ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ನಂತರ ಮಿಥಾಲಿ ರಾಜ್ ಕ್ರಿಕೆಟ್‌ಗೆ ವಿದಾಯ?

Last Updated 24 ಏಪ್ರಿಲ್ 2021, 13:10 IST
ಅಕ್ಷರ ಗಾತ್ರ

ನವದೆಹಲಿ: ಎರಡು ದಶಕಗಳಿಂದ ಮಹಿಳೆಯರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಮಿಥಾಲಿ ರಾಜ್ ಅವರಿಗೆ ಮುಂದಿನ ವರ್ಷದ ಏಕದಿನ ವಿಶ್ವಕಪ್ ಕೊನೆಯ ಟೂರ್ನಿಯಾಗಲಿದೆಯೇ..? ಹೌದು ಎಂಬುದನ್ನು ಶನಿವಾರ ಅವರೇ ಹೇಳಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ತಮ್ಮ ‘ಹಂಸಗೀತೆ’(ವಿದಾಯ ಘೋಷಿಸುವ ಕಾರ್ಯಕ್ರಮ) ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಮಿಥಾಲಿ ಅವರಿಗೆ ಈಗ 38 ವರ್ಷ. 23 ವರ್ಷಗಳಿಂದ ಭಾರತ ಕ್ರಿಕೆಟ್‌ ತಂಡದಲ್ಲಿದ್ದಾರೆ.

ಬೊರಿಯಾ ಮಜುಂದಾರ್ ಮತ್ತು ಗೌತಮ್‌ ಭಟ್ಟಾಚಾರ್ಯ ಬರೆದಿರುವ, ಹಾರ್ಪರ್ ಕೊಲಿನ್ಸ್‌ ಸಂಸ್ಥೆ ಪ್ರಕಟಿಸಿರುವ ‘1971: ದಿ ಬಿಗಿನಿಂಗ್ ಆಫ್ ಇಂಡಿಯಾಸ್ ಕ್ರಿಕೆಟಿಂಗ್ ಗ್ರೇಟ್‌ನೆಸ್‌’ ಕೃತಿಯ ವರ್ಚುವಲ್ ಬಿಡುಗಡೆ ಸಮಾರಂಭ ಶನಿವಾರ ನಡೆಯಿತು. ನಂತರ ಸಂವಾದದಲ್ಲಿ ಪಾಲ್ಗೊಂಡ ಮಿಥಾಲಿ ನ್ಯೂಜಿಲೆಂಡ್‌ ಪಿಚ್‌ನಲ್ಲಿ ಯಶಸ್ಸು ಕಾಣಬೇಕಾದರೆ ಭಾರತ ತಂಡಕ್ಕೆ ಉತ್ತಮ ವೇಗದ ಬೌಲರ್‌ಗಳ ಅಗತ್ಯವಿದೆ ಎಂದರು.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ಗಳಿಸಿದ ಏಕೈಕ ಆಟಗಾರ್ತಿಯಾಗಿರುವ ಅವರು ಕೋವಿಡ್‌–19ರ ಸಂದರ್ಭದಲ್ಲಿ ಮುಂದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ತಮ್ಮನ್ನು ತಾವು ಮಾನಸಿಕವಾಗಿ ಬಲಗೊಳಿಸಿದ್ದರ ಬಗ್ಗೆ ವಿವರಿಸಿದರು.

’ಇದು ವಿಷಮ ಕಾಲ. ಆದರೂ ಫಿಟ್ ಆಗಿರುವಂತೆ ನೋಡಿಕೊಳ್ಳಲು ನಿರಂತರ ಪ್ರಯತ್ನಿಸಿದ್ದೇನೆ. ವಯಸ್ಸು ಹೆಚ್ಚುತ್ತಿದ್ದಂತೆ ಫಿಟ್‌ನೆಸ್ ಕಾಯ್ದುಕೊಳ್ಳುವುದೂ ದೊಡ್ಡ ಸವಾಲು ಎಂಬುದು ತಿಳಿದೇ ಇದೆ. ವಿಶ್ವಕಪ್‌ಗೂ ಮುನ್ನ ಕೆಲವೇ ಕೆಲವು ಸರಣಿಗಳು ಇವೆ. ಮಾನಸಿಕವಾಗಿಯೂ ಬಲಿಷ್ಠವಾಗಿರಲು ಈ ಸಂದರ್ಭದಲ್ಲಿ ಪ್ರಯತ್ನಿಸಬೇಕಾಗಿದೆ’ ಎಂದು ಅವರು ನುಡಿದರು.

ಭಾರತ ತಂಡ ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಸರಣಿಯನ್ನು ಆಡಲಿದೆ. ಈ ಎಲ್ಲ ಸರಣಿಗಳು ಕೂಡ ತಮ್ಮ ಪಾಲಿಗೆ ಮಹತ್ವದ್ದು ಎಂದು ಹೇಳಿದ ಮಿಥಾಲಿ ಸೀಮಿತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವ ಆಟಗಾರ್ತಿಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.

ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಮಾತನಾಡಿ ಎದುರಾಳಿ ತಂಡವನ್ನು ಮಣಿಸುವುದಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಬಳಗ ಬಳಸುವ ತಂತ್ರಗಳನ್ನು ಅನುಕರಿಸಿದರೆ ಮಹಿಳಾ ಕ್ರಿಕೆಟ್‌ಗೆ ಯಶಸ್ಸು ಸಿಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT