ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ಸರಣಿಯಿಂದ ನೂತನ ಕೋಚ್: ಜಯ್ ಶಾ

Published 1 ಜುಲೈ 2024, 16:21 IST
Last Updated 1 ಜುಲೈ 2024, 16:21 IST
ಅಕ್ಷರ ಗಾತ್ರ

ಬ್ರಿಜ್‌ಟೌಟನ್ : ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಸೀಮಿತ ಓವರ್‌ಗಳ ಸರಣಿಯಿಂದ ಭಾರತ ಕ್ರಿಕೆಟ್ ತಂಡಕ್ಕೆ ನೂತನ ಮುಖ್ಯ ಕೋಚ್ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೋಮವಾರ ಹೇಳಿದ್ದಾರೆ.

ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ದ್ರಾವಿಡ್ ಅವರ ನಂತರ ಮುಖ್ಯ ಕೋಚ್ ಆಗುವ ನಿರೀಕ್ಷೆಯಿದೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯು ಗಂಭೀರ್ ಮತ್ತು ಭಾರತದ ಮಹಿಳಾ ತಂಡದ ಮಾಜಿ ಕೋಚ್ ಡಬ್ಲ್ಯು.ವಿ.ರಾಮನ್ ಅವರ ಸಂದರ್ಶನವನ್ನೂ ನಡೆಸಿದೆ.

 ‘ಕೋಚ್ ಮತ್ತು ಆಯ್ಕೆದಾರ ಇಬ್ಬರನ್ನೂ ಶೀಘ್ರದಲ್ಲೇ ನೇಮಕ ಮಾಡಲಾಗುವುದು. ಸಿಎಸಿ ಇಬ್ಬರನ್ನು ಸಂದರ್ಶಿಸಿದೆ. ಮುಂಬೈ ತಲುಪಿದ ನಂತರ ಅವರು ಏನು ನಿರ್ಧರಿಸುತ್ತಾರೋ ಅದನ್ನು ಪಾಲಿಸುತ್ತೇವೆ. ವಿವಿಎಸ್ ಲಕ್ಷ್ಮಣ್ ಜಿಂಬಾಬ್ವೆಗೆ ತೆರಳುತ್ತಿದ್ದಾರೆ. ಆದರೆ, ಹೊಸ ಕೋಚ್ ಶ್ರೀಲಂಕಾ ಸರಣಿಯಿಂದ ಸೇರಲಿದ್ದಾರೆ’ ಎಂದು ಜುಲೈ 6 ರಿಂದ ಪ್ರಾರಂಭವಾಗುವ ಜಿಂಬಾಬ್ವೆ ಪ್ರವಾಸ ಉಲ್ಲೇಖಿಸಿ ಶಾ ಮಾಧ್ಯಮಗಳಿಗೆ ತಿಳಿಸಿದರು.

ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಟಿ20 ಹಾಗೂ ಮೂರು  ಏಕದಿನ ಪಂದ್ಯಗಳನ್ನಾಡಲಿದೆ.

ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ಭಾರತ ತಂಡದೊಂದಿಗೆ ಕೆರೀಬಿಯನ್‌ನಲ್ಲಿರುವ ಶಾ,  ಫೈನಲ್‌ನಲ್ಲಿ ಉತ್ತಮ ಆಟವಾಡಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

‘ಹೋದ ವರ್ಷ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಉತ್ತಮವಾಗಿ ಆಡಿದ್ದರಿಂದ ಪ್ರಶಸ್ತಿ ಗೆದ್ದಿತು. ನಾವು ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದೇವೆ. ಈ ಬಾರಿ ನಾವು ಪ್ರಶಸ್ತಿ ಗೆಲ್ಲಲು ಉತ್ತಮವಾಗಿ ಆಡಿದ್ದೇವೆ’ ಎಂದರು.

‘ರೋಹಿತ್ ಶರ್ಮಾ ಅವರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ಎಲ್ಲರೂ ಉತ್ತಮ ಆಟವಾಡಿದರು. ಅನುಭವವು ಬಹಳಷ್ಟು ವ್ಯತ್ಯಾಸ ಉಂಟು ಮಾಡುತ್ತದೆ. ಆದರೆ ವಿಶ್ವಕಪ್‌ ಟೂರ್ನಿಯಲ್ಲಿ ನೀವು ಹೆಚ್ಚು ಪ್ರಯೋಗ ಮಾಡಲು ಸಾಧ್ಯವಿಲ್ಲ.ಉತ್ತಮ ಆಟಗಾರನಿಗೆ ಆಟಕ್ಕೆ ಯಾವಾಗ ವಿದಾಯ ಹೇಳಬೇಕೆಂದು ತಿಳಿದಿದೆ. ರೋಹಿತ್ ಅವರ ಸ್ಟ್ರೈಕ್ ರೇಟ್ ನೋಡಿ, ಇದು ಬಹಳಷ್ಟು ಯುವ ಆಟಗಾರರಿಗಿಂತ ಉತ್ತಮವಾಗಿದೆ’ ಎಂದು ತಿಳಿಸಿದರು.  

ವಿಶ್ವಕ‍ಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್‌ ಪ್ರದರ್ಶನ ಹಾಗೂ ತಂಡದ ನಾಯಕತ್ವವನ್ನು ಅವರು ವಹಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತನಾಡಿದ ಶಾ, ‘ನಾಯಕನನ್ನು ಆಯ್ಕೆದಾರರು ನಿರ್ಧರಿಸುತ್ತಾರೆ ಮತ್ತು ಅವರೊಂದಿಗೆ ಚರ್ಚಿಸಿದ ನಂತರ    ಪ್ರಕಟಿಸುತ್ತೇವೆ. ಹಾರ್ದಿಕ್ ಅವರ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇದ್ದವು. ಆಯ್ಕೆದಾರರು ಅವರ ಮೇಲೆ ನಂಬಿಕೆ ಇಟ್ಟಿರು ಮತ್ತು ಅವರು ಸಾಬೀತುಪಡಿಸಿದರು’ ಎಂದರು. 

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ 'ಎ': ಐದು ಟೆಸ್ಟ್ ಪಂದ್ಯಗಳಿಗೆ ಮುಂಚಿತವಾಗಿ ಭಾರತ ‘ಎ’ ತಂಡವು ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ ಎಂದು ಶಾ ದೃಢಪಡಿಸಿದರು.

ಭಾರತ ತಂಡ ಸ್ವದೇಶಕ್ಕೆ ಮರಳಿದ ಬಳಿಕ ಆಟಗಾರರನ್ನು ಬಿಸಿಸಿಐ ವತಿಯಿಂದ ಸನ್ಮಾನಿಸಲಾಗುವುದು. ಚಂಡಮಾರುತದ ಕಾರಣ ಬಾರ್ಬಾಡೋಸ್‌ನಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಹಾಗಾಗಿ ಆಟಗಾರರು ಅಲ್ಲಿಯೇ ಇದ್ದಾರೆ. 

‘ವಿಮಾನನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕಾರಣ ಪ್ರಯಾಣದ ಯೋಜನೆಗಳು ಸ್ಪಷ್ಟವಾದ ನಂತರ, ಸನ್ಮಾನದ ಬಗ್ಗೆ ಯೋಚಿಸುತ್ತೇವೆ’ ಎಂದು ಶಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT