ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಭ್ ನಾಯಕತ್ವಕ್ಕೆ ‘ಕೂಲ್‌ ಕ್ಯಾಪ್ಟನ್ ‌‘ ಮೊದಲ ಸವಾಲು

Last Updated 6 ಏಪ್ರಿಲ್ 2021, 15:31 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರಿಷಭ್ ಪಂತ್ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಡಲಿರುವ ಮೊದಲ ಪಂದ್ಯದಲ್ಲಿ ತಮ್ಮ ರೋಲ್ ಮಾಡೆಲ್ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದಾರೆ.

ಇದೇ ಶನಿವಾರ ಪಂದ್ಯವು ನಡೆಯಲಿದೆ. 23 ವರ್ಷದ ವಿಕೆಟ್‌ಕೀಪರ್ ರಿಷಭ್ ಭಾರತ ತಂಡದಲ್ಲಿ ಧೋನಿಯ ಸ್ಥಾನ ತುಂಬುವ ಭರವಸೆ ಮೂಡಿಸಿದವರು.

‘ನಾಯಕನಾದ ನಂತರ ನನ್ನ ಮೊದಲ ಪಂದ್ಯವು ಮಹಿ ಭಾಯ್ ಎದುರು ನಡೆಯಲಿದೆ. ಅದೊಂದು ಉತ್ತಮ ಅನುಭವ ನೀಡುವುದು ಖಚಿತ. ಮಹಿಯಿಂದ ನಾನು ಇದುವರೆಗೂ ಬಹಳಷ್ಟು ಕಲಿತಿದ್ದೇನೆ. ಇದೀಗ ಆಟಗಾರನಾಗಿ ಅನುಭವವೂ ಇದೆ‘ ಎಂದು ರಿಷಭ್ ಹೇಳಿದ್ದಾರೆ.

ಮಹಿಯಿಂದ ಕಲಿತದ್ದು ಮತ್ತು ಇದುವರೆಗಿನ ನನ್ನ ಅನುಭವಗಳನ್ನು ಮೇಳೈಸಿದ ತಂತ್ರಗಳನ್ನು ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಬಳಸುತ್ತೇನೆ‘ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಈಚೆಗೆ ಆಸ್ಟ್ರೇಲಿಯಾ ಪ್ರವಾಸ ಮತ್ತು ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರಿಷಭ್ ಅಮೋಘವಾದ ಬ್ಯಾಟಿಂಗ್ ಮಾಡಿದ್ದರು. ವಿಕೆಟ್‌ಕೀಪಿಂಗ್‌ನಲ್ಲಿಯೂ ಮಿಂಚಿದ್ದರು.

ಶ್ರೇಯಸ್ ಅಯ್ಯರ್ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದ ಕಾರಣ ಡೆಲ್ಲಿ ತಂಡದ ನಾಯಕತ್ವದ ಹೊಣೆಯನ್ನು ರಿಷಭ್‌ಗೆ ವಹಿಸಲಾಗಿದೆ. ಐಪಿಎಲ್‌ನಲ್ಲಿ ರಿಷಭ್ 68 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 2079 ರನ್‌ಗಳು ಅವರ ಖಾತೆಯಲ್ಲಿವೆ.

‘ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಶ್ರಮಪಡುತ್ತಿದ್ದೇನೆ. ಇಲ್ಲಿಯವರೆಗೂ ನಮ್ಮ ತಂಡವು ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ತಂಡವು ಉತ್ತಮವಾಗಿ ಆಡಿದೆ. ತಂಡದಲ್ಲಿ ಎಲ್ಲರೂ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ. ಪೂರ್ವಸಿದ್ಧತೆಯೂ ಚೆನ್ನಾಗಿ ನಡೆಯುತ್ತಿದೆ‘ ಎಂದು ರಿಷಭ್ ತಿಳಿಸಿದ್ದಾರೆ.

‘ಕೋಚ್ ರಿಕಿ ಪಾಂಟಿಂಗ್ ಅವರ ಮಾರ್ಗದರ್ಶನ ಅಮೋಘವಾದದ್ದು. ಅವರು ತಂಡದಲ್ಲಿ ಹೊಸ ಚೈತನ್ಯ ತುಂಬಿದ್ದಾರೆ. ಅವರ ಸಾಧನೆ ಮತ್ತು ಅನುಭವಗಳು ನಮ್ಮ ಆಟಗಾರರ ಕೌಶಲವನ್ನು ಉತ್ತಮಗೊಳಿಸಲು ನೆರವಾಗುತ್ತಿವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT