ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಬಿಡುಗಡೆ ಸಮಾರಂಭದಿಂದ ಕೋವಿಡ್ ಹರಡಿಲ್ಲ: ರವಿಶಾಸ್ತ್ರಿ ಸ್ಪಷ್ಟನೆ

Last Updated 18 ಸೆಪ್ಟೆಂಬರ್ 2021, 15:51 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ತಮ್ಮ ಪುಸ್ತಕ ಬಿಡುಗಡೆ ಸಮಾರಂಭದ ಮೂಲಕ ಕೋವಿಡ್ ಪ್ರಸರಣವಾಗಿದೆ ಎಂಬ ಆರೋಪಗಳನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ತಳ್ಳಿಹಾಕಿದ್ದಾರೆ.

ಈಚೆಗೆ ಓವಲ್‌ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಶಾಸ್ತ್ರಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಅದಾಗಿ ಒಂದೆರಡು ದಿನಗಳಲ್ಲಿ ಶಾಸ್ತ್ರಿ, ಫೀಲ್ಡಿಂಗ್ಕೋಚ್ ಆರ್. ಶ್ರೀಧರ್, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫಿಸಿಯೊ ನಿತಿನ್ ಪಟೇಲ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದರ ನಂತರ ಮ್ಯಾಂಚೆಸ್ಟರ್‌ನಲ್ಲಿ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನಾದಿನ ಭಾರತ ತಂಡದ ಸಹಾಯಕ ಫಿಸಿಯೊ ಯೋಗೇಶ್ ಪರ್ಮಾರ್ ಅವರಿಗೂ ಸೋಂಕು ಖಚಿತವಾಗಿತ್ತು. ಅದರಿಂದಾಗಿ ಪಂದ್ಯವನ್ನೇ ನಡೆಸಲಿಲ್ಲ. ಆಗ ರವಿಶಾಸ್ತ್ರಿ ಪುಸ್ತಕ ಸಮಾರಂಭದ ಬಗ್ಗೆ ಕೆಲವರು ಟೀಕೆ ಮಾಡಿದ್ದರು.

‘ಕಾರ್ಯಕ್ರಮದಿಂದಾಗಿ ಕೋವಿಡ್ ಪ್ರಸರಣವಾಗಿದೆಯೆಂದು ನಾನು ಒಪ್ಪುವುದಿಲ್ಲ. ಸಮಾರಂಭವು ಬಹಳ ಚೆನ್ನಾಗಿತ್ತು. ಆಟಗಾರರು ತಮ್ಮ ಕೋಣೆಯೊಳಗೆ ಇದ್ದು ಬೇಸರಗೊಂಡಿದ್ದರು. ಅವರಿಗೂ ಬೇರೆಯವರನ್ನು ಭೇಟಿಯಾಗುವ ಅವಕಾಶ ಈ ಸಮಾರಂಭದಲ್ಲಿ ಲಭಿಸಿತ್ತು’ ಎಂದು ಶಾಸ್ತ್ರಿ ‘ದ ಗಾರ್ಡಿಯನ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಓವಲ್ ಟೆಸ್ಟ್ ನಡೆಯುವಾಗ ಇದ್ದ ಹೋಟೆಲ್‌ನಲ್ಲಿ ಮೆಟ್ಟಿಲುಗಳನ್ನು ಐದು ಸಾವಿರ ಜನ ಬಳಸುತ್ತಿದ್ದರು. ಅದೂ ಕಾರಣವಿರಬಹುದೇನೋ. ಅದು ಬಿಟ್ಟು ಪುಸ್ತಕ ಸಮಾರಂಭದತ್ತ ಬೆರಳು ತೋರಿಸುವುದು ಏಕೆ? ಕಾರ್ಯಕ್ರಮದಲ್ಲಿ 250 ಜನ ಇದ್ದರು. ಅದರಲ್ಲಿ ಒಬ್ಬರಿಗೂ ಸೋಂಕು ತಗುಲಿದ ವರದಿಯಾಗಿಲ್ಲ’ ಎಂದಿದ್ದಾರೆ.

‘ಹತ್ತು ದಿನಗಳ ಅವಧಿಯಲ್ಲಿ ನನಗೆ ಒಂದೇ ಒಂದು ಗಂಭೀರವಾದ ರೋಗ ಲಕ್ಷಣ ಕಂಡುಬಂದಿಲ್ಲ. ಗಂಟಲು ಕೆರೆತದಂತಹ ಸಾಧಾರಣ ಸಮಸ್ಯೆ ಮಾತ್ರ ಇತ್ತು. ಜ್ವರ ಇಲ್ಲ. ಆಮ್ಲಜನಕ ಮಟ್ಟವೂ 99ರಷ್ಟಿದೆ. ಹತ್ತು ದಿನಗಳ ಕಾಲ ಐಸೋಲೆಷನ್‌ನಲ್ಲಿ ಒಂದೇ ಒಂದು ಪ್ಯಾರಾಸಿಟಮೊಲ್ ಮಾತ್ರೆ ತೆಗೆದುಕೊಂಡಿಲ್ಲ. ಯಾವುದೇ ಔಷಧಿಯನ್ನೂ ಸೇವಿಸಿಲ್ಲ. ಒಂದು ಬಾರಿ ಎರಡು ಡೋಸ್ ಲಸಿಕೆ ಪಡೆದ ಮೇಲೆ ಇದು ಕೆವಲ ಫ್ಲೂ ಆಗಿರುತ್ತದೆ ಅಷ್ಟೇ’ ಎಂದು ರವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT