ಶುಕ್ರವಾರ, ಆಗಸ್ಟ್ 23, 2019
22 °C

ಲಡಾಕ್ ಆಟಗಾರರಿಗೆ ಜಮ್ಮು–ಕಾಶ್ಮೀರ ತಂಡದಲ್ಲಿ ಅವಕಾಶ

Published:
Updated:
Prajavani

ನವದೆಹಲಿ (ಪಿಟಿಐ): ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾಗಿರುವ ಲಡಾಕ್ ನಲ್ಲಿರುವ ಕ್ರಿಕೆಟ್ ಆಟಗಾರರು ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡಗಳಲ್ಲಿ ಆಡಲಿ ಎಂದು ಬಿಸಿಸಿಐನ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದುಗೊಳಿಸಿ ಲಡಾಕ್ ಮತ್ತು ಜಮ್ಮು–ಕಾಶ್ಮೀರವನ್ನು  ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಿತ್ತು.

‘ಸರ್ಕಾರವು ಇದೀಗ ಈ ಘೋಷಣೆ ಮಾಡಿದೆ. ಲಡಾಕ್‌ಗೆ ಪ್ರತ್ಯೇಕ ಕ್ರಿಕೆಟ್ ಸಂಸ್ಥೆಯನ್ನು ರಚಿಸುವ ಯೋಚನೆ ಸದ್ಯಕ್ಕೆ ಇಲ್ಲ. ಇನ್ನು ಮುಂದೆಯೂ ಆ ಪ್ರದೇಶದ ಆಗಾರರು ಕಣಿವೆ ರಾಜ್ಯದ ತಂಡವನ್ನೇ ಪ್ರತಿನಿಧಿಸುತ್ತಾರೆ’ ಎಂದು ರೈ ಹೇಳಿದ್ದಾರೆ.

‘ಪುದುಚೇರಿ ಮಾದರಿಯಲ್ಲಿ ಮತದಾನದ ಹಕ್ಕನ್ನು ಲಡಾಕ್‌ಗೆ ನೀಡಬೇಕೋ ಬೇಡವೋ ಎಂಬುದರ ಕುರಿತು ಸದ್ಯ ಏನೂ ಚರ್ಚೆಯಾಗಿಲ್ಲ. ಚಂಡೀಗಡ ಮಾದರಿಯಲ್ಲಿ ಲಡಾಕ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿದೆ. ಚಂಡೀಗಡಕ್ಕೆ ಯಾವುದೇ ಪ್ರತ್ಯೇಕ ಸಂಸ್ಥೆಯಿಲ್ಲ. ಅಲ್ಲಿಯ ಆಟಗಾರರು ಪಂಜಾಬ್ ಅಥವಾ ಹರಿಯಾಣ ರಾಜ್ಯ ತಂಡಗಳನ್ನು ಪ್ರತಿನಿಧಿಸುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕೇಂದ್ರವು ಪ್ರಕಟಿಸಿರುವ ನಿರ್ಧಾರದಿಂದ ಅಲ್ಲಿಯ ಕ್ರಿಕೆಟ್‌ಗೆ ಯಾವುದೇ ರೀತಿಯ ಅಡೆತಡೆಯಾಗುವುದಿಲ್ಲ. ಈ ಬಾರಿ ಅಲ್ಲಿ ನಡೆಯಬೇಕಿರುವ ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳು ನಿರಾತಂಕವಾಗಿ ಆಯೋಜನೆಗೊಳ್ಳುವ ವಿಶ್ವಾಸ ಇದೆ. ಇದುವರೆಗೂ  ಪರ್ಯಾಯ ತವರು ತಾಣದ ಕುರಿತು ಚರ್ಚೆಯೂ ನಡೆದಿಲ್ಲ’ ಎಂದು ರೈ ಹೇಳಿದ್ದಾರೆ.

ಕಣಿವೆ ರಾಜ್ಯದ ಸೀನಿಯರ್ ತಂಡದ ತರಬೇತಿ ಶಿಬಿರವನ್ನು ಈಚೆಗೆ ಭದ್ರತೆಯ ಕಾರಣಕ್ಕಾಗಿ ಅರ್ಧಕ್ಕೆ ಮೊಟಕುಗೊಳಿಸಿ ಆಟಗಾರರು, ನೆರವು ಸಿಬ್ಬಂದಿಯನ್ನು ಮರಳಿ ಅವರ ಊರುಗಳಿಗೆ ಕಳಿಸಲಾಗಿತ್ತು.

Post Comments (+)