ಮಂಗಳವಾರ, ಮೇ 26, 2020
27 °C

ಭಾರತಕ್ಕೆ 2ನೇ ಸಲ ವಿಶ್ವಕಪ್ ಗೆದ್ದುಕೊಟ್ಟಿದ್ಯಾರು? ಇದು ಬಿಸಿಸಿಐಗೆ ಗೊತ್ತಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ 2ನೇ ಸಲ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದಾಗ, ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಎಂಬುದು ಬಿಸಿಸಿಐಗೆ ಗೊತ್ತಿಲ್ಲವೇ? ಬಿಸಿಸಿಐ ಮಾಡಿರುವ ಟ್ವೀಟ್‌ ನೋಡಿದರೆ ಇಂತಹದೊಂದು ಪ್ರಶ್ನೆ ಮೂಡದೇ ಇರದು.

ಬರೋಬ್ಬರಿ 9 ವರ್ಷಗಳ ಹಿಂದೆ ಇದೇ ದಿನ ಭಾರತ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ವಿಶ್ವಕಪ್‌ ಗೆದ್ದು ಸಂಭ್ರಮಿಸಿತ್ತು. 2011ರ ಏಪ್ರಿಲ್‌ 2ರಂದು ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿದ ಭಾರತ ಚಾಂಪಿಯನ್‌ ಎನಿಸಿತ್ತು.

ಆ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ ಟ್ವೀಟ್‌ ಮಾಡಿರುವ ಬಿಸಿಸಿಐ ಎಡವಟ್ಟು ಮಾಡಿದೆ.

‘2011ರ ಈ ದಿನ
122 ಎಸೆತಗಳಲ್ಲಿ 97 ರನ್‌ ಗಳಿಸಿ ಅಮೋಘ ಆಟವಾಡುವ ಮೂಲಕ ಗೌತಮ್‌ ಗಂಭೀರ್‌ ಪಂದ್ಯ ಶ್ರೇಷ್ಠ ಎನಿಸಿದ್ದರು. ಅದರ ನೆರವಿನಿಂದ ಭಾರತ 28 ವರ್ಷಗಳ ಬಳಿಕ ವಿಶ್ವಕಪ್‌ ಗೆಲ್ಲಲು ಸಾಧ್ಯವಾಯಿತು’ ಎಂದು ಬರೆದುಕೊಂಡಿದೆ.

ಫೈನಲ್‌ನಲ್ಲಿ ಗಂಭೀರ್‌ ಅದ್ಭುತ ಆಟವಾಡಿದ್ದರಾದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಆಗಿನ ನಾಯಕ ಎಂ.ಎಸ್‌.ಧೋನಿಗೆ ಲಭಿಸಿತ್ತು. ಹೀಗಾಗಿ ನೆಟ್ಟಿಗರು ಬಿಸಿಸಿಐ ಅನ್ನು ಟ್ರೋಲ್‌ ಮಾಡಿದ್ದಾರೆ. ಪಂದ್ಯ ಶ್ರೇಷ್ಠ ಗಂಭೀರ್ ಅಲ್ಲ ಧೋನಿ ಎಂದು ಕಾಮೆಂಟ್‌ ಮಾಡಿದ್ದಾರೆ.

ಅಂದಹಾಗೆ ಕಪಿಲ್‌ ದೇವ್‌ ನೇತೃತ್ವದ ತಂಡ 1983ರಲ್ಲಿ ಮೊದಲ ಸಲ ವಿಶ್ವಕಪ್‌ ಗೆದ್ದಿತ್ತು. ಅದಾದ ನಂತರ 28 ವರ್ಷಗಳು ಉರುಳಿದರೂ ಮತ್ತೊಮ್ಮೆ ಚಾಂಪಿಯನ್‌ ಎನಿಸಲು ಟೀಂ ಇಂಡಿಯಾಗೆ ಸಾಧ್ಯವಾಗಿರಲಿಲ್ಲ.

 

ಹೀಗಿತ್ತು ಫೈನಲ್‌ ಪಂದ್ಯ
ಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ 275 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಕಾದಿತ್ತು. ಖಾತೆ ತೆರೆಯುವ ಮೊದಲೇ ಆರಂಭಿಕ ವೀರೇಂದ್ರ ಸೆಹ್ವಾಗ್‌ ಪೆವಿಲಿಯನ್‌ ಸೇರಿಕೊಂಡಿದ್ದರು. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌(18) ಅವರೂ ಹೆಚ್ಚು ಹೊತ್ತು ನಿಂತಿರಲಿಲ್ಲ.

ತಂಡದ ಮೊತ್ತ 31 ಆಗುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಆಗ ಆಸರೆಯಾಗಿದ್ದು ಗೌತಮ್‌ ಗಂಭೀರ್‌. ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದ್ದ ಅವರು ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಈಗಿನ ನಾಯಕ ವಿರಾಟ್‌ ಕೊಹ್ಲಿ(35) ಜೊತೆ ಸೇರಿ ಮೂರನೇ ವಿಕೆಟ್‌ಗೆ 83 ರನ್‌ ಹಾಗೂ ಧೋನಿ ಜೊತೆ 4ನೇ ವಿಕೆಟ್‌ಗೆ 109ರನ್‌ ಕೂಡಿಸಿದ್ದರು.

122 ಎಸೆತಗಳಲ್ಲಿ 9 ಬೌಂಡರಿ ಸಹಿತ 97 ರನ್‌ ಗಳಿಸಿ ತಿಸಾರ ಪೆರೆರಾ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರಾದರೂ, ಅಷ್ಟರಲ್ಲಿ ತಂಡ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದ ಧೋನಿ (92), ಯುವರಾಜ್‌ ಸಿಂಗ್‌(21) ಜೊತೆ ಸೇರಿ 48.2 ಎರಡನೇ ಓವರ್‌ನಲ್ಲಿ ಜಯದ ಲೆಕ್ಕ ಚುಕ್ತಾ ಮಾಡಿದ್ದರು.

ಭಾರತವು ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಸಲ ವಿಶ್ವಕಪ್‌ ಎತ್ತಿ ಹಿಡಿದು ವಿಶ್ವ ವಿಜೇತ ಎನಿಸಿಕೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು