ಮಂಗಳವಾರ, ನವೆಂಬರ್ 24, 2020
19 °C

IPL 2020: ಮೊಹಮ್ಮದ್ ಸಿರಾಜ್ ಮೂರು ವಿಕೆಟ್‌ ಮತ್ತು ಆ ಮೂರು ಮಾತುಗಳು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿಯಲ್ಲಿ ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಎರಡು ಮೇಡನ್ ಓವರ್ ದಾಖಲೆಯ ಸಮೇತ ಮೂರು ವಿಕೆಟ್ ಗಳಿಸಿದಾಗ, ಮನಸ್ಸು ಮೂರು ವರ್ಷಗಳಷ್ಟು ಹಿಂದಕ್ಕೆ ಓಡಿತು.

ಅವತ್ತು ಐಪಿಎಲ್ ಬಿಡ್ಡಿಂಗ್‌ನಲ್ಲಿ ಸಿರಾಜ್ ₹ 2.6 ಕೋಟಿ ಮೌಲ್ಯ ಪಡೆದುಕೊಂಡಿದ್ದರು. ಅದರಲ್ಲೂ ತಮ್ಮ ತವರಿನ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಅವರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತ್ತು. ಆ ದಿನ ’ಮುತ್ತಿನ ನಗರಿ‘ ಹೈದರಾಬಾದಿನಲ್ಲಿ ಸಿರಾಜ್ ಮಾಧ್ಯಮದವರೊಂದಿಗೆ ಹೇಳಿದ್ದ ಮೂರು ಮಾತುಗಳೂ ನೆನಪಾದವು. 

ಮೊದಲ ಮಾತು..

ಅಪ್ಪ–ಅಮ್ಮನಿಗೆ ಹೈದರಾಬಾದಿನ ಪ್ರತಿಷ್ಠಿತ ಮತ್ತು ಸುಂದರವಾದ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಡುವ ಕನಸು ಈಗ ಕೈಗೂಡಲಿದೆ. ನಾನು ಕ್ರಿಕೆಟಿಗನಾಗಲು ಅಪ್ಪ ಜೀವನವಿಡೀ ಆಟೋ ರಿಕ್ಷಾ ಚಾಲನೆ ಮಾಡಿದ್ದಾರೆ. ಇಡೀ ಕುಟುಂಬವನ್ನು ಸಲಹಿದ್ದಾರೆ. ಅಣ್ಣ ಮತ್ತು ಅಮ್ಮ ಕೂಡ ಬಹಳಷ್ಟು ತ್ಯಾಗ ಮಾಡಿದ್ದಾರೆ. ಈಗ ಬಂದಿರುವ ಹಣದಿಂದ ನನ್ನ ಹೊಸಮನೆ ಕನಸು ನನಸಾಗಲಿದೆ ಎಂದಿದ್ದರು ಸಿರಾಜ್.

ಎರಡನೇ ಮಾತು..

ಕ್ರಿಕೆಟ್‌ನಿಂದ ನಾನು ಇದಕ್ಕೂ ಮುನ್ನ ಪಡೆದ ಅತಿ ಹೆಚ್ಚು ಆದಾಯವೆಂದರೆ, ₹500 ರೂಪಾಯಿ. ಕ್ಲಬ್‌ ಕ್ರಿಕೆಟ್‌ ಆಡುವಾಗ ತಂಡಕ್ಕೆ ನನ್ನ ಮಾಮಾ ನಾಯಕರಾಗಿದ್ದರು. ಅವತ್ತು ನಡೆದಿದ್ದ ಸ್ಥಳೀಯ ಪಂದ್ಯದಲ್ಲಿ 20 ರನ್‌ ಕೊಟ್ಟು 9 ವಿಕೆಟ್ ಗಳಿಸಿದ್ದೆ. ನಮ್ಮ ತಂಡ ಗೆದ್ದಿತ್ತು. ಅದಕ್ಕಾಗಿ ಮಾಮಾ ನನಗೆ ಖುಷಿಯಿಂದ ₹ 500 ರೂಪಾಯಿ ಕೊಟ್ಟಿದ್ದರು. ಆ ಸಮಯದಲ್ಲಿ ಸ್ಪೈಕ್ಸ್‌ ಬೂಟು ಖರೀದಿಸಲೂ ನಮ್ಮ ಬಳಿ ಹಣವಿರಲಿಲ್ಲ. ಕ್ರಿಕೆಟ್ ಕಿಟ್ ಖರೀದಿಸಲೂ ಪರದಾಡಬೇಕಿತ್ತು. ಅಣ್ಣ ತನ್ನ ಪಾಕಿಟ್ ಮನಿ  ನನಗೆ ಕೊಟ್ಟು ಸಹಕರಿಸುತ್ತಿದ್ದ.

ಮೂರನೇ ಮಾತು..

ನನಗೆ ವಿದ್ಯೆ ತಲೆಗೆ ಹತ್ತಲಿಲ್ಲ. ಕ್ರಿಕೆಟ್ ಒಂದೇ ಪಂಚಪ್ರಾಣ. ನನ್ನಣ್ಣ ಜಾಣ ವಿದ್ಯಾರ್ಥಿ. ಚೆನ್ನಾಗಿ ಓದಿ ಸಾಫ್ಟ್‌ವೇರ್ ಎಂಜಿನಿಯರ್ ಆದ. ನನ್ನಮ್ಮ ಯಾವಾಗಲೂ ನನಗೆ ಅಣ್ಣನನ್ನು ನೋಡಿ ಕಲಿ. ಬರೀ ಕ್ರಿಕೆಟ್ ಆಡಿಕೊಂಡು ಓಡಾಡಬೇಡ. ಓದು ಎಂದು ಕುಟುಕುತ್ತಿದ್ದಳು. ಇವತ್ತು ನನಗೆ ಸಿಕ್ಕಿರುವ ಮೌಲ್ಯ ನೋಡಿ. ಇನ್ನು ಮೇಲೆ ಅಮ್ಮ ನನಗೆ ಬೈಯಲ್ಲ.

ಕೆಳಮಧ್ಯಮವರ್ಗದ ಮಕ್ಕಳ ಇಂತಹ ಪುಟ್ಟಪುಟ್ಟ ಸಂಗತಿಗಳೇ ಅವರನ್ನುಸಾಧನೆಯ ಹಾದಿಯಲ್ಲಿ ಕೈಹಿಡಿದು ನಡೆಸುತ್ತವೆ. ಕೋಟಿಗೊಬ್ಬನನ್ನಾಗಿ ಮಾಡುವ ಮೆಟ್ಟಿಲುಗಳಾಗುತ್ತವೆ, ಕೈಗೆ ಮೂರು ಕೋಟಿ ಹಣ ಬಂದರೂ ಕೌಟುಂಬಿಕ ಪ್ರೀತಿ, ಮಮತೆಯ ಒರತೆಗೇ ಹೆಚ್ಚು ಗೌರವ ಕೊಡುವ ಗುಣ ಇರುವುದು ಇಂತಹ ಮಕ್ಕಳಲ್ಲಿಯೇ ಅಲ್ಲವೇ?

ಈ ಸಂಸ್ಕಾರ ಅವರ ಶಕ್ತಿಯೂ ಹೌದು. ಏಕೆಂದರೆ ಸಿರಾಜ್ ವಿಷಯದಲ್ಲಿ ಯಶಸ್ಸು ಸದಾ ಬೆಂಬಲಕ್ಕೆ ನಿಂತಿಲ್ಲ. ಬಹಳಷ್ಟು ಏಳು–ಬೀಳು ಕಂಡಿದ್ದಾರೆ.  ಅದರಲ್ಲೂ ಸನ್‌ರೈಸರ್ಸ್‌ನಿಂದ ಆರ್‌ಸಿಬಿಗೆ ಬಂದ ಮೇಲೆ ಒಂದೆರಡು ಪಂದ್ಯಗಳಲ್ಲಿ ತಂಡದ ಸೋಲಿನ ’ಖಳನಾಯಕ‘ ಕೂಡ ಆಗಿ ಟೀಕೆಗೊಳಗಾಗಿದ್ದಾರೆ.  ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ, ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಅವರ ಪ್ರೀತಿ, ವಿಶ್ವಾಸ ಅವರಿಗೆ ಶ್ರೀರಕ್ಷೆಯಾಯಿತು. ಅದನ್ನು ಉಳಿಸಿಕೊಳ್ಳಲು ತೆರೆಮರೆಯ ಹಿಂದೆ ನಿದ್ದೆಗೆಟ್ಟು ತಮ್ಮ ಬೌಲಿಂಗ್‌ಗೆ ಸಾಣೆ ಹಿಡಿದರು.

ರಟ್ಟೆ  ಉದುರಿ ಹೋಗುವಷ್ಟು ಅಭ್ಯಾಸ ನಡೆಸಿದರು. ಟೀಕೆ, ವ್ಯಂಗ್ಯಗಳನ್ನು ಮೀರಿ ನಿಂತರು. ಇವತ್ತು ಮರಳುಗಾಡಿನಲ್ಲಿ ಮಿನುಗಿದರು.

ಮುಂಬರಲಿರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡದ ಆಯ್ಕೆ ಈ ವಾರ ನಡೆಯಲಿದೆ. ಐದನೇ ಮಧ್ಯಮವೇಗಿಯಾಗಿ ಆಯ್ಕೆಯಾಗಲು ಸಿರಾಜ್ ಮತ್ತು ಚೆನ್ನೈ ತಂಡದ ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ.  ಇಲ್ಲಿಯವರೆಗೆ ಒಂದು ಅಂತರರಾಷ್ಟ್ರೀಯ ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಸಿರಾಜ್ ಆಡಿದ್ದಾರೆ.  ಇದೀಗ 26 ವರ್ಷದ ಸಿರಾಜ್ ಟೆಸ್ಟ್ ಕ್ಯಾಪ್ ಧರಿಸುವ ಕನಸು ಕಾಣುತ್ತಿದ್ದಾರೆ. ಅದು ನನಸಾಗಬೇಕಾದರೆ ಅವರು ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದೆ.

ಅಂದ ಹಾಗೆ; ಎರಡು ವರ್ಷಗಳ ಹಿಂದೆ ಸಿರಾಜ್ ತನ್ನ ಕುಟುಂಬಕ್ಕಾಗಿ ಖರೀದಿಸಿದ ಚೆಂದದ ಮನೆಯಲ್ಲಿ ಬುಧವಾರ ರಾತ್ರಿ ಖುಷಿಯೋ ಖುಷಿಯಂತೆ. ಮಗನ ಐತಿಹಾಸಿಕ ಸಾಧನೆಯನ್ನು ನೋಡಿದ ತಂದೆ ಮೊಹಮ್ಮದ್ ಗೌಸ್ ಮತ್ತು ತಾಯಿ ಶಬಾನಾ  ಅವರ ಸಂತಸಕ್ಕೆ ಪಾರವೇ ಇರಲಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು