ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಚಾಂಪಿಯನ್ಸ್ ಕಪ್ ದೇಶಿ ಟೂರ್ನಿಯಲ್ಲಿ ಆಡಲಿರುವ ಐದು ತಂಡಗಳಿಗೆ ಮಾಜಿ ಘಟಾನುಘಟಿ ಆಟಗಾರರನ್ನು ಮೆಂಟರ್‌ಗಳಾಗಿ ಹೆಸರಿಸಿದೆ. ಮಿಸ್ಬಾ–ಉಲ್–ಹಕ್, ಸಕ್ಲೇನ್ ಮುಷ್ತಾಕ್, ಸರ್ಫರಾಜ್ ಅಹ್ಮದ್, ಶೋಯೆಬ್ ಮಲಿಕ್ ಮತ್ತು ವಕಾರ್ ಯೂನಿಸ್ ಈ ಐವರು.
ಪಾರದರ್ಶನ ಮತ್ತು ವ್ಯವಸ್ಥಿತ ನೇಮಕಾತಿ ಪ್ರಕ್ರಿಯೆ ಮೂಲಕ ಅವರನ್ನು ನೇಮಕ ಮಾಡಲಾಗಿದ್ದು, ಮೂರು ವರ್ಷಗಳ ಒಪ್ಪಂದ ಮಾಡಲಾಗಿದೆ ಎಂದು ಪಿಸಿಬಿ ಹೇಳಿಕೆ ತಿಳಿಸಿದೆ.
ವಕಾರ್ ಇತ್ತೀಚೆಗಷ್ಟೇ ಪಿಸಿಬಿಗೆ ಕ್ರಿಕೆಟ್ ವ್ಯವಹಾರಗಳ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಆಫ್ ಸ್ಪಿನ್ನರ್ ಆಗಿ ಆಡಿದ್ದ ಸಕ್ಲೇನ್ ಮುಷ್ತಾಕ್ ಮಾಜಿ ಹೆಡ್ ಕೋಚ್. ಮಿಸ್ಬಾ ಉಲ್ ಹಕ್ ಅವರೂ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿದ್ದವರು.
ಚಾಂಪಿಯನ್ಸ್ ಏಕದಿನ ಕಪ್ ಮೆಂಟರ್‌ಗಳ ಪಾಲಿಗೆ ಮೊದಲ ಟೂರ್ನಿಯಾಗಲಿದೆ. ಈ ಟೂರ್ನಿ ಫೈಸ್ಲಾಬಾದಿನಲ್ಲಿ ಸೆ. 12 ರಿಂದ 29ರವರೆಗೆ ನಡೆಯಲಿದೆ.