ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗೆ ವಿಷಾದವಿಲ್ಲ; ಛಲ ಕೈಬಿಡಲ್ಲ: ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್‌

ಅರು ವರ್ಷಗಳಲ್ಲಿ ಮೂರನೇ ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಮುಗ್ಗರಿಸಿದ ನ್ಯೂಜಿಲೆಂಡ್ ತಂಡ
Last Updated 15 ನವೆಂಬರ್ 2021, 13:09 IST
ಅಕ್ಷರ ಗಾತ್ರ

ದುಬೈ: ಆರು ವರ್ಷಗಳಲ್ಲಿ ಮೂರನೇ ಬಾರಿ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲು ಕಂಡಿದೆ. ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಅನುಭವಿಸಿದ ಸೋಲಿಗೆ ವಿಷಾದವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೋಚ್ ಗ್ಯಾರಿ ಸ್ಟೆಡ್‌, ಭವಿಷ್ಯದಲ್ಲಿ ಛಲ ಬಿಡದೆ ತಂಡ ಕಾದಾಡಲಿದೆ ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ನಡೆದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್‌ಗಳಿಂದ ಆಸ್ಟ್ರೇಲಿಯಾಗೆ ಮಣಿದಿದೆ. ನಾಯಕ ಕೇನ್ ವಿಲಿಯಮ್ಸನ್ (85; 48 ಎಸೆತ, 10 ಬೌಂಡರಿ, 3 ಸಿಕ್ಸರ್‌) ಅವರ ಏಕಾಂಗಿ ಹೋರಾಟದ ಫಲವಾಗಿ ನ್ಯೂಜಿಲೆಂಡ್ ನಾಲ್ಕು ವಿಕೆಟ್‌ಗಳಿಗೆ 172 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ಆ್ಯರನ್ ಫಿಂಚ್ ಬಳಗ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ (53; 38 ಎ, 4 ಬೌಂ, 3 ಸಿ) ಮತ್ತು ಮೂರನೇ ಕ್ರಮಾಂಕದ ಮಿಚೆಲ್ ಮಾರ್ಷ್ (77; 50 ಎ, 6 ಬೌಂ, 4 ಸಿ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಏಳು ಎಸೆತಗಳು ಉಳಿದಿರುವಾಗ ದಡ ಸೇರಿತು.

2015ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಏಳು ವಿಕೆಟ್‌ಗಳಿಂದ ಮಣಿದಿದ್ದ ನ್ಯೂಜಿಲೆಂಡ್2019ರ ವಿಶ್ವಕಪ್‌ನ ಟೈ ಆದ ಪಂದ್ಯದಲ್ಲಿ ಸೂಪರ್ ಓವರ್ ನಂತರ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್‌ಗೆ ಮಣಿದಿತ್ತು. ‌

ಭಾನುವಾರದ ಫೈನಲ್ ನಂತರ ಮಾತನಾಡಿದ ಕೋಚ್ ’ತಂಡವೊಂದು ಫೈನಲ್‌ ಪ್ರವೇಶಿಸುವುದು ದೊಡ್ಡ ಸಾಧನೆ. ಹೀಗಾಗಿ ತಂಡದ ಸಾಧನೆ ಬಗ್ಗೆ ಹೆಮ್ಮೆ ಇದೆ. ಈ ಬಾರಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಅಥವಾ ಭಾರತ ಫೈನಲ್‌ ಪ್ರವೇಶಿಸಲಿದೆ ಎಂದು ಅನೇಕ ಮಂದಿ ಹೇಳಿದ್ದರು. ಆದರೆ ಕೊನೆಗೆ ಆದದ್ದೇ ಬೇರೆ. ಆಸ್ಟ್ರೇಲಿಯಾ ತಂಡದ ಸಾಧನೆಯೂ ಶ್ಲಾಘನೀಯ’ ಎಂದರು.

ಅದೃಷ್ಟವಾಗಿ ಒಲಿದ ಟಾಸ್: ಫಿಂಚ್‌

ಫೈನಲ್ ಪಂದ್ಯದಲ್ಲಿ ಟಾಸ್ ಗೆಲುವಿನ ಅದೃಷ್ಟ ಒಲಿದದ್ದು ಪ್ರಶಸ್ತಿ ಗೆಲ್ಲಲು ಉತ್ತಮ ಅವಕಾಶ ಒದಗಿಸಿತು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಅಭಿಪ್ರಾಯಪಟ್ಟರು.

ಸೂಪರ್ 12 ಹಂತವೂ ಸೇರಿದಂತೆ ಟೂರ್ನಿಯ ಒಟ್ಟು ಏಳು ಪಂದ್ಯಗಳ ಪೈಕಿ ಆರರಲ್ಲಿ ಫಿಂಚ್ ಟಾಸ್ ಗೆದ್ದಿದ್ದರು. ತಂಡ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಇದು ನೆರವಾಯಿತು ಎಂದು ಅವರು ಹೇಳಿದರು.

ಯುಎಇಯಲ್ಲಿ ನಡೆದ ವಿಶ್ವಕಪ್‌ನ ಬಹುತೇಕ ಪಂದ್ಯಗಳಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಿತ್ತು. ರಾತ್ರಿ ಮಂಜು ಬೀಳುವುದರಿಂದ ಬೌಲಿಂಗ್ ಕಷ್ಟ. ಹೀಗಾಗಿ ಟಾಸ್ ಗೆದ್ದ ತಂಡಗಳು ಬೌಲಿಂಗ್‌ ಆರಿಸಿಕೊಂಡಿದ್ದವು. ದುಬೈಯಲ್ಲಿ ಆಡಿದ ಒಟ್ಟು 13 ಪಂದ್ಯಗಳ ಪೈಕಿ 12ರಲ್ಲಿ ಗುರಿ ಬೆನ್ನತ್ತಿದ ತಂಡ ಜಯ ಸಾಧಿಸಿದೆ.

ಕೃತಜ್ಞತೆ ಸಲ್ಲಿಸಿದ ಮಾರ್ಷ್

ಅಮೋಘ ಅರು ವಾರಗಳ ಕೊಡುಗೆ ನೀಡಿದ ಆಯ್ಕೆ ಸಮಿತಿಗೆ ಕೃತಜ್ಞತೆಗಳು ಸಲ್ಲಬೇಕು ಎಂದು ಸ್ಫೋಟಕ ಶೈಲಿಯ ಬ್ಯಾಟರ್‌ ಹಾಗೂ ಆಲ್‌ರೌಂಡರ್ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಹೇಳಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ್ದು ವೃತ್ತಿಜೀವನದಲ್ಲಿ ಸಾಧನೆಗೆ ಸಹಕಾರಿಯಾಗಿದೆ ಎಂಬುದು ಅವರ ಅಭಿಪ್ರಾಯ.

ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿರುವ 31 ವರ್ಷದ ಮಾರ್ಷ್ ಆರು ಪಂದ್ಯಗಳಲ್ಲಿ ಒಟ್ಟು 185 ರನ್ ಕಲೆ ಹಾಕಿದ್ದಾರೆ.

*********

'ಭಾರತದ ಎದುರಿನ ಟ್ವೆಂಟಿ–20 ಮತ್ತು ಟೆಸ್ಟ್‌ ಸರಣಿ ಸವಾಲಿನದು ಆಗಲಿದೆ. ಆದರೂ ಅತ್ಯುತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸಲಿದ್ದೇವೆ'

- ಗ್ಯಾರಿ ಸ್ಟಡ್ ನ್ಯೂಜಿಲೆಂಡ್ ಕೋಚ್‌

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT