ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ | ಕಿವೀಸ್ ನೆಲದಲ್ಲಿ ಭಾರತದ ವೇಗಿಗಳು ಪರದಾಡುತ್ತಿರುವುದೇಕೆ?

Last Updated 25 ಫೆಬ್ರುವರಿ 2020, 6:36 IST
ಅಕ್ಷರ ಗಾತ್ರ

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಲು ವಿಫಲವಾದ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ನಾಲ್ಕನೇ ದಿನವೇ ಕೈ ಚೆಲ್ಲಿತ್ತು. ಕಳೆದ ಎರಡು ವರ್ಷಗಳಲ್ಲಿ ಭಾರತ ವಿದೇಶದಯಾವುದೇ ಪಿಚ್‌ನಲ್ಲಿ ಆಡಿದರೂ ಪೈಪೋಟಿ ಇದ್ದೇ ಇರುತ್ತಿತ್ತು.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದು ದಾಖಲೆ ಬರೆಯುವ ಮೊದಲು ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿಗಳಲ್ಲಿ ಸೋಲುಕಂಡಿದ್ದ ಭಾರತ, ನಂತರ ಆಡಿದ ಪ್ರತಿಸರಣಿಯಲ್ಲೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿತ್ತು

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ತಂಡದ ವೇಗದ ಬೌಲಿಂಗ್ ವಿಭಾಗ ವಿಶ್ವ ದರ್ಜೆಗೇರಿತ್ತು. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್‌ ಸರಣಿ ಗೆದ್ದ ಬಳಿಕ ಬೌಲರ್‌ಗಳನ್ನು ಹಾಡಿ ಹೊಗಳಿದ್ದ ಕೊಹ್ಲಿ, ನಮ್ಮ ತಂಡದ ವೇಗದ ಬೌಲಿಂಗ್‌ ವಿಭಾಗವು ಯಾವುದೇ ನಾಯಕನ ಕನಸಿನ ಸಂಯೋಜನೆ ಎಂದಿದ್ದರು. ಆದರೆ, ಸದ್ಯ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಇಶಾಂತ್‌ ಶರ್ಮಾ ಅವರನ್ನೊರತುಪಡಿಸಿ ಉಳಿದವರಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.ನ್ಯೂಜಿಲೆಂಡ್‌ ವೇಗಿಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದಷ್ಟು ಸಮರ್ಥವಾಗಿ ಬೌಲಿಂಗ್‌ ಮಾಡಲು ಕೊಹ್ಲಿ ಪಡೆ ವೇಗಿಗಳಿಗೆ ಸಾಧ್ಯವಾಗಿಲ್ಲ.

ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಭಾರತದ ಎಲ್ಲವಿಕೆಟ್‌ಗಳನ್ನು ಆತಿಥೇಯ ವೇಗಿಗಳೇ ಕಬಳಿಸಿದ್ದರು. ಆದರೆ, ಭಾರತದ ವೇಗಿಗಳಿಗೆ ದಕ್ಕಿದ್ದು ಕೇವಲ 7 ವಿಕೆಟ್‌ ಮಾತ್ರ. ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ (89) ಮಾತ್ರವಲ್ಲದೆ, ಕೆಳ ಕ್ರಮಾಂಕದ ಕಾಲಿನ್‌ ಡಿ ಗ್ರಾಂಡ್‌ಹೋಮ್‌ (43), ಟ್ರೆಂಟ್‌ ಬೌಲ್ಟ್‌(38)ಹಾಗೂ ಕೈಲ್‌ ಜೆಮೀಸನ್‌(44) ಅವರೂ ಭಾರತದ ಬೌಲರ್‌ಗಳೆದುರು ಸಮರ್ಥವಾಗಿ ಬ್ಯಾಟ್‌ ಬೀಸಿದ್ದರು.

ನ್ಯೂಜಿಲೆಂಡ್‌ನ ಮಾಜಿ ಆಲ್ರೌಂಡರ್‌ ಸ್ಕಾಟ್‌ ಸ್ಟೈರಿಸ್‌, ಕಿವೀಸ್‌ ನಾಡಲ್ಲಿಭಾರತದ ಬೌಲರ್‌ಗಳು ವಿಫಲವಾಗುತ್ತಿರುವುದೇಕೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ‘ಭಾರತದ ಬೌಲರ್‌ಗಳ ಬೌಲಿಂಗ್‌ ಶೈಲಿ ಮತ್ತು ನ್ಯೂಜಿಲೆಂಡ್‌ ವೇಗಿಗಳ ಬೌಲಿಂಗ್‌ ಶೈಲಿಯಲ್ಲಿ ಸಾಕಷ್ಟು ವ್ಯತ್ಯವಾಸವಿದೆ. ಕಿವೀಸ್‌ ವೇಗಿಗಳುಚೆಂಡನ್ನು ಹೆಚ್ಚಾಗಿ ಸ್ವಿಂಗ್‌ ಮಾಡುತ್ತಾರೆ. ಅದನ್ನು ನೀವು ಎರಡನೇ ಇನಿಂಗ್ಸ್‌ನಲ್ಲೂ ಗಮನಿಸಿದ್ದೀರಿ’

‘ಭಾರತದ ವೇಗಿಗಳು ವೇಗಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹೆಚ್ಚು ಪ್ರಯೋಗಗಳನ್ನು ಯಾರೊಬ್ಬರೂ ಮಾಡಲಿಲ್ಲ. ಆ ಕಾರಣದಿಂದಾಗಿಯೇ ಕೇನ್‌ ವಿಲಿಯಮ್ಸನ್‌ ಉತ್ತಮ ಎಸೆತಗಳನ್ನೂ ಚೆನ್ನಾಗಿ ದಂಡಿಸಿದರು. ಕೊನೆವರೆಗೂ ಭಾರತದ ಬೌಲರ್‌ಗಳಿಂದ ಅವರಿಗೆ ಸವಾಲೇ ಆಗಲಿಲ್ಲ. ಆದಾಗ್ಯೂ ವಿರಾಟ್‌ ಕೊಹ್ಲಿ ತಮ್ಮ ಬೌಲರ್‌ಗಳ ಪ್ರದರ್ಶನ ಸಂತಸ ನೀಡಿದೆ ಎಂದು ಹೇಳಿಕೊಂಡಿದ್ದರು’ ಎಂದೂ ತಿಳಿಸಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯವು ಇದೇ 29ರಿಂದ ಮಾರ್ಚ್‌ 4ರ ವರೆಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT