ಗುರುವಾರ , ಮಾರ್ಚ್ 4, 2021
29 °C
ವಿಶ್ವಕಪ್‌ ಕ್ರಿಕೆಟ್‌

ಟೀಂ ಇಂಡಿಯಾದ ಕೂಲ್‌ ಮ್ಯಾನ್‌ ಮಹೇಂದ್ರ ಸಿಂಗ್‌ ಧೋನಿ; ಸಾಧನೆ ಇಂದಿಗೂ ಜೀವಂತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಭಾನುವಾರ 38ನೇ ಜನುಮದಿನದ ಸಂಭ್ರಮ. ವಿಶ್ವಕಪ್‌ ಟೂರ್ನಿಯ ಜತೆಗೆ ಧೋನಿ ನಿವೃತ್ತಿಯ ಬಗೆಗಿನ ಚರ್ಚೆ ಕಾವೇರಿದೆ. ಆದರೆ ಇಂದಿಗೂ ತಂಡಕ್ಕೆ ಅವರ ಅಗತ್ಯವಿದೆ ಎಂದು ವಾದಿಸುವವರೂ ಅನೇಕ. ಅತ್ಯುತ್ತಮ ಗೇಮ್‌ ಫಿನಿಷರ್‌, ಉತ್ತಮ ಮಾರ್ಗದರ್ಶಕ ಎಂದೆಲ್ಲ ಕರೆಸಿಕೊಳ್ಳುವ ’ಎಂಎಸ್‌ಡಿ’ ಸಾಧನೆಯ ಅಂಕಿ ಅಂಶಗಳ ಲೆಕ್ಕದಲ್ಲಿಯೂ ಕಡಿಮೆಯಿಲ್ಲ. 

ಹೆಚ್ಚು ಎಸೆತಗಳನ್ನು ವ್ಯರ್ಥ ಮಾಡುವುದು, ಕಡಿಮೆ ಬ್ಯಾಟಿಂಗ್‌ ಸರಾಸರಿ, ಒಂದು ಪಂದ್ಯ ಮಿಂಚಿದರೆ ಎರಡು ಪಂದ್ಯ ಆಡುವುದಿಲ್ಲ, ವಯಸ್ಸಾಗಿದೆ,...ಹೀಗೆ ಧೋನಿ ಮೇಲೆ ವಿಶ್ವಕಪ್‌ ಟೂರ್ನಿಯ ಉದ್ದಕ್ಕೂ ಕೇಳಿಬರುತ್ತಿರುವ ಆರೋಪಗಳು. 2007ರ ಟಿ20 ವಿಶ್ವಕಪ್‌ ಮತ್ತು 2011ರಲ್ಲಿ ಏಕದಿನ ವಿಶ್ವಕಪ್‌ ಕಿರೀಟವನ್ನು ಭಾರತ ತಂಡದ ಮುಡಿಗೇರಿಸಿದ ಸಾರಥಿ ಮಹೇಂದ್ರ ಸಿಂಗ್‌ ಧೋನಿ ಟೀಕಾಕಾರರಿಗೆ ತನ್ನ ಮಿಂಚಿನ ಆಟದಿಂದಲೇ ಅನೇಕ ಬಾರಿ ಉತ್ತರ ನೀಡಿದ್ದಾರೆ. 

ಇದನ್ನೂ ಓದಿ: ಭಾರತದ ಕ್ರಿಕೆಟ್ ಚಹರೆ ಬದಲಿಸಿದ ಧೋನಿ: ಐಸಿಸಿ

ವಿರಾಟ್‌ ಕೊಹ್ಲಿ ನೇತೃತ್ವದ ವಿಶ್ವಕಪ್‌ ಕ್ರಿಕೆಟ್‌ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ ಧೋನಿ. ತಂಡದ ಬಹುಮುಖ್ಯ ಸ್ಫೂರ್ತಿಯಾಗಿಯೇ ಅವರನ್ನು ಇಂದಿಗೂ ಪರಿಗಣಿಸಲಾಗುತ್ತಿದೆ ಹಾಗೂ ಅದಕ್ಕೆ ಅವರ ಸಾಧನೆಯ ಪೂರಕ ಅಂಕಿ ಅಂಶಗಳ ಕಾರಣಗಳೂ ಇವೆ.

ಹಿಂದಿನ ಆರ್ಭಟದ ಹೆಲಿಕಾಪ್ಟರ್‌ ಶಾಟ್‌ಗಳು, ರಾಕೆಟ್‌ ವೇಗದ ಸಿಕ್ಸರ್‌ಗಳಿಂದ ಪಂದ್ಯದ ಮುಕ್ತಾಯ ಈಗ ಬಲು ಅಪರೂಪ. ಆದರೆ, ಭಾರತ ಬ್ಯಾಟಿಂಗ್‌ನ ಮೇಲಿನ ಕ್ರಮಾಂಕ ಮತ್ತು ಕೆಳಮಧ್ಯಮ ಕ್ರಮಾಂಕದ ಆಟಗಾರರ ನಡುವಿನ ಕೊಂಡಿಯಂತೆ ಧೋನಿ ನಿರ್ವಹಣೆ ತೋರುತ್ತಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಟ ಆಡುವ ಪ್ರಯತ್ನ ತೋರುತ್ತಿದ್ದಾರೆ. ತರಗೆಲೆಗಳಂತೆ ವಿಕೆಟ್‌ ಉರುಳುವ ಸಮಯದಲ್ಲಿ ಧೋನಿ ದಿಟ್ಟವಾಗಿ ನಿಂತು ಹೋರಾಟ ನಡೆಸಿದ ಉದಾಹರಣೆಗಳು ಬಹಳ. ಬಿರುಸಿನ ಆಟವಾಡುವ ರಿಷಬ್‌ ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯರಂತಹ ಆಟಗಾರರಿಗೆ ಸ್ಟ್ರೈಕ್‌ ಸಿಗುವಂತೆ ಒಂದೊಂದು ರನ್‌ ಗಳಿಕೆಗೆ ಅಂಟಿಕೊಳ್ಳುವುದನ್ನೂ ಕಾಣಬಹುದಾಗಿದೆ. 

ಆದರೆ, ಬಿರುಸಿನ ಆಟದ ಅವಶ್ಯಕತೆ ಇದ್ದಾಗಲೂ ಎಸೆತಗಳ ವ್ಯರ್ಥ ಮತ್ತು ನಿಧಾನಗತಿಯ ರನ್‌ ಗಳಿಕೆ ಚರ್ಚಿತ ವಿಷಯ. ಸ್ಟ್ರೈಕ್‌ ರೇಟ್‌ ಒಂದರಿಂದಲೇ ಧೋನಿ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ ಎಂಬುದು ಕ್ರಿಕೆಟ್‌ ತಜ್ಞರ ವಿಶ್ಲೇಷಣೆ. ವಿಕೆಟ್‌ ಕೀಪಿಂಗ್‌ನಲ್ಲಿ ಇಂದಿಗೂ ಧೋನಿ ಚುರುಕುತನದ ಮುಂದೆ ಭರ್ಜರಿ ಬ್ಯಾಟ್ಸ್‌ಮನ್‌ಗಳೂ ಬೆಪ್ಪಾಗಿ ಹೋಗಿದ್ದಾರೆ. ಅವರು ಅನುಸರಿಸುವ ಕ್ರಮಗಳನ್ನು ವಿಶ್ವ ಕ್ರಿಕೆಟ್ ಬೆರಗಿನಿಂದ ಗಮನಿಸುತ್ತಿದೆ ಹಾಗೂ ಹೊಸತುಗಳನ್ನು ಸ್ವೀಕರಿಸುತ್ತಿದೆ. ಕ್ರಿಕೆಟ್‌ ಕೂಸುಗಳನ್ನು ವಿಕೆಟ್‌ ಕೀಪಿಂಗ್‌ನತ್ತ ಸೆಳೆಯುವಲ್ಲಿ ಅವರ ಆಟದ ವೈಖರಿ ಪ್ರಮುಖ ಪಾತ್ರವಹಿಸಿದೆ. 

ಇದನ್ನೂ ಓದಿ: ಬದಲಾದ ಬ್ಯಾಟು ಹೇಳುತ್ತಿದೆಯಾ ಧೋನಿ ವಿದಾಯದ ಮುನ್ನುಡಿ?!

ವಿಶ್ವಕಪ್‌ ಟೂರ್ನಿಯ ರೌಂಡ್‌ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾದ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಮರಳಿ ಕಳುಹಿಸಲು ವಿಕೆಟ್‌ಗಳ ಹಿಂದೆ ಧೋನಿ ತೋರಿದ ಪ್ರದರ್ಶನವೇ ಕಾರಣ. ಅತಿ ಹೆಚ್ಚು ಸ್ಟಂಪಿಂಗ್‌ ಮಾಡಿರುವ ದಾಖಲೆಯನ್ನೂ ಅವರು ಹೊಂದಿದ್ದಾರೆ. 

ಏಕದಿನ ಪಂದ್ಯಗಳಲ್ಲಿ ಧೋನಿ ಸಾಧನೆ:

* 349 ಪಂದ್ಯಗಳು–296 ಇನಿಂಗ್ಸ್‌– 10,723 ರನ್‌ಗಳು–ಸರಾಸರಿ 50.58– ಸ್ಟ್ರೈಕ್‌ ರೇಟ್‌ 87.67

ರನ್‌ ಗಳಿಕೆ ಪಟ್ಟಿಯಲ್ಲಿ ಸಚಿನ್‌ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 9ನೇ ಸ್ಥಾನ ಹಾಗೂ ಧೋನಿ 11ನೇ ಸ್ಥಾನದಲ್ಲಿದ್ದಾರೆ. 

* 82 ಬಾರಿ ಏಕದಿನ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್‌ ಸಾಧನೆ ಮಾಡಿದ್ದಾರೆ. 10 ಶತಕಗಳು ಹಾಗೂ 72 ಅರ್ಧ ಶತಕಗಳು ಅವರ ಖಾತೆಯಲ್ಲಿವೆ.

* ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಅಜೇಯರಾಗಿ ಉಳಿದಿರುವ ದಾಖಲೆಯನ್ನು ಧೋನಿ ಹೊಂದಿದ್ದಾರೆ. 84 ಬಾರಿ ಔಟ್‌ ಆಗದೇ ಉಳಿದಿದ್ದಾರೆ.

* ಭಾರತ ತಂಡದ ನಾಯಕನಾಗಿ 200 ಪಂದ್ಯ(172 ಇನಿಂಗ್ಸ್‌) ಆಡಿರುವ ಧೋನಿ 6641 ರನ್‌ ದಾಖಲಿಸಿದ್ದಾರೆ. ಸ್ಟ್ರೈಕ್‌ ರೇಟ್‌ 86.21. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ 8497 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಧೋನಿಗೆ ಎರಡನೇ ಸ್ಥಾನ.

* ನಾಯಕನಾಗಿದ್ದಾಗ ಗಳಿಸಿರುವ ರನ್‌ಗಳ ಆಧಾರದ ಮೇಲೆ 53.55 ಸರಾಸರಿ ಹೊಂದಿರುವ ಅವರು ಟಾಪ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. 76 ಪಂದ್ಯಗಳಲ್ಲಿ 4565 ರನ್‌ ಗಳಿಸಿ, 78.70 ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. 

ಇದನ್ನೂ ಓದಿ: ಫೈನಲ್‌ಗೆ ಭಾರತ–ಇಂಗ್ಲೆಂಡ್ | ನಿಜವಾಗುತ್ತಾ ಗೂಗಲ್ ಸಿಇಒ ಭವಿಷ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು