ಮಂಗಳವಾರ, ಜನವರಿ 28, 2020
19 °C
ಶಾನ್ ಮಸೂದ್ ದ್ವಿಶತಕದ ಜೊತೆಯಾಟ; ಪಾಕ್‌ಗೆ ಭಾರಿ ಮುನ್ನಡೆ

ಶ್ರೀಲಂಕಾ ಎದುರಿನ ಟೆಸ್ಟ್: ಅಬಿದ್ ಅಲಿ ಸತತ ಶತಕ ಸಾಧನೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕರಾಚಿ: ಅಮೋಘ ಶತಕ ಸಿಡಿಸಿದ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ ಅಬಿದ್ ಅಲಿ ಮೊದಲ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಮೂರಂಕಿ ದಾಟಿದ ಆಟಗಾರ ಎಂಬ ಅಪರೂಪದ ಸಾಧನೆ ಮಾಡಿದರು.

ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಅಬಿದ್ ಅಲಿ (174; 281 ಎಸೆತ, 1 ಸಿಕ್ಸರ್‌, 21 ಬೌಂಡರಿ) ಮತ್ತು ಅವರ ಆರಂಭಿಕ ಜೋಡಿ ಶಾನ್ ಮಸೂದ್ (135; 198 ಎಸೆತ, 3 ಸಿಕ್ಸರ್‌, 7 ಬೌಂಡರಿ) ಶತಕ ಗಳಿಸಿ ಮಿಂಚಿದರು. ಇವರಿಬ್ಬರ ಬ್ಯಾಟಿಂಗ್ ವೈಭವದ ಫಲವಾಗಿ ಪಾಕಿಸ್ತಾನ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗಳಿಗೆ 395 ರನ್‌ ಗಳಿಸಿದ್ದು 315 ರನ್‌ಗಳ ಮುನ್ನಡೆ ಗಳಿಸಿದೆ.

ರಾವಲ್ಪಿಂಡಿಯಲ್ಲಿ ನಡೆದಿದ್ದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಬಿದ್ ಅಲಿ 109 ರನ್ ಗಳಿಸಿದ್ದರು. ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯ ಒಂದೇ ಇನಿಂಗ್ಸ್‌ನಲ್ಲಿ ಮುಕ್ತಾಯ ಕಂಡಿತ್ತು.

ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳಿಗೆ ಔಟಾಗಿದ್ದರು. ಎರಡನೇ ಇನಿಂಗ್ಸ್‌ನ ಆರಂಭದಿಂದಲೇ ಮೋಹಕ ಬ್ಯಾಟಿಂಗ್ ಮಾಡಿದ 32 ವರ್ಷದ ಅಲಿ, ಆಫ್ ಸ್ಪಿನ್ನರ್‌ ಲಸಿತ್ ಎಂಬುಲ್ಡೇನಿಯಾ ಅವರ ಎಸೆತವನ್ನು ಸ್ವೀಪ್ ಮಾಡಿ ಎರಡು ರನ್ ಗಳಿಸುವ ಮೂಲಕ ಶತಕ ಪೂರೈಸಿದರು.

ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ ಮೊದಲ ಮತ್ತು ವಿಶ್ವದ ಒಂಬತ್ತನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಭಾರತದ ಮೊಹಮ್ಮದ್ ಅಜರುದ್ದೀನ್ ಮೊದಲ ಮೂರು ಪಂದ್ಯಗಳಲ್ಲೂ ಮೂರಂಕಿ ಮೊತ್ತ ದಾಟಿದ್ದರು. 1984ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಅವರು ಪದಾರ್ಪಣೆ ಮಾಡಿದ್ದರು.

ಅಲಿ, ಈ ವರ್ಷಾರಂಭದಲ್ಲಿ ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ 112 ರನ್ ಗಳಿಸಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನ ಮೊದಲ ಪಂದ್ಯಗಳಲ್ಲಿ ಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ ಅವರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌–ಪಾಕಿಸ್ತಾನ: 191, ಶ್ರೀಲಂಕಾ: 271; ಎರಡನೇ ಇನಿಂಗ್ಸ್‌: ಪಾಕಿಸ್ತಾನ (14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57): 2 ವಿಕೆಟ್‌ಗಳಿಗೆ 395 (ಶಾನ್ ಮಸೂದ್ 135, ಅಬಿದ್ ಅಲಿ 174, ಅಜರ್ ಅಲಿ ಬ್ಯಾಟಿಂಗ್ 57, ಬಾಬರ್ ಆಜಂ ಬ್ಯಾಟಿಂಗ್ 22; ಲಾಹಿರು ಕುಮಾರ 88ಕ್ಕೆ2).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು