ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ದಿಗ್ಗಜರಾದ ಅನಿಲ್ ಕುಂಬ್ಳೆ, ಮುರಳೀಧರನ್ ದಾಖಲೆ ಮುರಿದ ನೇಥನ್ ಲಯನ್

Last Updated 2 ಮಾರ್ಚ್ 2023, 16:51 IST
ಅಕ್ಷರ ಗಾತ್ರ

ಇಂದೋರ್: ಆಸ್ಟ್ರೇಲಿಯಾದ ಸ್ಪಿನ್ನರ್‌ ನೇಥನ್ ಲಯನ್ ಅವರು ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದರು. ಆ ಮೂಲಕ ಅವರು ಎರಡು ವಿಶೇಷ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಭಾರತ ಎದುರಿನ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 64 ರನ್‌ ನೀಡಿ 8 ವಿಕೆಟ್‌ಗಳನ್ನು ಕಬಳಿಸಿದ ನೇಥನ್‌, ಭಾರತದಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವಿದೇಶಿ ಬೌಲರ್‌ ಎನಿಸಿಕೊಂಡರು. ಸದ್ಯ ನೇಥನ್ ಖಾತೆಯಲ್ಲಿ ಭಾರತದಲ್ಲಿ ಪಡೆದ 113 ವಿಕೆಟ್‌ಗಳಿವೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಸ್ಪಿನ್‌ ದಿಗ್ಗಜ ಮುತ್ತಯ್ಯ ಮುರುಳಿಧರನ್‌ ಅವರ ಹೆಸರಿನಲ್ಲಿತ್ತು. ಅವರು ಭಾರತದಲ್ಲಿ ಆಡಿದ 25 ಟೆಸ್ಟ್‌ ಪಂದ್ಯಗಳಲ್ಲಿ 105 ವಿಕೆಟ್‌ ಉರುಳಿಸಿದ್ದರು.

ಅಷ್ಟೇ ಅಲ್ಲ, ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಶ್ರೇಯವೂ ನೇಥನ್ ಅವರದ್ದಾಗಿದೆ. ನೇಥನ್ ಈವರೆಗೆ 112 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದುವರೆಗೆ ಈ ದಾಖಲೆ ಭಾರತದ ಅನಿಲ್‌ ಕುಂಬ್ಳೆ ಅವರ ಹೆಸರಿನಲ್ಲಿತ್ತು. ಅವರು 111 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. 106 ವಿಕೆಟ್‌ಗಳನ್ನು ಉರುಳಿಸಿರುವ ಆರ್‌.ಅಶ್ವಿನ್‌ ನಂತರದ ಸ್ಥಾನದಲ್ಲಿದ್ದಾರೆ.

ಸೋಲಿನ ಭೀತಿಯಲ್ಲಿ ಭಾರತ
ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 109 ರನ್‌ಗಳಿಗೆ ಆಲೌಟ್‌ ಆಗಿತ್ತು. ಯುವ ಸ್ಪಿನ್ನರ್‌ ಮ್ಯಾಥ್ಯೂ ಕುಹ್ನೇಮನ್‌ ಐದು ವಿಕೆಟ್‌ ಪಡೆದರೆ, ನೇಥನ್ ಮೂರು ವಿಕೆಟ್‌ ಕಬಳಿಸಿ ಮಿಂಚಿದ್ದರು.

ಇದಕ್ಕುತ್ತರವಾಗಿ ಪ್ರವಾಸಿ ಪಡೆ 197 ರನ್‌ ಗಳಿಸಿದೆ. ರವಿಚಂದ್ರನ್‌ ಅಶ್ವಿನ್‌ 4 ವಿಕೆಟ್‌ ಪಡೆದರೆ, ರವೀಂದ್ರ ಜಡೇಜ ಹಾಗೂ ಉಮೇಶ್‌ ಯಾದವ್‌ ತಲಾ ಮೂರು ವಿಕೆಟ್‌ ಕಬಳಿಸಿದರು.

88 ರನ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತದ ಬ್ಯಾಟರ್‌ಗಳು ಉತ್ತಮ ಆಟವಾಡಲು ಮತ್ತೆ ವಿಫಲವಾದರು. ನೇಥನ್ ಸ್ಪಿನ್‌ ಸುಳಿಗೆ ಸಿಲುಕಿ ಕೇವಲ 163 ರನ್‌ಗೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 76 ರನ್‌ಗಳ ಗೆಲುವಿನ ಗುರಿ ನಿಗದಿಯಾಗಿದೆ. ಈ ಪಂದ್ಯವನ್ನು ಗೆದ್ದರೆ ಭಾರತದ ಸರಣಿ ಗೆಲುವಿನ ಅಂತರ 2–1ಕ್ಕೆ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT