ಬೆಂಗಳೂರು: ಎಡಗಾಲು ಮುರಿತದಿಂದ ಬಳಲಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರು, ಸದ್ಯ ಚೇತರಿಸಿಕೊಂಡಿದ್ದು, ಸಂಪೂರ್ಣವಾಗಿ ಫಿಟ್ ಆಗಲು ಇನ್ನಷ್ಟು ತಿಂಗಳು ಬೇಕು ಎಂದು ಹೇಳಿಕೊಂಡಿದ್ದಾರೆ.
ಕಳೆದ ವರ್ಷದ ತವರಿನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗುಂಪು ಹಂತದಲ್ಲೇ ಮುಗ್ಗರಿಸಿತ್ತು. ಟೂರ್ನಿ ಬಳಿಕ ಸ್ನೇಹಿತನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗ ಮ್ಯಾಕ್ಸ್‌ವೆಲ್ ಕಾಲು ಮುರಿದುಕೊಂಡಿದ್ದರು. 'ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮ್ಯಾಕ್ಸ್‌ವೆಲ್ ಹಾಗೂ ಅವರ ಗೆಳೆಯ ಮನೆಯ ಹಿತ್ತಲಲ್ಲಿ ಓಡುವಾಗ ಜಾರಿ ಬಿದ್ದಿದ್ದಾರೆ. ಈ ವೇಳೆ ಮ್ಯಾಕ್ಸ್‌ವೆಲ್ ಅವರ ಎಡಗಾಲಿನ ಮೇಲೆಯೇ ಗೆಳೆಯ ಬಿದ್ದದ್ದರಿಂದ ಮೂಳೆ ಮುರಿದಿದೆ' ಎಂದು ಆಸ್ಟ್ರೇಲಿಯಾದ ವೆಬ್‌ಸೈಟ್‌ವೊಂದು ವರದಿ ಮಾಡಿತ್ತು.
ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮ್ಯಾಕ್ಸ್‌ವೆಲ್, ಹಲವು ತಿಂಗಳುಗಳಿಂದ ವಿಶ್ರಾಂತಿ ಪಡೆದಿದ್ದರು.
ಈಚೆಗೆ ಮುಕ್ತಾಯವಾದ ಭಾರತ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡಕ್ಕೆ ಮರಳಿದ್ದ ಮ್ಯಾಕ್ಸ್‌ವೆಲ್ ಮೊದಲ ಪಂದ್ಯದಲ್ಲಷ್ಟೇ ಆಡಿದ್ದರು. ಈ ಟೂರ್ನಿಯನ್ನು ಆಸ್ಟ್ರೇಲಿಯಾ 1–2 ಅಂತರದಿಂದ ಗೆದ್ದುಕೊಂಡಿತು.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡುವ ಮ್ಯಾಕ್ಸ್‌ವೆಲ್, ಮಾರ್ಚ್ 31ರಿಂದ ಆರಂಭವಾಗುವ ಟೂರ್ನಿಗೆ ಸಿದ್ಧತೆ ಕೈಗಳ್ಳಲು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಫಿಟ್‌ನೆಸ್ ಕುರಿತು ಮಾತನಾಡಿದ್ದಾರೆ. ಈ ವಿಡಿಯೊವನ್ನು ಆರ್‌ಸಿಬಿ ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.
'ಕಾಲು ಸರಿಯಾಗಿದೆ. ಆದರೆ, ಶೇ 100ರಷ್ಟು ಫಿಟ್ ಆಗಿ ಎಂದಿನಂತಾಗಲು ಕೆಲವು ತಿಂಗಳೇ ಬೇಕು' ಎಂದು ಅವರು ಹೇಳಿದ್ದಾರೆ.
ಆರ್‌ಸಿಬಿ ಪರ ಕಣಕ್ಕಿಳಿಯಲು ಉತ್ಸುಕರಾಗಿರುವ 34 ವರ್ಷದ ಮ್ಯಾಕ್ಸ್‌ವೆಲ್, ಗಾಯದ ನಡುವೆಯೂ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ. 'ತಂಡದ ಪರ ಟೂರ್ನಿಯಲ್ಲಿ ಮುಂದುವರಿಯಬಹುದಾಗಿದೆ' ಎಂದು ಹೇಳಿಕೊಂಡಿದ್ದಾರೆ.
ಕೋವಿಡ್‌ನಿಂದಾಗಿ ಕಳೆದ ಎರಡು ಆವೃತ್ತಿಯು ಟೂರ್ನಿಗಳು ಹಲವು ನಿರ್ಬಂಧಗಳ ನಡುವೆ ಬಯೋ–ಬಬಲ್‌ನಲ್ಲಿ ನಡೆದಿದ್ದವು. ಇದೀಗ ಸಹಜ ಸ್ಥಿತಿಯಲ್ಲಿ ಐಪಿಎಲ್ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ಮ್ಯಾಕ್ಸ್‌ವೆಲ್, 'ಒಂದೆರಡು ವರ್ಷಗಳ ಬಳಿಕ ಕೊನೆಗೂ ವಾಪಸ್ ಆಗಿದ್ದೇವೆ. ನಮ್ಮ ಅಭಿಮಾನಿಗಳ ಎದುರು ಆಡಲು ತುಂಬಾ ಉತ್ಸುಕನಾಗಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
2022ರ ಆವೃತ್ತಿಯಲ್ಲಿ ಉತ್ತಮ ಆಟವಾಡಿದ್ದ ಈ ಆಟಗಾರ, 13 ಪಂದ್ಯಗಳಲ್ಲಿ 301ರನ್ ಗಳಿಸಿ ಆರು ವಿಕೆಟ್‌ಗಳನ್ನೂ ಕಬಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.