ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಯಿಂದ ಚೆಂಡು ತಡೆದು ಔಟಾದ ಬಾಂಗ್ಲಾದೇಶದ ಆಟಗಾರ ಮುಷ್ಫಿಕುರ್ ರಹೀಂ!

ವಿಡಿಯೊ ನೋಡಿ
Published 6 ಡಿಸೆಂಬರ್ 2023, 14:32 IST
Last Updated 6 ಡಿಸೆಂಬರ್ 2023, 14:32 IST
ಅಕ್ಷರ ಗಾತ್ರ

ಮೀರಪುರ, ಬಾಂಗ್ಲಾದೇಶ: ಬಾಂಗ್ಲಾದೇಶ ತಂಡದ ಬ್ಯಾಟರ್ ಮುಷ್ಫೀಕುರ್ ರಹೀಮ್ ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನಲ್ಲಿ ಕೈಯಿಂದ ಚೆಂಡು ತಡೆದು ಫೀಲ್ಡರ್‌ಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಔಟಾಗಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ಈ ರೀತಿ ಔಟಾದ ಬಾಂಗ್ಲಾದ ಮೊದಲ ಹಾಗೂ ಒಟ್ಟಾರೆ ಎರಡನೇ ಆಟಗಾರ ಆಗಿದ್ದಾರೆ. ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ದಿನ ಈ ಘಟನೆ ನಡೆಯಿತು. ಕಿವೀಸ್ ವೇಗಿ ಕೈಲ್ ಜೆಮಿಸನ್ ಹಾಕಿದ ನೇರ ಎಸೆತವನ್ನು ಆಡಿದ ರಹೀಮ್, ಆಫ್‌ಸ್ಟಂಪ್‌ನಿಂದ ದೂರದಲ್ಲಿ ಪುಟಿದು ಹಿಂದೆ ಸಾಗುತ್ತಿದ್ದ ಚೆಂಡನ್ನು ರಹೀಮ್ ತಡೆದರು. ಕೂಡಲೇ ಕಿವೀಸ್ ಆಟಗಾರರು ಔಟ್ ನೀಡಬೇಕೆಂದು ಅಪೀಲ್ ಮಾಡಿದರು.

ಅಂಪೈರ್‌ಗಳಾದ ಪಾಲ್ ರಿಫೆಲ್ ಮತ್ತು ರಾಡ್ ಟಕರ್ ಅವರಿಬ್ಬರೂ ಸಮಾಲೋಚನೆ ನಡೆಸಿ ಟಿ.ವಿ. ಅಂಪೈರ್ ಎಹಸಾನ್ ರಝಾ ಅವರಿಗೆ ಪರಿಶೀಲಿಸುವಂತೆ ಕೋರಿದರು. ರಿಪ್ಲೇ ವೀಕ್ಷಿಸಿದ ರಝಾ ಔಟ್ ನೀಡಿದರು.

‘ನಿಯಮದ ಪ್ರಕಾರ  37.1.2ರಲ್ಲಿ ಉಲ್ಲೇಖಿಸಿರುವಂತೆ ಫೀಲ್ಡಿಂಗ್‌ಗೆ ಅಡ್ಡಿಪಡಿಸುವ ಬ್ಯಾಟರ್‌ ಔಟ್ ಎಂದು ಪರಿಗಣಿಸಲಾಗುತ್ತದೆ. 2017ರಲ್ಲಿ ಪರಿಷ್ಕರಣೆಗೊಂಡ ನಿಯಮದಲ್ಲಿ ಇದು ಉಲ್ಲೇಖವಾಗಿದೆ. ಅದಕ್ಕೂ ಮುನ್ನ ಇದನ್ನು ಹ್ಯಾಂಡ್ಲಿಂಗ್ ದಿ ಬಾಲ್ ಎಂದು ಕರೆಯಲಾಗುತ್ತಿತ್ತು. ಬದಲಾವಣೆಯ ನಂತರ ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು ಎಂದು ಪರಿಗಣಿಸಲಾಗುತ್ತದೆ’. ಆದರೆ ಈ ವಿಕೆಟ್ ಬೌಲರ್‌ ಖಾತೆ ಸೇರುವುದಿಲ್ಲ.

2001ರಲ್ಲಿ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಮೈಕೆಲ್ ವಾನ್ ಭಾರತ ಎದುರಿನ ಟೆಸ್ಟ್‌ನಲ್ಲಿ ಇದೇ ರೀತಿ ಔಟಾಗಿದ್ದರು.

ರಹೀಂ 83 ಎಸೆತಗಳಲ್ಲಿ 35 ರನ್ ಗಳಿಸಿದರು. ಅದರಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿವೆ.

ಕುಸಿದ ಕಿವೀಸ್

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್‌ನ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ (65ಕ್ಕೆ3) ಮತ್ತು ಗ್ಲೆನ್ ಫಿಲಿಪ್ಸ್ (31ಕ್ಕೆ3) ಅವರ ದಾಳಿಯ ಮುಂದೆ 66.2 ಓವರ್‌ಗಳಲ್ಲಿ 172 ರನ್ ಗಳಿಸಿ ಕುಸಿಯಿತು.

ಇದಕ್ಕುತ್ತವಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಮೊದಲ ದಿನದಾಟದ ಕೊನೆಗೆ 55 ರನ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಬಾಂಗ್ಲಾದ ಮೆಹದಿ ಹಸನ್ ಮಿರಾಜ್ (17ಕ್ಕೆ3) ಮತ್ತು ತೈಜುಲ್ ಇಸ್ಲಾಂ (29ಕ್ಕೆ2) ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಡೆರಿಲ್ ಮಿಚೆಲ್ (ಬ್ಯಾಟಿಂಗ್ 12) ಮತ್ತು ಗ್ಲೆನ್ ಫಿಲಿಪ್ಸ್ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 66.2 ಓವರ್‌ಗಳಲ್ಲಿ 172 (ಮುಷ್ಫಿಕುರ್ ರಹೀಮ್ 35, ಶಹಾದತ್ ಹುಸೇನ್ 31, ಮೆಹದಿ ಹಸನ್ ಮಿರಾಜ್ 20, ಅಜಾಜ್ ಪಟೇಲ್ 54ಕ್ಕೆ2, ಮಿಚೆಲ್ ಸ್ಯಾಂಟನರ್ 65ಕ್ಕೆ3, ಗ್ಲೆನ್ ಫಿಲಿಪ್ಸ್ 31ಕ್ಕೆ3) ನ್ಯೂಜಿಲೆಂಡ್: 12. 4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 55 (ಕೇನ್ ವಿಲಿಯಮ್ಸನ್ 13, ಡೆರಿಲ್ ಮಿಚೆಲ್ ಬ್ಯಾಟಿಂಗ್ 12, ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ 5, ಮೆಹದಿ ಹಸನ್ ಮಿರಾಜ್ 17ಕ್ಕೆ3, ತೈಜುಲ್ ಇಸ್ಲಾಂ 29ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT