ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WTC Final: ಕಠಿಣ ಸವಾಲು ಎದುರಿಸುವ ಆತ್ಮಬಲವಿದೆ: ಪೂಜಾರ

Last Updated 13 ಜೂನ್ 2021, 16:04 IST
ಅಕ್ಷರ ಗಾತ್ರ

ಸೌತಾಂಪ್ಟನ್: ಇಂಗ್ಲೆಂಡ್‌ನ ವಾತಾವರಣವು ನ್ಯೂಜಿಲೆಂಡ್ ಆಟಗಾರರಿಗೆ ಹೆಚ್ಚು ನೆರವಾಗುತ್ತದೆ ನಿಜ. ಆದರೆ ಭಾರತ ತಂಡವೂ ಈ ಸವಾಲು ಎದುರಿಸಲು ಸಮರ್ಥರಾಗಿದ್ದೇವೆ ಎಂದು ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಇದೇ 18ರಂದು ಇಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ ಬಳಗಕ್ಕಿಂತಲೂ ಕೆಲವು ದಿನಗಳ ಮುನ್ನ ಇಂಗ್ಲೆಂಡ್‌ಗೆ ಬಂದಿಳಿದಿರುವ ಕಿವೀಸ್ ತಂಡವು ಎರಡು ಟೆಸ್ಟ್‌ಗಳ ಸರಣಿಯನ್ನೂ ಆಡಿದೆ. ಆದರೆ ಭಾರತದ ಕ್ರಿಕೆಟಿಗರು ಹೋದ ತಿಂಗಳು ಅರ್ಧಕ್ಕೆ ನಿಂತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತರ ಯಾವುದೇ ಪಂದ್ಯ ಆಡಿಲ್ಲ. ಆದ್ದರಿಂದ ಕಿವೀಸ್ ಬಳಗಕ್ಕೆ ಹೆಚ್ಚು ಅನುಕೂಲ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಕುರಿತು ಬಿಸಿಸಿಐ ಡಾಟ್ ಟಿವಿಯಲ್ಲಿ ಪ್ರತಿಕ್ರಿಯಿಸಿರುವ ಪೂಜಾರ, ‘ನ್ಯೂಜಿಲೆಂಡ್ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಿಂದ ಅವರ ಆತ್ಮವಿಶ್ವಾಸ ವೃದ್ಧಿಸಿದೆ. ಅಲ್ಲದೇ ಅಭ್ಯಾಸದ ದೃಷ್ಟಿಯಿಂದ ಉತ್ತಮ ಅವಕಾಶವೂ ಲಭಿಸಿದೆ. ಆದರೆ ಫೈನಲ್ ಪಂದ್ಯದಲ್ಲಿ ಅದೇ ಪ್ರಮುಖವಾಗುವುದಿಲ್ಲ. ಆಟಗಾರರ ಸಾಮರ್ಥ್ಯವೇ ಮುಖ್ಯವಾಗುತ್ತದೆ. ಅಂತಹದೊಂದು ಶ್ರೇಷ್ಠ ಸಾಮರ್ಥ್ಯ ತೋರುವ ಆತ್ಮವಿಶ್ವಾಸ ನಮ್ಮಲಿದೆ‘ ಎಂದರು.

‘ನಮಗೆ ಅಭ್ಯಾಸಕ್ಕೆ ಸಿಕ್ಕಿರುವ ಕಾಲಾವಕಾಶದಲ್ಲಿಯೇ ಹೆಚ್ಚು ಏಕಾಗ್ರತೆಯನ್ನು ಸಾಧಿಸುತ್ತೇವೆ. ಅಭ್ಯಾಸ ಪಂದ್ಯವನ್ನೂ ಆಡುತ್ತಿರುವುದರಿಂದ ನಮ್ಮ ಲೋಪದೋಷಗಳನ್ನು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ‘ ಎಂದು ಸೌರಾಷ್ಟ್ರದ ಪೂಜಾರ ವಿಶ್ವಾಸ ವ್ಯಕ್ತಪಡಿಸಿದರು.

‘ಒಂದೇ ದಿನದಲ್ಲಿ ಪದೇಪದೇ ಬದಲಾಗುವ ಇಲ್ಲಿಯ ಹವಾಮಾನದಲ್ಲಿ ಹೊಂದಿಕೊಂಡು ಆಡುವುದೇ ಕಠಿಣ ಸವಾಲು. ದಿಢೀರ್ ಮಳೆ ಶುರುವಾಗುತ್ತದೆ. ನಾವು ಪೆವಿಲಿಯನ್‌ಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಮಳೆ ನಿಲ್ಲುತ್ತದೆ. ಮತ್ತೆ ನಾವು ಆಡಲು ಬರಬೇಕು. ಇದರಿಂದಾಗಿ ಮನೋದೈಹಿಕವಾಗಿ ತುಂಬಾ ಏಕಾಗ್ರಚಿತ್ತರಾಗಿರುವುದು ಅಗತ್ಯ‘ ಎಂದರು.

‘ಟೆಸ್ಟ್ ಕ್ರಿಕೆಟ್ ಮಾದರಿಯು ಅತ್ಯಂತ ಸವಾಲಿನದ್ದು. ಇದರಲ್ಲಿ ನಮ್ಮ ಸಾಮರ್ಥ್ಯ, ಕೌಶಲ ಮತ್ತು ಮಾನಸಿಕ ದೃಢತೆಯನ್ನು ಸಂಪೂರ್ಣವಾಗಿ ಪಣಕ್ಕೊಡ್ಡಿದ್ದರೆ ಮಾತ್ರ ಯಶಸ್ಸು ಸಾಧ್ಯ. ತಾಳ್ಮೆಯಿಂದ ಸವಾಲು ಎದುರಿಸಬೇಕು‘ ಎಂದು ಪೂಜಾರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT