ಸೋಮವಾರ, ಏಪ್ರಿಲ್ 12, 2021
29 °C
ಕರ್ನಾಟಕ–ಮುಂಬೈ ಮುಖಾಮುಖಿ; ಸಮರ್ಥ್–ಪಡಿಕ್ಕಲ್ ಜೋಡಿಗೆ ಪೃಥ್ವಿ ಶಾ ಸವಾಲು

ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್: ‘ಆರಂಭಿಕ ಬ್ಯಾಟ್ಸ್‌ಮನ್‌ಗಳ’ ಹಣಾಹಣಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶಿ ಕ್ರಿಕೆಟ್‌ನ ಬದ್ಧ ಎದುರಾಳಿಗಳಾದ ಕರ್ನಾಟಕ ಮತ್ತು ಮುಂಬೈ ತಂಡಗಳು ಗುರುವಾರ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಪಾಲಂ ಎ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳ ನಡುವಿನ ಹಣಾಹಣಿಗೆ ವೇದಿಕೆಯಾಗುವ ನಿರೀಕ್ಷೆ ಇದೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಆರ್. ಸಮರ್ಥ್, ಅವರ ಜೊತೆಗಾರ ದೇವದತ್ತ ಪಡಿಕ್ಕಲ್ ಮತ್ತು ಮುಂಬೈ ತಂಡದ ನಾಯಕರೂ ಆಗಿರುವ  ಓಪನರ್ ಪೃಥ್ವಿ ಶಾ ಅವರು ಟೂರ್ನಿಯಲ್ಲಿ ಇದುವರೆಗೆ ರನ್‌ಗಳ ಹೊಳೆ ಹರಿಸಿದ್ದಾರೆ.  ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯ ಅಗ್ರಸ್ಥಾನದಲ್ಲಿ ದೇವದತ್ತ, ನಂತರದ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಸಮರ್ಥ್ ಮತ್ತು ಪೃಥ್ವಿ ಇದ್ದಾರೆ.

ಈ ಟೂರ್ನಿಯಲ್ಲಿ ಒಟ್ಟು ನಾಲ್ಕು ಶತಕಗಳನ್ನು ಗಳಿಸಿರುವ ದೇವದತ್ತ ದಾಖಲೆ ಬರೆದಿದ್ದಾರೆ.  ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೂಡ ಆಗಿರುವ ದೇವದತ್ತ, ಇಲ್ಲಿ ಸಮರ್ಥ್ ಜೊತೆಗೆ ಕ್ವಾರ್ಟರ್‌ಫೈನಲ್‌ನಲ್ಲಿ ದ್ವಿಶತಕದ ಜೊತೆಯಾಟವಾಡಿದ್ದರು. ಸಮರ್ಥ್ ಕೂಡ ಮೂರು ಶತಕ ಹೊಡೆದಿದ್ದಾರೆ.  ಇವರಿಬ್ಬರ ಜೊತೆಯಾಟವನ್ನು ಮುರಿಯುವುದು ಎದುರಾಳಿ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ.  ಮುಂಬೈ ತಂಡದಲ್ಲಿ ಪೃಥ್ವಿ ಕೂಡ ಮೂರು ಶತಕಗಳ ಸಾಧನೆ ಮಾಡಿದ್ದಾರೆ. ಆದರೆ ಅವರ ಆರಂಭಿಕ ಜೊತೆಗಾರ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಲಯದಲ್ಲಿ ಸ್ಥಿರತೆ ಇಲ್ಲ. ಎಂಟರ ಘಟ್ಟದ ಪಂದ್ಯದಲ್ಲಿ ಅವರು ಅರ್ಧಶತಕ ಗಳಿಸಿದ್ದರು. ಆದರೆ ಹೆಚ್ಚು ಎಸೆತಗಳನ್ನು ಆಡಿದ್ದರು.

ಕರ್ನಾಟಕದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ. ಅನುಭವಿ ಮನೀಷ್ ಪಾಂಡೆ, ಕೆ.ವಿ. ಸಿದ್ಧಾರ್ಥ್ ಕೂಡ ಉತ್ತಮ ಕಾಣಿಕ ನೀಡುವ ಲಯದಲ್ಲಿದ್ದಾರೆ. ಫಾರ್ಮ್‌ಗಾಗಿ ತಡಕಾಡುತ್ತಿರುವ ಕರುಣ್ ನಾಯರ್ ಒಂದಷ್ಟು ರನ್‌ಗಳ ಕಾಣಿಕೆ ಕೊಟ್ಟರೆ ತಂಡದ ಬಲ ವರ್ಧಿಸುತ್ತದೆ.  ಆರ್‌ರೌಂಡರ್ ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಅಭಿಮನ್ಯು ಮಿಥುನ್  ಎರಡೂ ವಿಭಾಗಗಳಲ್ಲಿ ತಂಡಕ್ಕೆ ಆಸರೆಯಾಗುವ ಸಮರ್ಥರು.  ಈ ಮೂವರಿಗೂ ತಮ್ಮ ಬೌಲಿಂಗ್‌ನಲ್ಲಿ ಮುಂಬೈನ ಪೃಥ್ವಿ ಶಾ, ಆದಿತ್ಯ ತಾರೆ, ಸರ್ಫರಾಜ್ ಖಾನ್ ಅವರನ್ನು ಕಟ್ಟಿಹಾಕುವ ಪ್ರಮುಖ ಸವಾಲಿದೆ. ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಅವರ ಅನುಪಸ್ಥಿತಿಯಿಂದಾಗಿ ಮುಂಬೈ ತಂಡದ ಯುವ ಆಟಗಾರರ ಮೇಲೆ ಹೆಚ್ಚಿನ ಹೊಣೆ ಬಿದ್ದಿದೆ.  ಬೌಲಿಂಗ್‌ನಲ್ಲಿ ತುಷಾರ್ ದೇಶಪಾಂಡೆ ಮತ್ತು ಶಮ್ಸ್‌ ಮಲಾನಿ ಅವರ ಮೇಲೆ ನಿರೀಕ್ಷೆಯ ಭಾರವಿದೆ.

ಗುಜರಾತ್–ಉತ್ತರಪ್ರದೇಶ ಮುಖಾಮುಖಿ
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ  ಪ್ರಿಯಾಂಕ್ ಪಾಂಚಾಲ್ ನಾಯಕತ್ವದ ಗುಜರಾತ್ ಮತ್ತು ಕರಣ್ ಶರ್ಮಾ ನೇತೃತ್ವದ ಉತ್ತರಪ್ರದೇಶ ತಂಡಗಳು ಹಣಾಹಣಿ ನಡೆಸಲಿವೆ.

ತಂಡಗಳು
ಕರ್ನಾಟಕ:
ಆರ್. ಸಮರ್ಥ್ (ನಾಯಕ), ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ, ಕರುಣ್ ನಾಯರ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಕೆ. ಗೌತಮ್, ಕೆ.ವಿ. ಸಿದ್ಧಾರ್ಥ್, ಶ್ರೇಯಸ್ ಗೋಪಾಲ್, ವೈಶಾಖ ವಿಜಯಕುಮಾರ್, ರೋನಿತ್ ಮೋರೆ, ಪ್ರಸಿದ್ಧಕೃಷ್ಣ, ಅಭಿಮನ್ಯು ಮಿಥುನ್, ಅನಿರುದ್ಧ ಜೋಶಿ, ಜೆ. ಸುಚಿತ್, ರೋಹನ್ ಕದಂ, ಆದಿತ್ಯ ಸೋಮಣ್ಣ, ಎಂ.ಬಿ. ದರ್ಶನ್, ನಿಕಿನ್ ಜೋಸ್, ಎಸ್. ರಕ್ಷಿತ್, ಕೆ.ಎಲ್. ಶ್ರೀಜಿತ್, ಮನೋಜ್ ಭಾಂಡಗೆ.

ಮುಂಬೈ: ಪೃಥ್ವಿ ಶಾ (ನಾಯಕ), ಆದಿತ್ಯ ತಾರೆ (ವಿಕೆಟ್‌ಕೀಪರ್), ಸರ್ಫರಾಜ್ ಖಾನ್, ಶಿವಂ ದುಬೆ, ಅಮನ್ ಹಕೀಂ ಖಾನ್, ಶಮ್ಸ್‌ ಮಲಾನಿ, ಪ್ರಶಾಂತ್ ಸೋಳಂಕಿ, ಮೋಹಿತ್ ಅವಸ್ತಿ, ತುಷಾರ್ ದೇಶಪಾಂಡೆ, ತನುಷ್ ಕೊಟ್ಯಾನ್, ಧವಳ್ ಕುಲಕರ್ಣಿ, ಅಖಿಲ್ ಹೆರ್ವಾಡ್ಕರ್, ಸುಜಿತ್ ನಾಯಕ, ಸಿದ್ಧೇಶ್ ಲಾಡ್, ಆಕಾಶ್ ಪಾರ್ಕರ್, ಸಾಯಿರಾಜ್ ಪಾಟೀಲ, ಅಥರ್ವ ಅಂಕೋಲೆಕರ್, ಅತೀಫ್ ಅತ್ತರವಾಲಾ, ಹಾರ್ದೀಕ್ ತಮೊರೆ, ಸಿದ್ಧಾರ್ಥ್ ರಾವುತ್, ಚಿನ್ಮಯ್ ಸುತಾರ.

ಪಂದ್ಯ ಅರಂಭ: ಬೆಳಿಗ್ಗೆ 9

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು