ಭಾನುವಾರ, ಅಕ್ಟೋಬರ್ 25, 2020
28 °C

PV Web Exclusive: ಇದು ತಮಿಳುನಾಡಿನ ‘ಧೋನಿ ಮನೆ’ ಕಥೆ

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

Prajavani

ಇದು ಮಹೇಂದ್ರಸಿಂಗ್ ಧೋನಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ಕಟ್ಟಾ ಅಭಿಮಾನಿಯೊಬ್ಬರ  ಕಥೆ. ಅವರ ಹೆಸರು ಆರ್‌.ಗೋಪಿಕೃಷ್ಣನ್‌, ತಮಿಳುನಾಡಿನ ಕುಡಲೂರು ಜಿಲ್ಲೆಯ ಅರಂಗೂರಿನವರು. ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. 2008 ರಿಂದಲೂ ತವರೂರಿನ ತಂಡ ಸಿಎಸ್‌ಕೆಯನ್ನು ಬೆಂಬಲಿಸುತ್ತಿದ್ದಾರೆ. ಈಗ ದುಬೈನಲ್ಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳು ನಡೆಯುತ್ತಿವೆ. ಆದರೆ ಕೋವಿಡ್‌ನಿಂದ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಪಂದ್ಯಗಳನ್ನು ವೀಕ್ಷಿಸಲು ನಿರ್ಬಂಧ ಹೇರಲಾಗಿದೆ. ಹೀಗಾಗಿ ತನ್ನ ಮೆಚ್ಚಿನ ಹಾಗೂ ತವರು ತಂಡ ಹಾಗೂ ಧೋನಿಯನ್ನು ಹುರಿದುಂಬಿಸಲು ಆಗುವುದಿಲ್ಲ ಎನ್ನುವುದು ಖಾತ್ರಿ ಆಯಿತು. ಇದರಿಂದ ತೀವ್ರ ನಿರಾಶೆಗೊಂಡ ಗೋಪಿಕೃಷ್ಣನ್‌ ದುಬೈನಿಂದ ತವರಿಗೆ ಮರಳಿದರು.

ಈ ನಡುವೆ ತಮ್ಮ ಮನೆಯನ್ನು ನವೀಕರಿಸಿದರು. ಮನೆಗೆ ಯಾವ ಬಣ್ಣ ಚೆನ್ನಾಗಿ ಕಾಣಿಸಬಹುದು ಎನ್ನುವುದನ್ನು ಮನದ ಭಿತ್ತಿಯಲ್ಲಿಯೇ ಅಂದಾಜಿಸುತ್ತಿದ್ದರು. ಆಗ ಹೊಳೆದದ್ದು ಹಳದಿ! ಗೋಪಿಕೃಷ್ಣನ್‌ ಅವರ ಫೇವರೀಟ್‌ ಟೀಮ್‌ ಸಿಎಸ್‌ಕೆಯ ಬಣ್ಣ ಹಳದಿ. ಹಿಂದೆಮುಂದೆ ನೋಡದೇ ಮನೆಯವರಿಗೆ ವಿಷಯ ತಿಳಿಸಿದರು. ಅವರೆಲ್ಲರೂ ಕ್ರಿಕೆಟ್‌, ಸಿಎಸ್‌ಕೆ ಹಾಗೂ ಧೋನಿ ಅಭಿಮಾನಿಗಳೇ. ಮರು ಮಾತನಾಡದೇ ಓಕೆ ಎಂದರು. ಸುಮ್ಮನೆ ಹಳದಿ ಬಣ್ಣ ಹಚ್ಚಿಸಿದರೆ ಅಭಿಮಾನವನ್ನು ವ್ಯಕ್ತಪಡಿಸಿದಂತೆ ಆಗುವುದಿಲ್ಲ. ಅದರ ಜೊತೆಗೆ ಸಿಎಸ್‌ಕೆ ಲೋಗೊ, ಧೋನಿ ಚಿತ್ರಗಳನ್ನು ಬಿಡಿಸಲು ನಿರ್ಧರಿಸಿದರು. ಇದಕ್ಕಾಗಿ ತಮ್ಮ ಸ್ನೇಹಿತರ ಮೂಲಕ ಕಲಾವಿದರೊಬ್ಬರನ್ನು ಹುಡುಕಿದರು.

ಮನೆ ಮುಂಭಾಗದಲ್ಲಿ ಧೋನಿ ಚಿತ್ರಗಳು, ‌ಪಕ್ಕದ ಗೋಡೆಯಲ್ಲಿ ಸಿಎಸ್‌ಕೆ ಲೋಗೊ. ಮನೆ ಮುಂದೆ ‘ಹೋಂ ಆಫ್‌ ಧೋನಿ ಫ್ಯಾನ್‌’ ಎನ್ನುವ ಬರಹವಿದೆ. ಈಗ ಈ ‘ಧೋನಿ ಮನೆ‘ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಜನರು ಬಂದು ನೋಡಿ, ಖುಷಿಪಡುತ್ತಿದ್ದಾರೆ. ಇದಕ್ಕಾಗಿ ಗೋಪಿಕೃಷ್ಣನ್‌  ಐದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

‘ಪ್ರಸಕ್ತ ಐಪಿಎಲ್‌ನಲ್ಲಿ ಸಿಎಸ್‌ಕೆ ಹಾಗೂ ಮಹೇಂದ್ರಸಿಂಗ್ ಧೋನಿ ಅವರ ಪ್ರದರ್ಶನ ಕುರಿತು ಕ್ರಿಕೆಟ್‌ ಅಭಿಮಾನಿಗಳು ಹಿಗ್ಗಾಮುಗ್ಗಾ ಟೀಕೆ–ಟಿಪ್ಪಣಿ  ಮಾಡುತ್ತಿದ್ದಾರೆ. ಇಂತಹ ನಕಾರಾತ್ಮಕ‌ ಟೀಕೆಗಳು ನಿಲ್ಲಬೇಕು. ಸಕಾರಾತ್ಮಕ ವಿಷಯ ಪಸರಿಸಬೇಕು ಎನ್ನುವ ಉದ್ದೇಶದಿಂದಲೇ  ಹಳದಿ ಬಣ್ಣ ಹೊಡೆಸಿ, ಧೋನಿಯ ಚಿತ್ರಗಳನ್ನು ಬಿಡಿಸಿ, ಮನೆಗೆ ಅವರದೇ ಹೆಸರು ಇಟ್ಟಿದ್ದೇನೆ‘ ಎನ್ನುತ್ತಾರೆ ಗೋಪಿಕೃಷ್ಣನ್‌.

ಸಿಎಸ್‌ಕೆ ತನ್ನ ಟ್ವಿಟರ್‌ನಲ್ಲಿ ಗೋಪಿಕೃಷ್ಣನ್‌ ಅವರ ಮನೆಯ ಚಿತ್ರಗಳನ್ನು ಹಂಚಿಕೊಂಡಿದೆ. ಜೊತೆಗೆ ಸೂಪರ್‌ ಫ್ಯಾನ್‌ ಗೋಪಿಕೃಷ್ಣನ್‌ ಮತ್ತವರ ಕುಟುಂಬ ತಮ್ಮ ಮನೆಯನ್ನು ಹೋಂ ಆಫ್‌ ಧೋನಿ ಫ್ಯಾನ್‌ ಎಂದು ಕರೆದುಕೊಂಡಿದೆ. ಸೂಪರ್‌ ಡೂಪರ್‌ ಗೌರವ ನಮ್ಮ ಹೃದಯವನ್ನು ತುಂಬಿದೆ ಎಂದು ಹೇಳಿಕೊಂಡಿದೆ.

ಅಭಿಮಾನಿಗಳು ತಾವು ಆರಾಧಿಸುವ ಸೆಲೆಬ್ರಿಟಿಗಳ ಕುರಿತಾದ ಅಭಿಮಾನವನ್ನು ಮೆರೆಯಲು, ಅಭಿವ್ಯಕ್ತಗೊಳಿಸಲು ಹತ್ತಾರು ವಿಭಿನ್ನ ಹಾದಿಯನ್ನು ತುಳಿಯುತ್ತಾರೆ. ಈ ಮೂಲಕ ಹೆಮ್ಮೆಯಿಂದ ಬೀಗುತ್ತಾರೆ. ಅವರಲ್ಲಿ ಗೋಪಿಕೃಷ್ಣನ್‌ ಕೂಡ ಒಬ್ಬರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು