ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs IND 1st ODI: ಫಿಂಚ್, ಸ್ಮಿತ್ ಪ್ರತಾಪ; ಕೊಹ್ಲಿ ಬಳಗಕ್ಕೆ ಸೋಲಿನ ತಾಪ

Last Updated 27 ನವೆಂಬರ್ 2020, 16:06 IST
ಅಕ್ಷರ ಗಾತ್ರ

ಸಿಡ್ನಿ: ಡೇವಿಡ್ ವಾರ್ನರ್ ಮತ್ತು ಸ್ಟಿವನ್ ಸ್ಮಿತ್ ಆಸ್ಟ್ರೇಲಿಯಾ ತಂಡಕ್ಕೆ ಮರಳಿ ಬಂದಿರುವುದರ ಪರಿಣಾಮ ಏನೆಂಬುದು ಶುಕ್ರವಾರ ಭಾರತ ತಂಡದ ಅರಿವಿಗೆ ಬಂದಿತು.

ಅವರಿಬ್ಬರ ಆಟದೊಂದಿಗೆ ನಾಯಕ ಆ್ಯರನ್ ಫಿಂಚ್ ಶತಕದ ಪ್ರತಾಪವೂ ಸೇರಿ, ವಿರಾಟ್ ಕೊಹ್ಲಿ ಬಳಗವು ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಸೋಲಿನ ತಾಪ ಅನುಭವಿಸಬೇಕಾಯಿತು. ಕೊರೊನಾ ಕಾಲಘಟ್ಟದಲ್ಲಿ ಭಾರತ ತಂಡವು ಕಣಕ್ಕಿಳಿದ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿಯೇ ನಿರಾಶೆ ಅನುಭವಿಸಿತು.

ನಾಯಕ ಆ್ಯರನ್ ಫಿಂಚ್ (114; 124ಎಸೆತ, 9ಬೌಂಡರಿ 2ಸಿಕ್ಸರ್) ಮತ್ತು ಸ್ಟೀವನ್ ಸ್ಮಿತ್ (105; 66ಎ, 11ಬೌಂ, 4ಸಿ) ಅವರಿಬ್ಬರ ಶತಕದೊಂದಿಗೆ ವಾರ್ನರ್ ಅರ್ಧಶತಕವೂ ಸೇರಿತು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 374 ರನ್‌ ಗಳಿಸಿತು. ಅದರಲ್ಲಿ ವಾರ್ನರ್ ಮತ್ತು ಫಿಂಚ್ ಮೊದಲ ವಿಕೆಟ್‌ಗೆ ಗಳಿಸಿದ 158 ರನ್ ಹಾಗೂ ಎರಡನೇ ವಿಕೆಟ್ ಜೊತೆಯಾಟದಲ್ಲಿ ಫಿಂಚ್ ಮತ್ತು ಸ್ಮಿತ್ ಗಳಿಸಿದ 105 ರನ್‌ಗಳು ಬೃಹತ್ ಮೊತ್ತ ಗಳಿಕೆಗೆ ಕಾರಣವಾದವು.

ಅದಕ್ಕುತ್ತರವಾಗಿ ಭಾರತ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 308 ರನ್ ಗಳಿಸಲಷ್ಟೇ ಶಕ್ತವಾಯಿತು. ಶಿಖರ್ ಧವನ್ (74; 86ಎ) ಮತ್ತು ಅಬ್ಬರದ ಆಟವಾಡಿದ ಹಾರ್ದಿಕ್ ಪಾಂಡ್ಯ (90; 76ಎ) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಶಿಖರ್ ಧವನ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ (22; 19ಎ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 53 ರನ್ ಗಳಿಸಿದರು. ಆದರೆ ನಂತರದ ಹಂತದಲ್ಲಿ ದೊಡ್ಡ ಮೊತ್ತದ ಪಾಲುದಾರಿಕೆ ಆಟಗಳು ದಾಖಲಾಗಲಿಲ್ಲ. ವಿರಾಟ್ ಕೊಹ್ಲಿ ಕೇವಲ 21 ರನ್ ಗಳಿಸಿ ನಿರ್ಗಮಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೆ.ಎಲ್. ರಾಹುಲ್ 12 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಒಂದಂಕಿ ಮಾತ್ರ ದಾಖಲಿಸಿದರು.

ಆದರೆ, ಹಾರ್ದಿಕ್ ಪಾಂಡ್ಯ ಮಾತ್ರ ಆತಿಥೇಯ ತಂಡದ ಬೌಲರ್‌ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು. ಇತ್ತೀಚೆಗೆ ಐಪಿಎಲ್‌ನಲ್ಲಿ ಆಡಿದ್ದಂತಹ ಆಟವನ್ನೇ ಇಲ್ಲಿಯೂ ತೋರಿಸಿದರು. ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ ಹತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಹಾರ್ದಿಕ್ ಕ್ರೀಸ್‌ಗೆ ಬಂದಾಗ ಭಾರತದ ಮೊತ್ತವು 101 ರನ್‌ಗಳಿಗೆ ನಾಲ್ಕು ವಿಕೆಟ್‌ಗಳಾಗಿತ್ತು.

ಶಿಖರ್ ಜೊತೆಗೂಡಿದ ಹಾರ್ದಿಕ್ ಐದನೇ ವಿಕೆಟ್ ಜೊತೆಯಾಟದಲ್ಲಿ128 ರನ್‌ಗಳನ್ನು ಸೇರಿಸಿದರು. ಶಿಖರ್ ಔಟಾದ ನಂತರವೂ ಹಾರ್ದಿಕ್‌ ಮತ್ತಷ್ಟು ಬಿರುಸಿನ ಆಟವಾಡಿದರು. ಅವರು 39ನೇ ಓವರ್‌ನಲ್ಲಿ ಔಟಾದ ನಂತರ ರವೀಂದ್ರ ಜಡೇಜ ಮತ್ತು ನವದೀಪ್ ಸೈನಿ ರನ್‌ ಗಳಿಕೆ ಹೆಚ್ಚಿಸಲು ಪ್ರಯತ್ನಿಸಿದರು.

ಆದರೆ, ಬೌಲರ್ ಜೋಶ್ ಹ್ಯಾಜಲ್‌ವುಡ್ ಮೂರು ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ನಾಲ್ಕು ವಿಕೆಟ್ ಪಡೆದು ಭಾರತದ ಗೆಲುವಿಗೆ ಅಡ್ಡಗಾಲು ಹಾಕಿದರು.

ಆಸ್ಟ್ರೇಲಿಯಾ ಬೌಲರ್‌ಗಳು ಮಹತ್ವದ ಘಟ್ಟಗಳಲ್ಲಿ ಜೊತೆಯಾಟಗಳನ್ನು ಮುರಿದರು. ಆದರೆ ಅಂತಹ ಕೆಲಸವು ಭಾರತದ ಬೌಲರ್‌ಗಳಿಂದ ಆಗಲಿಲ್ಲ. ಅದರಿಂದಾಗಿಯೇ ಎರಡು ಶತಕದ ಜೊತೆಯಾಟಗಳು ದಾಖಲಾದವು. ಸಾಲದ್ದಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ (45; 19 ಎ) ಕೂಡ ಅಬ್ಬರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT