರ್‌ ಮೂಡಿತು.

ಇವರಿಬ್ಬರು, 19 ಮತ್ತು 20ನೇ ಓವರ್‌ಗಳಲ್ಲಿ ಕ್ರಮವಾಗಿ 20 ಮತ್ತು 16 ರನ್‌ ದೋಚಿದರು.

ಹೀಗಾಗಿ ಡೆಲ್ಲಿ ತಂಡ ಸಮಾಧಾನಕರ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಮುಂಬೈ ಪರ ಅಮೋಘ ಬೌಲಿಂಗ್ ನಡೆಸಿದ ಹೆಯಿಲಿ ಮ್ಯಾಥ್ಯೂಸ್ 4 ಓವರ್‌ಗಳಲ್ಲಿ ಕೇವಲ 5 ರನ್‌ ನೀಡಿ ಪ್ರಮುಖ 3 ವಿಕೆಟ್‌ ಕಿತ್ತರು. ಇಸಾಬೆಲ್‌ ವಾಂಗ್ 42 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಉರುಳಿಸಿದರು. ಅಮೇಲಿ ಕೆರ್ 2 ವಿಕೆಟ್‌ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್‌: ಮೆಗ್‌ ಲ್ಯಾನಿಂಗ್‌ (ನಾಯಕಿ), ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ, ಜೆಸ್‌ ಜೊನಾಸೆನ್, ಅಲೀಸ್‌ ಕ್ಯಾಪ್ಸಿ, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಮೆರಿಜಾನೆ ಕಾಪ್

ಮುಂಬೈ ಇಂಡಿಯನ್ಸ್‌: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ನಥಾಲಿ ಸಿವೆರ್‌ ಬ್ರಂಟ್, ಅಮೇಲಿ ಕೆರ್, ಪೂಜಾ ವಸ್ತ್ರಕರ್‌, ಯಷ್ಟಿಕಾ ಭಾಟಿಯಾ, ಇಸಾಬೆಲ್‌ ವಾಂಗ್, ಅಮನ್‌ಜ್ಯೋತ್‌ ಕೌರ್, ಸೈಕಾ ಇಶಾಕ್, ಹೆಯಿಲಿ ಮ್ಯಾಥ್ಯೂಸ್, ಜಿಂತಮಣಿ ಕಲಿತಾ, ಹುಮೇರಾ ಖಾಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT