ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್, ಕುಂಬ್ಳೆಗೆ ಖೇಲ್ ರತ್ನ ಯಾಕಿಲ್ಲ: ನೆಟ್ಟಿಗರಿಂದ ಉತ್ತರ–ದಕ್ಷಿಣ ಕದನ

Last Updated 23 ಆಗಸ್ಟ್ 2020, 13:15 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿ ಭಾಷೆ ಹೇರಿಕೆ ಕುರಿತು ದಕ್ಷಿಣದಲ್ಲಿ ಅಸಮಾಧಾನದ ಹೊಗೆ ಹೆಚ್ಚುತ್ತಿರುವ ಬೆನ್ನಲ್ಲೇ ಕ್ರೀಡಾ ಕ್ಷೇತ್ರದಲ್ಲೂ ಉತ್ತರ–ದಕ್ಷಿಣದ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ನೆಟ್ಟಿಗರು ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದಾರೆ. ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ‘ಹಿಂದಿ’ಯವರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂಬ ಅಸಮಾಧಾನದ ನಡುವೆಯೇ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರನ್ನು ಪ್ರಶಸ್ತಿಗೆ ಪರಿಗಣಿಸದೇ ದ್ರೋಹ ಎಸಗಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದಕ್ಕೆ ಪೂರಕವಾಗಿ ದ್ರಾವಿಡ್ ಅವರ ಅಮೋಘ ಇನಿಂಗ್ಸ್‌ಗಳ ವಿಡಿಯೊವನ್ನು ಅನೇಕರು ಅಪ್‌ಲೋಡ್ ಮಾಡಿದ್ದು ಕುಂಬ್ಳೆ ಬೌಲಿಂಗ್‌ಗೆ ಸಂಬಂಧಿಸಿದ ವಿವರಗಳನ್ನೂ ಹಾಕಿದ್ದಾರೆ. ದಕ್ಷಿಣದ ಸಂಜಯ್‌ ಬಂಗಾರ್ ಅವರನ್ನೂ ಪ್ರಶಸ್ತಿಗೆ ಪರಿಗಣಿಸಬಹುದಿತ್ತು ಎಂಬುದನ್ನು ಪರೋಕ್ಷವಾಗಿ ಕೋರುವ ಪೋಸ್ಟ್‌ಗಳೂ ಇವೆ. ಪ್ರಶಸ್ತಿ ವಿಷಯದಲ್ಲಿ ಉತ್ತರ–ದಕ್ಷಿಣ ಎಂದು ಭೇದ ಮಾಡುವುದು ಸರಿಯಲ್ಲ. ಎಂಟು ವರ್ಷಗಳ ಹಿಂದೆಯೇ ನಿವೃತ್ತರಾಗಿರುವ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಹೆಸರನ್ನು ಪ್ರಶಸ್ತಿ ಪಟ್ಟಿಯಲ್ಲಿ ಸೇರಿಸಲು ಅವಕಾಶವಿಲ್ಲ ಎಂದು ಕೆಲವರು ಪ್ರತಿಪಾದಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ.ಜಗದೀಶ ಹಿರೇಮಠ ಅವರು ‘ರಾಹುಲ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಸಿಗದ ಖೇಲ್ ರತ್ನ ರೋಹಿತ್ ಶರ್ಮಾ ಅವರಿಗೆ ಸಿಕ್ಕಿದೆ. ಇದರ ಹಿಂದಿನ ಗುಟ್ಟು ಏನು ಎಂದು ಗೊತ್ತೇ’ ಎಂದು ಕೇಳಿ ಮಾಡಿರುವ ಪೋಸ್ಟ್ ಮೇಲೆ ಚರ್ಚೆ ನಡೆಯುತ್ತಿದೆ. ‘ದೆಹಲಿ ಸುಲ್ತಾನರಿಗೆ’ ದಕ್ಷಿಣ ಭಾರತದವರನ್ನು ಕಂಡರೆ ಅಷ್ಟಕ್ಕಷ್ಟೇ. ಇದನ್ನು ನಾನು ಖುದ್ದು ಅನುಭವಿಸಿದ್ದೇನೆ’ ಎಂದು ಅವರು ಆರೋಪಿಸಿದ್ದಾರೆ.

‘ರಾಹುಲ್ ದ್ರಾವಿಡ್ ಅವರಿಗೆ ವಿಕೆಟ್ ಕೀಪಿಂಗ್ ಸಾಮರ್ಥ್ಯವೂ ಇತ್ತು. ಆದರೆ ಮಹೇಂದ್ರ ಸಿಂಗ್ ಧೋನಿ ಕೈಗೆ ಗ್ಲೌಸ್ ನೀಡಿದ ನಂತರ ದ್ರಾವಿಡ್ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ಸಿಗಲೇ ಇಲ್ಲ’ ಎಂದು ಸಾರಂಗ್ ಎಂಬವರು ಹೇಳಿದ್ದಾರೆ.

ವೇಗಿಗಳಿಗೆ ಅನಕೂಲಕರವಾಗಿದ್ದ ಹೆಡಿಂಗ್ಲಿ ಪಿಚ್‌ನಲ್ಲಿ ದ್ರಾವಿಡ್ (148) ಮತ್ತು ಸಂಜಯ್ ಬಂಗಾರ್ ಅವರ ಸೊಗಸಾದ ಜೊತೆಯಾಟವನ್ನು ‘ದಿ ಫೀಲ್ಡ್‌’ ಎಂಬ ಗುಂಪಿನಲ್ಲಿ ವರ್ಣಿಸಲಾಗಿದೆ. ‘ಗೋಡೆ’ಗೆ ಖೇಲ್ ರತ್ನ ಸಲ್ಲಲೇಬೇಕು. 2006ರ ಮತ್ತು 2012ರಲ್ಲಿ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿತ್ತು. ಆದರೆ ಎರಡೂ ಸಂದರ್ಭಗಳಲ್ಲಿ ಬೇರೆಯವರಿಗೆ ಖೇಲ್ ರತ್ನ ನೀಡಲಾಯಿತು’ ಎಂದು ರೋಹಿತ್ ರಾಜ್ ನೆನಪಿಸಿಕೊಂಡಿದ್ದಾರೆ. 1996ರ ರಾಹುಲ್ ದ್ರಾವಿಡ್ ಅವರ ಅಪರೂಪದ ಇನಿಂಗ್ಸ್ ಒಂದರ ವಿಡಿಯೊವನ್ನು ಮೈನಕ್ ಸಿನ್ಹಾ ಅಪ್‌ಲೋಡ್ ಮಾಡಿದ್ದಾರೆ.

‘ದ್ರಾವಿಡ್ ಸಿಕ್ಸರ್‌ಗಳ ಮೂಲಕ ರಂಜಿಸುವವರಲ್ಲ. ಚೆಂಡನ್ನು ಸೊಗಸಾಗಿ ಬೌಂಡರಿಗೆ ಅಟ್ಟಬಲ್ಲ ಕಲಾಕಾರ. ಆದರೂ ಅವರ ಅಪರೂಪದ ಸಿಕ್ಸರ್‌ಗಳು ಮನಮೋಹಕ. ವೇಗದ ಎಸೆತಗಳನ್ನು ಸ್ಲೈಜ್ ಮಾಡಿ ಪಾಯಿಂಟ್ ಮತ್ತು ಕವರ್ಸ್ ಮೇಲಿಂದ ಸಿಕ್ಸರ್‌ಗೆ ಅಟ್ಟುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದರು‘ ಎಂದೂ ಮೈನಕ್ ವಿಡಿಯೊ ಸಮೇತ ವಿವರಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ನಿವೃತ್ತಿ...
ವಿಶಾಲ್ ಉಪಾಧ್ಯಾಯ ಎಂಬ ವ್ಯಕ್ತಿ ‘ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ವರ್ಷಗಳ ಹಿಂದೆಯೇ ಅರ್ಜುನ ಪ್ರಶಸ್ತಿ ಬಂದಿದೆ. ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿತ್ತು. ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಈ ವರ್ಷ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಹೀಗಿರುವಾಗ ಎಂಟು ವರ್ಷಗಳ ಹಿಂದೆಯೇ ನಿವೃತ್ತರಾಗಿರುವವರಿಗೆ ಪ್ರಶಸ್ತಿ ನೀಡುವುದು ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ತಮ್ಮ ಹೆಸರು ಬರೆದುಕೊಂಡಿರುವ ಶಶಾಂಕ್ ಎಂಬ ವ್ಯಕ್ತಿ ‘ಜಗದೀಶ ಹಿರೇಮಠ ಅವರು ರಾಜಕೀಯ ಪ್ರೇರಿತ ಪೋಸ್ಟ್ ಹಾಕಿದ್ದಾರೆ. ಅವರ ಬಣ್ಣದ ಮಾತಿಗೆ ಯಾರೂ ಮರುಳಾಗಬೇಡಿ’ ಎಂದು ಕೋರಿದ್ದಾರೆ. ‘ದ್ರಾವಿಡ್ ಮತ್ತು ಕುಂಬ್ಳೆ ಅವರು 2012ರಲ್ಲೇ ನಿವೃತ್ತರಾಗಿದ್ದಾರೆಯೇ ಹೊರತು ನಿನ್ನೆ–ಅಲ್ಲ. ಹಾಗೆ ನೋಡಿದರೆ ರೋಹಿತ್ ಶರ್ಮಾ ಮುಂಬೈನಲ್ಲಿ ನೆಲೆಸಿದ್ದರೂ ಅವರ ಅಮ್ಮ ತೆಲುಗು ಮೂಲದವರು’ ಎಂದು ಶಶಾಂಕ್ ಸಮಜಾಯಿಷಿ ನೀಡಿದ್ದಾರೆ.

‘ಖೇಲ್ ರತ್ನ ಪ್ರಶಸ್ತಿಯನ್ನು ಆಯಾ ಕಾಲದ ಸಾಧನೆ ನೋಡಿ ಕೊಡಲಾಗುತ್ತದೆ. ರಾಹುಲ್ ದ್ರಾವಿಡ್ ಅವರು ಪರಾಕಾಷ್ಠೆಯಲ್ಲಿ ಇದ್ದದ್ದು 2004ರಲ್ಲಿ. ಆಗ ಅವರಿಗೆ ಐಸಿಸಿ ನೀಡುವ ಎಲ್ಲ ಪ್ರಶಸ್ತಿಗಳು ಸಂದಿದ್ದವು. ದುರದೃಷ್ಟವಶಾತ್ ಆ ವರ್ಷದ ಖೇಲ್ ರತ್ನ ಪ್ರಶಸ್ತಿ ಅಭನವ್ ಬಿಂದ್ರಾಗೆ ಲಭಿಸಿತು. ಯಾಕೆಂದರೆ ಆ ವರ್ಷ ಅವರ ಸಾಧನೆ ಅಮೋಘವಾಗಿತ್ತು’ ಎಂದು ಹೆಮ್ಮೆಯ ಭಾರತೀಯ, ಕನ್ನಡಿಗ ಎಂದು ಬರೆದುಕೊಂಡಿರುವ ಶ್ರೀನಿವಾಸ ಕುಲಕರ್ಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT