ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆಲುವಿಗೆ 14 ವರ್ಷಗಳ ಸಂಭ್ರಮ

Last Updated 24 ಸೆಪ್ಟೆಂಬರ್ 2021, 9:58 IST
ಅಕ್ಷರ ಗಾತ್ರ

ಬೆಂಗಳೂರು: 2007ನೇ ಇಸವಿಯ ಅಂದಿನ ಈ ದಿನದಂದು (ಸೆ.24) ಭಾರತ ಕ್ರಿಕೆಟ್ ತಂಡವು ಐಸಿಸಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

ಭಾರತದ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೀಗ 14 ವರ್ಷಗಳ ಸಂಭ್ರಮ. ಅಂದು ಯುವ ತಂಡವನ್ನು ಮುನ್ನಡೆಸಿದ ಯುವ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಐದು ರನ್‌ ಅಂತರದ ರೋಚಕ ಗೆಲುವು ದಾಖಲಿಸಿತ್ತು.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಗೌತಮ್ ಗಂಭೀರ್ (75) ಹಾಗೂ ರೋಹಿತ್ ಶರ್ಮಾ (30*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 157 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪಾಕ್ ಪರ ಉಮರ್ ಗುಲ್ 28 ರನ್ ತೆತ್ತು ಮೂರು ವಿಕೆಟ್ ಗಳಿಸಿದ್ದರು.

ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ 104 ರನ್ನಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ನಾಯಕ ಮಿಸ್ಬಾ ಉಲ್ ಹಕ್ ದಿಟ್ಟ ಹೋರಾಟ ನೀಡುವ ಮೂಲಕ ಪಂದ್ಯವು ರೋಚಕ ಹಂತವನ್ನು ತಲುಪಿತ್ತು. ಆದರೆ ಆಂತಿಮ ಓವರ್‌ನಲ್ಲಿ ಮಿಸ್ಬಾ (43 ರನ್) ವಿಕೆಟ್ ಪಡೆದ ಜೋಂಗಿದರ್ ಶರ್ಮಾ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಕಡೆಗಣಿಸಿ ಅರೆಕಾಲಿಕ ಬೌಲರ್ ಜೋಂಗಿದರ್ ಶರ್ಮಾ ಅವರಿಗೆ ಕೊನೆಯ ಓವರ್ ‌ನೀಡಿದ ನಾಯಕ ಧೋನಿ ನಿರ್ಧಾರವು ಭಾರತದ ಅದೃಷ್ಟವನ್ನೇ ಬದಲಿಸಿತ್ತು. ಮಿಸ್ಬಾ ಹೊಡೆದ ಚೆಂಡು ಶ್ರೀಶಾಂತ್ ಕೈಯಲ್ಲಿ ಭದ್ರವಾಗಿ ಸೇರುವುದರೊಂದಿಗೆ ಭಾರತವು ಇತಿಹಾಸ ರಚಿಸಿತ್ತು.

ನಾಲ್ಕು ವರ್ಷಗಳ ಬಳಿಕ 2011ರಲ್ಲಿ ಧೋನಿ ನಾಯಕತ್ವದಲ್ಲೇ ಭಾರತ ಏಕದಿನ ವಿಶ್ವಕಪ್ ಕಿರೀಟವನ್ನು ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT