ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ಪಿಚ್‌ ಬಗ್ಗೆ ಮೊದಲೇ ಎಚ್ಚರಿಸಿದ್ದ ಕೊಹ್ಲಿ: ಒಲಿ ಪೊಪ್ ಬಿಚ್ಚಿಟ್ಟ ಗುಟ್ಟು

ಇಂಗ್ಲೆಂಡ್ ತಂಡದ ಆಟಗಾರ ಒಲಿ ಪೊಪ್ ಬಿಚ್ಚಿಟ್ಟ ಗುಟ್ಟು
Last Updated 2 ಏಪ್ರಿಲ್ 2021, 12:53 IST
ಅಕ್ಷರ ಗಾತ್ರ

ಲಂಡನ್: ‘ಈ ಸರಣಿಯಲ್ಲಿ ನೀವು ಸಪಾಟಾದ ಪಿಚ್‌ನಲ್ಲಿ ಆಡುವುದು ಇದೊಂದೇ ಪಂದ್ಯ‘ –

ಈಚೆಗೆ ಅಹಮದಾಬಾದಿನ ಮೊಟೇರಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬ್ಯಾಟ್ಸ್‌ಮನ್‌ ಒಲಿ ಪೊಪ್ ಅವರಿಗೆ ಹೇಳಿದ್ದ ಮಾತಿದು.

‘ಆ ಮಾತು ನನಗೆ ಇನ್ನೂ ನೆನಪಿದೆ. ನಾನು ನಾನ್‌ಸ್ಟ್ರೈಕರ್‌ ತುದಿಯಲ್ಲಿದ್ದೆ. ಕೊಹ್ಲಿ ನನ್ನ ಬಳಿ ಬಂದು ಫ್ಲ್ಯಾಟ್ ವಿಕೆಟ್‌ ಇದೇ ಕೊನೆಯದು ಎಂದಿದ್ದರು. ಆ ಮಾತಿನ ಬಗ್ಗೆ ಯೋಚಿಸಿದೆ. ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ಗೆ ಕಠಿಣ ಸವಾಲೊಡ್ಡಲಿವೆಂಬುದು ಹೊಳೆಯಿತು‘ ಎಂದು ಪೊಪ್ ಹೇಳಿದ್ದಾರೆ.

‘ಆ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಚೆಂಡು ಸ್ಪಿನ್ ಆಗುತ್ತಿತ್ತು. ಅದನ್ನು ಗಮನಿಸಿದ್ದ ವಿರಾಟ್ ಆ ರೀತಿ ಹೇಳಿದ್ದರು‘ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಪೊಪ್ ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡಿತ್ತು. ನಾಯಕ ಜೋರೂಟ್ ಅವರ ದ್ವಿಶತಕದ ಬಲದಿಂದ 578 ರನ್‌ಗಳನ್ನು ಪೇರಿಸಿತ್ತು. ಪೊಪ್ 89 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ 227 ರನ್‌ಗಳಿಂದ ಗೆದ್ದಿತ್ತು.

‘ನಮ್ಮ ತಂಡದ ಅನುಭವಿಗಳಾದ ರೂಟ್ ಮತ್ತು ಬೆನ್ ಸ್ಟೋಕ್ಸ್‌ ಕೂಡ ವಿರಾಟ್ ಹೇಳಿದ್ದ ಮಾತನ್ನೇ ಪುನರುಚ್ಚಿಸಿದ್ದರು. ಮುಂದಿನ ಹಂತವು ಕ್ಲಿಷ್ಟವಾಗಲಿದೆ ಎಂಬುದು ಅರ್ಥವಾಗಿತ್ತು. ಉಳಿದ ಪಂದ್ಯಗಳಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದು ದೊಡ್ಡ ಸವಾಲಾಯಿತು‘ ಎಂದು ನೆನಪಿಸಿಕೊಂಡರು.

‘ಅವರು (ಭಾರತ) ಅಂತಹ ಪಿಚ್‌ಗಳನ್ನು ಬೇಕೆಂತಲೇ ಸಿದ್ಧಪಡಿಸುತ್ತಾರೆಂದು ನಾನು ಹೇಳುತ್ತಿಲ್ಲ. ಮೊದಲ ಪಂದ್ಯದಲ್ಲಿ ಮೂರು ದಿನದಾಟದಲ್ಲಿ ಪಿಚ್ ಸಮತೋಲನವಾಗಿತ್ತು. ನಾಲ್ಕು ಮತ್ತು ಐದನೇ ದಿನ ಚೆಂಡು ಬಹಳಷ್ಟು ತಿರುವು ಪಡೆಯುತ್ತಿತ್ತು. ಆದರೆ ಆ ಸವಾಲನ್ನು ನಮ್ಮ ತಂಡವು ಎದುರಿಸಿದ ರೀತಿಯು ಅನನ್ಯವಾದದ್ದು‘ ಎಂದರು.

‘ಭಾರತದಲ್ಲಿ ಬಯೋಬಬಲ್ ನಿಯಮಾವಳಿ ಬಹಳ ಕಠಿಣವಾಗಿದೆ. ಹೋಟೆಲ್ ಮತ್ತಿತರೆಡೆ ಮುಕ್ತವಾಗಿ ಸಂಚರಿಸುವುದು ಸಾಧ್ಯವಿರಲಿಲ್ಲ. ಆದರೆ ಇದು ಅನಿವಾರ್ಯವೂ ಆಗಿತ್ತು. ಆದರೆ ಭಾರತ ಪ್ರವಾಸದಲ್ಲಿ ಬಹಳಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT