ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | ನಾಸೌ ಕೌಂಟಿ ಕ್ರೀಡಾಂಗಣ ಸ್ಥಳಾಂತರ!

ಟಿ20 ವಿಶ್ವಕಪ್ ಟೂರ್ನಿ ಪಂದ್ಯಗಳಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಮೈದಾನ
Published 13 ಜೂನ್ 2024, 22:30 IST
Last Updated 13 ಜೂನ್ 2024, 22:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯಗಳ ಆಯೋಜನೆಗಾಗಿ ನಿರ್ಮಿಸಲಾಗಿದ್ದ ನಾಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣವನ್ನು ಸ್ಥಳಾಂತರಿಸಲಾಗುವುದು. 

ಕೇವಲ 100 ದಿನಗಳಲ್ಲಿ ಈ ‘ತಾತ್ಕಾಲಿಕ ಕ್ರೀಡಾಂಗಣ’ವನ್ನು ನಿರ್ಮಾಣ ಮಾಡಲಾಗಿತ್ತು. ಆಸ್ಟ್ರೇಲಿಯಾದ ಅಡಿಲೇಡ್‌ನಿಂದ ತಂದ ಡ್ರಾಪ್ ಇನ್‌ ಪಿಚ್‌ಗಳನ್ನು ಇಲ್ಲಿ ಅಳವಡಿಸಲಾಗಿತ್ತು. ಬುಧವಾರದವರೆಗೆ ಇಲ್ಲಿ ನಡೆದ ಪಂದ್ಯಗಳಲ್ಲಿ ಬ್ಯಾಟರ್‌ಗಳು ರನ್‌ ಗಳಿಸಲು ಹರಸಾಹಸಪಟ್ಟಿದ್ದರು. 

ಭಾರತ ಮತ್ತು ಅಮೆರಿಕ ನಡುವಣ ಪಂದ್ಯವೇ ಇಲ್ಲಿ ನಡೆದ ಕೊನೆಯ ಪಂದ್ಯವಾಯಿತು. ಅದರಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಜಯಿಸಿತು. 

ಲಾಂಗ್ ಐಲ್ಯಾಂಡ್‌ನಲ್ಲಿರುವ 930 ಎಕರೆ ವಿಸ್ತಾರದ ಈಸೆನ್‌ಹಾವರ್ ಪಾರ್ಕ್‌ನಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಿತ್ತು. ಕ್ರೀಡಾಂಗಣದಲ್ಲಿ ಒಟ್ಟು 10 ಡ್ರಾಪ್ ಇನ್ ಪಿಚ್‌ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ನಾಲ್ಕು ಮುಖ್ಯ ಪಿಚ್‌ಗಳಾಗಿದ್ದವು. ಇನ್ನುಳಿದ ಆರು ಅಭ್ಯಾಸಕ್ಕಾಗಿ ಬಳಕೆಯಾದವು. 

ಇಲ್ಲಿಯ ಮೂಲಸೌಲಭ್ಯಗಳಿಗೆ ಬಳಸಲಾದ ಎಲ್ಲ ಸಾಮಗ್ರಿ, ಸಲಕರಣೆಗಳನ್ನು ಪ್ರತ್ಯೇಕ ಭಾಗಗಳಾಗಿ ಬಿಚ್ಚಿ ಬೇರೆಡೆ ಸಾಗಿಸಬಹುದಾಗಿದೆ. 

‘ಜೂನ್ 12ರಂದು ನಡೆದ ಪಂದ್ಯದ ನಂತರ ಕ್ರೀಡಾಂಗಣದ ಮೂಲಸೌಕರ್ಯಗಳಿಗೆ ಬಳಕೆಯಾದ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಬಿಚ್ಚಿ ಲಾಸ್‌ ವೇಗಾಸ್‌ಗೆ ಕಳುಹಿಸಲಾಗುತ್ತಿದೆ. ಅಲ್ಲಿ ನಡೆಯುವ ಗಾಲ್ಫ್‌ ಟೂರ್ನಿಯ ಆಯೋಜನೆಗೆ ಈ ಸಲಕರಣೆಗಳನ್ನು ಬಳಸಲಾಗುತ್ತದೆ. ತದನಂತರ ಈಸೆನ್‌ಹಾವರ್ ಪಾರ್ಕ್‌ ಮೊದಲಿನಂತೆ ಬಳಕೆಗೆ ಮುಕ್ತವಾಗಲಿದೆ’ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. 

ಆರು ವಾರಗಳ ಅವಧಿಯಲ್ಲಿ ಈ ಸ್ಥಳಾಂತರ ಕಾಮಗಾರಿ ನಡೆಯಲಿದೆ. 34 ಸಾವಿರ ಪ್ರೇಕ್ಷಕರಿಗಾಗಿ ಗ್ಯಾಲರಿಗಳನ್ನು ನಿರ್ಮಿಸಲಾಗಿತ್ತು. ಜೂನ್ 9ರಂದು ಇಲ್ಲಿಯೇ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ‍ಪಂದ್ಯ ವೀಕ್ಷಿಸಲು ಕ್ರೀಡಾಂಗಣ ಭರ್ತಿಯಾಗಿತ್ತು. 

ಭಾರತ ತಂಡವು ಈ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯವೂ ಸೇರಿದಂತೆ  ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದೆ. ಟೂರ್ನಿಯ ಒಟ್ಟು ಎಂಟು ಪಂದ್ಯಗಳು ಇಲ್ಲಿ ನೆಡೆದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT