ಭಾನುವಾರ, ಮಾರ್ಚ್ 29, 2020
19 °C
ನ್ಯೂಜಿಲೆಂಡ್‌ಗೆ ಮೊದಲ ಇನಿಂಗ್ಸ್‌ ಮುನ್ನಡೆ; ಟೇಲರ್‌ ಉತ್ತಮ ಬ್ಯಾಟಿಂಗ್‌

ಮೊದಲ ಟೆಸ್ಟ್‌: ಇಶಾಂತ್ ಬಿರುಗಾಳಿ, ಕೇನ್ ತಂಗಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್: ಇಶಾಂತ್ ಶರ್ಮಾ ದಿಟ್ಟ ಬೌಲಿಂಗ್ ಮತ್ತು ಕೇನ್ ವಿಲಿಯಮ್ಸನ್ ಅವರ ಸುಂದರ ಬ್ಯಾಟಿಂಗ್ ಶನಿವಾರ ಕ್ರಿಕೆಟ್‌ಪ್ರೇಮಿಗಳ ಗಮನ ಸೆಳೆಯಿತು.

ಇಲ್ಲಿಯ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಸಣ್ಣ ಮುನ್ನಡೆ ಸಾಧಿಸಿತು. ಬೆಳಿಗ್ಗೆ ಆಟ ಮುಂದುವರಿಸಿದ ಭಾರತ ತಂಡವು 165 ರನ್‌ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು.

ಆತಿಥೇಯರಿಗೆ ಆರಂಭಿಕ ಆಘಾತ ನೀಡಿದ ಇಶಾಂತ್ ಶರ್ಮಾ (31ಕ್ಕೆ3) ಅವರ ಅಮೋಘ ಬೌಲಿಂಗ್‌ ಮತ್ತು ಉಳಿದ ಬೌಲರ್‌ಗಳ ಶ್ರಮದ ನಡುವೆಯೂ ಕೇನ್ ವಿಲಿಯಮ್ಸನ್ ಮಿಂಚಿದರು. ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಕೇನ್ (83; 153ಎಸೆತ, 11ಬೌಂಡರಿ) ಅರ್ಧಶತಕ ಗಳಿಸಿದರು. ಅದರಿಂದಾಗಿ ದಿನದಾಟದ ಕೊನೆಗೆ ಕಿವೀಸ್ ತಂಡವು 71.1 ಓವರ್‌ಗಳಲ್ಲಿ 5ಕ್ಕೆ 216 ರನ್ ಗಳಿಸಿತು. ಬಿಜೆ ವಾಟ್ಲಿಂಗ್ (ಬ್ಯಾಟಿಂಗ್ 14) ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದಾರೆ.

ಜೊತೆಯಾಟ ಮುರಿದ ಇಶಾಂತ್: ಕಿವೀಸ್ ಇನಿಂಗ್ಸ್‌ಗೆ ಗಟ್ಟಿ ಆರಂಭ ನೀಡುವ ಯತ್ನದಲ್ಲಿದ್ದ ಟಾಮ್ ಲಥಾಮ್ ಮತ್ತು ಟಾಮ್ ಬ್ಲಂಡೆಲ್ ಇಬ್ಬರಿಗೂ ಕ್ರಮವಾಗಿ 11 ಮತ್ತು 27ನೇ ಓವರ್‌ನಲ್ಲಿ ಪೆವಿಲಿಯನ್ ದಾರಿ ತೋರಿಸಿದ ಇಶಾಂತ್ ಕೇಕೆ ಹಾಕಿದರು. ಇದರಿಂದಾಗಿ ತಂಡವು ಕುಸಿಯುವ ಭೀತಿ ಎದುರಿಸಿತ್ತು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೇನ್  ಮತ್ತು ನೂರನೇ ಟೆಸ್ಟ್ ಆಡುತ್ತಿರುವ ರಾಸ್ ಟೇಲರ್ (44; 71ಎ, 6ಬೌಂ) ಮೂರನೇ ವಿಕೆಟ್ ಜೊತೆಯಾಟದಲ್ಲಿ 93 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಲು ಸಾಧ್ಯವಾಯಿತು. ಈ ಜೊತೆಯಾಟವನ್ನೂ ‘ದೆಹಲಿ ಎಕ್ಸ್‌ಪ್ರೆಸ್‌’ ಇಶಾಂತ್ ಮುರಿದರು. ಊಟದ ವಿರಾಮದ ನಂತರದ ಸ್ಪೆಲ್‌ನಲ್ಲಿ ಇಶಾಂತ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ರಾಸ್ ಟೇಲರ್ ವಿಫಲರಾದರು. ಅವರ ಕೈಗವಸನ್ನು ಸವರಿದ ಚೆಂಡು ಶಾರ್ಟ್‌ಲೆಗ್‌ನಲ್ಲಿದ್ದ ಪೂಜಾರ ಬೊಗಸೆ ಸೇರಿತು. 

ಆಗಲೂ ಕೇನ್ ಆಟ ಮುಂದುವರಿಯಿತು. ಶತಕದತ್ತ ಹೆಜ್ಜೆಯಿಟ್ಟಿದ್ದ ಅವರಿಗೆ ಮೊಹಮ್ಮದ್ ಶಮಿ ತಡೆಯೊಡ್ಡಿದ್ದರು. ವೈಡ್ ಲೆಂಗ್ತ್ ಎಸೆತವನ್ನು ಕೇನ್ ಹೊಡೆದರು. ಕವರ್ಸ್‌ನಲ್ಲಿದ್ದ ಬದಲೀ ಫೀಲ್ಡರ್‌ ರವೀಂದ್ರ ಜಡೇಜ ಡೈವ್ ಮಾಡಿ ಕ್ಯಾಚ್ ಪಡೆದರು. ಹೆನ್ರಿ ನಿಕೊಲ್ಸ್‌ (17 ರನ್) ಅಶ್ವಿನ್ ಓವರ್‌ನಲ್ಲಿ ವಿರಾಟ್ ಕೊಹ್ಲಿ ಪಡೆದ ಅಮೋಘ ಕ್ಯಾಚ್‌ಗೆ ಶರಣಾದರು.

ಕುಸಿದ ಕೆಳಕ್ರಮಾಂಕ: ಶುಕ್ರವಾರ ಮಳೆಯಿಂದಾಗಿ ಮಧ್ಯಾಹ್ನವೇ ಸ್ಥಗಿತವಾಗಿದ್ದ ಇನಿಂಗ್ಸ್‌ನಲ್ಲಿ ಭಾರತ ತಂಡವು 55 ಓವರ್‌ಗಳಲ್ಲಿ 5ಕ್ಕೆ122 ರನ್ ಗಳಿಸಿತ್ತು. ಎರಡನೇ ದಿನ ಬೆಳಿಗ್ಗೆ ಬ್ಯಾಟಿಂಗ್ ಆರಂಭಿಸಿದ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸಿಕ್ಸರ್‌ನೊಂದಿಗೆ ದಿನದಾಟ ಆರಂಭಿಸಿದ ರಿಷಭ್, 59ನೇ ಓವರ್‌ನಲ್ಲಿ ರನ್‌ಔಟ್ ಆದರು.

ಅಶ್ವಿನ್‌ಗೆ  ಖಾತೆ ತೆರೆಯಲು ಬಿಡದ ಟಿಮ್ ಸೌಥಿ,  ಅಜಿಂಕ್ಯ ಅವರಿಗೆ (46 ರನ್)ಅರ್ಧಶತಕ ಪೂರೈಸಲೂ ಕೊಡಲಿಲ್ಲ. ಕೊನೆಯದಾಗಿ ಶಮಿ ವಿಕೆಟ್ ಕೂಡ ಅವರ ಪಾಲಾಯಿತು. ಮೊದಲ ದಿನ ಮೂರು ವಿಕೆಟ್ ಕಿತ್ತಿದ್ದ ಕೈಲ್ ಜೆಮಿಸನ್, ಎರಡನೇ ದಿನ ಇಶಾಂತ್ ವಿಕೆಟ್‌ ಕೂಡ ಕಬಳಿಸಿದರು.

 *
ರಿಷಭ್ ಪಂತ್ ವಿಕೆಟ್‌ ಉರುಳಿದ್ದು ಇನಿಂಗ್ಸ್‌ನ ಪ್ರಮುಖ ತಿರುವು. ಅವರು ಔಟಾಗದೇ ಹೋಗಿದ್ದರೆ ಅಜಿಂಕ್ಯ ಜೊತೆಗೆ ಇನಿಂಗ್ಸ್‌ ಬೆಳೆಸುವ ಸಾಧ್ಯತೆಯಿತ್ತು.
-ಟಿಮ್ ಸೌಥಿ, ನ್ಯೂಜಿಲೆಂಡ್ ಬೌಲರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು